ಕುವೆಂಪು ವಿವಿಯಲ್ಲಿ ₹47 ಕೋಟಿ ಕೋತ ಬಜೆಟ್-ಮೌಲ್ಯ ಮಾಪನದಲ್ಲಿ ಅಕ್ರಮ ಶಂಕೆ-ಡಿಎಸ್ ಅರುಣ್- Kuvempu University suspects irregularities in budget-value measurement-DS Arun

 SUDDILIVE || SHIVAMOGGA

ಕುವೆಂಪು ವಿವಿಯಲ್ಲಿ ಕೋತ ಬಜೆಟ್-ಮೌಲ್ಯ ಮಾಪನದಲ್ಲಿ ಅಕ್ರಮ ಶಂಕೆ-ಡಿಎಸ್ ಅರುಣ್- Kuvempu University suspects irregularities in budget-value measurement-DS Arun   

Kuvempu, university

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಆಡಳಿತಾತ್ಮಕ ವೈಫಲ್ಯ, ಆರ್ಥಿಕ ಸಂಕಷ್ಟ ಹಾಗೂ ಪಾರದರ್ಶಕತೆಯ ಕೊರತೆಯಿಂದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ (ಡಿಜಿಟಲ್ ವ್ಯಾಲ್ಯುವೇಷನ್) ವ್ಯವಸ್ಥೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆರೋಪಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಆಡಳಿತ, ಬಜೆಟ್ ನಿರ್ವಹಣೆ, ಶುಲ್ಕ ಹೆಚ್ಚಳ ಹಾಗೂ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದರು.

ಆರು ತಿಂಗಳಿಂದ ನಿರಂತರ ಹೋರಾಟ

ಕಳೆದ ಆರು ತಿಂಗಳಿಂದ ಕುವೆಂಪು ವಿಶ್ವವಿದ್ಯಾಲಯದ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯನಾಗಿ ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದೇನೆ. ಹಿಂದಿನ ಕುಲಸಚಿವರ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪಗಳು, ಆಡಳಿತದ ವೈಫಲ್ಯಗಳು ಹಾಗೂ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿಯ ಬಗ್ಗೆ ಸದನದಲ್ಲಿಯೂ ಧ್ವನಿ ಎತ್ತಿದ್ದೇನೆ ಎಂದು ಹೇಳಿದರು.

ಕುಲಪತಿ ಶರತ್ ಅನಂತಮೂರ್ತಿ ಅವರಿಗೆ ಹಲವು ಬಾರಿ ಸಮಸ್ಯೆಗಳನ್ನು ಸರಿಪಡಿಸುವಂತೆ ಸಲಹೆ ನೀಡಿದ್ದರೂ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

₹47 ಕೋಟಿ ಕೊರತೆ ಬಜೆಟ್

ಈ ವರ್ಷದ ವಿಶ್ವವಿದ್ಯಾಲಯದ ಬಜೆಟ್ ಪರಿಶೀಲಿಸಿದಾಗ ಸುಮಾರು ₹47 ಕೋಟಿ ಕೊರತೆ (ಡೆಫಿಸಿಟ್) ಬಜೆಟ್ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿಶ್ವವಿದ್ಯಾಲಯದ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

30–35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೂ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಸಮಯಕ್ಕೆ ನೀಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವವಿದ್ಯಾಲಯ ಸ್ವಾವಲಂಬಿಯಾಗಬೇಕಾದರೆ ಆದಾಯದ ಮೂಲಗಳನ್ನು ಹೆಚ್ಚಿಸಿ, ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳ ಮೇಲೆ ಶುಲ್ಕದ ಹೊರೆ

ಆರ್ಥಿಕ ಕೊರತೆಯನ್ನು ಸರಿದೂಗಿಸಲು ವಿದ್ಯಾರ್ಥಿಗಳ ಮೇಲೆಯೇ ಹೆಚ್ಚುವರಿ ಶುಲ್ಕದ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಪರೀಕ್ಷಾ ಶುಲ್ಕ ಹಾಗೂ ಕ್ರೀಡಾ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಹಿಂದೆ ಕ್ರೀಡಾ ಚಟುವಟಿಕೆಗಳಿಗಾಗಿ ಸಂಗ್ರಹಿಸಲಾಗುತ್ತಿದ್ದ ಹಣದಲ್ಲಿ ಅಲ್ಪ ಪ್ರಮಾಣದ ಹಣ ಮಾತ್ರ ಕ್ರೀಡೆಗೆ ಬಳಸಲಾಗುತ್ತಿತ್ತು. ಉಳಿದ ಮೊತ್ತವನ್ನು ಆಡಳಿತ ವೆಚ್ಚಗಳಿಗೆ ವರ್ಗಾಯಿಸಲಾಗುತ್ತಿತ್ತು. ಇದೀಗ ಕ್ರೀಡಾ ಶುಲ್ಕವನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಆ ಹಣವೂ ಆಡಳಿತ ವೆಚ್ಚಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮದ ಶಂಕೆ

ವಿಶ್ವವಿದ್ಯಾಲಯದಲ್ಲಿ ಜಾರಿಗೊಳಿಸಿರುವ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಕುರಿತು ಗಂಭೀರ ಅನುಮಾನಗಳಿವೆ ಎಂದು ಡಿ.ಎಸ್. ಅರುಣ್ ಹೇಳಿದರು.

ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಹೊರತುಪಡಿಸಿ ಬೇರೆ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇದನ್ನು ಜಾರಿಗೆ ತರಲು ಅಕಾಡೆಮಿಕ್ ಕೌನ್ಸಿಲ್ ಅನುಮೋದನೆ ಪಡೆದಿದೆಯೇ? ಟೆಂಡರ್ ಪ್ರಕ್ರಿಯೆ ನಡೆದಿದೆಯೇ? ಎಂಬ ಪ್ರಶ್ನೆಗಳಿಗೆ ಇದುವರೆಗೆ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಈ ಕುರಿತು ಮಾಹಿತಿ ಕೋರಿ ಹಾಗೂ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಒಂದು ತಿಂಗಳ ಹಿಂದೆಯೇ ಪತ್ರ ಬರೆದಿದ್ದರೂ ಅಗತ್ಯ ದಾಖಲೆಗಳನ್ನು ನೀಡಿಲ್ಲ ಎಂದರು.

ಸ್ಕ್ಯಾನಿಂಗ್‌ಗೆ ₹54? ಮೌಲ್ಯಮಾಪನಕ್ಕೆ ₹15?

ಒಂದು ಸೆಮಿಸ್ಟರ್‌ನಲ್ಲಿ ಸುಮಾರು 2.80 ಲಕ್ಷ ಉತ್ತರ ಪತ್ರಿಕೆಗಳು ಮೌಲ್ಯಮಾಪನಕ್ಕೆ ಬರುತ್ತವೆ. ಒಬ್ಬ ಉಪನ್ಯಾಸಕರಿಗೆ ಒಂದು ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಸರಾಸರಿ ₹15 ನೀಡಲಾಗುತ್ತದೆ. ಭತ್ಯೆ ಸೇರಿಸಿದರೂ ಒಟ್ಟು ವೆಚ್ಚ ₹20ರಿಂದ ₹22ರೊಳಗೆ ಇರುತ್ತದೆ.

ಆದರೆ, ಕೇವಲ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡಲು ಒಂದಕ್ಕೆ ₹54 ಪಾವತಿಸಲಾಗುತ್ತಿದೆ. ಇದು ಅಸಹಜ ವೆಚ್ಚವಾಗಿದ್ದು, ಇದರಲ್ಲಿ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತದೆ ಎಂದು ಆರೋಪಿಸಿದರು.

ಸ್ಕ್ಯಾನಿಂಗ್ ವೆಚ್ಚದಲ್ಲಿ ಅಂಕಗಳನ್ನು ತಂತ್ರಾಂಶಕ್ಕೆ ದಾಖಲಿಸುವ ವೆಚ್ಚವೂ ಸೇರಿದೆ ಎಂದು ಹೇಳಲಾಗುತ್ತಿದೆ. ಆದರೆ ಅಂಕಗಳ ದಾಖಲಾತಿ ಸಂಪೂರ್ಣ ತಂತ್ರಾಂಶದ ಮೂಲಕವೇ ನಡೆಯುವುದರಿಂದ ಇಷ್ಟು ಹೆಚ್ಚಿನ ವೆಚ್ಚಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದರು.

ಮೌಲ್ಯಮಾಪನದ ವಿಶ್ವಾಸಾರ್ಹತೆ ಪ್ರಶ್ನೆ

ಡಿಜಿಟಲ್ ವ್ಯವಸ್ಥೆಯಲ್ಲಿ ಉಪನ್ಯಾಸಕರು ಒಟಿಪಿ (OTP) ಮೂಲಕ ಎಲ್ಲಿಂದ ಬೇಕಾದರೂ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಇದರಿಂದ ಮೌಲ್ಯಮಾಪನದ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಹೇಳಿದರು.

ಡಿಜಿಟಲ್ ವ್ಯವಸ್ಥೆ ಜಾರಿಯಿಂದ ವೆಚ್ಚ ಕಡಿಮೆಯಾಗಬೇಕಿತ್ತು. ಆದರೆ ವೆಚ್ಚ ಹಲವು ಪಟ್ಟು ಹೆಚ್ಚಾಗಿದೆ. ಸಂಬಂಧಿಸಿದ ಕಂಪನಿಗೆ ಮಾಡಿದ ಪಾವತಿಗಳ ದಾಖಲೆಗಳು ನನ್ನ ಬಳಿ ಇವೆ. ಅಗತ್ಯವಿದ್ದರೆ ಸೂಕ್ತ ವೇದಿಕೆಯಲ್ಲಿ ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

'ವೈಫಲ್ಯ ಕುಲಪತಿಯದ್ದೇ'

ಪತ್ರಕರ್ತರೊಬ್ಬರು "ಇದು ಯಾರ ವೈಫಲ್ಯ?" ಎಂದು ಪ್ರಶ್ನಿಸಿದಾಗ, "ಇದು ಕುಲಪತಿಯ ವೈಫಲ್ಯ" ಎಂದು ಡಿ.ಎಸ್. ಅರುಣ್ ನೇರವಾಗಿ ಉತ್ತರಿಸಿದರು.

ಕೆಎಸ್‌ಸಿಎ ಕ್ರಿಕೆಟ್ ಕುರಿತು ಮಾಹಿತಿ

ಪತ್ರಿಕಾಗೋಷ್ಠಿಯ ಮತ್ತೊಂದು ಭಾಗದಲ್ಲಿ ಕೆಎಸ್‌ಸಿಎ ವಲಯದ ಕ್ರಿಕೆಟ್ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಡಿ.ಎಸ್. ಅರುಣ್, ಯುವ ಪ್ರತಿಭೆಗಳಿಗೆ ಪಾರದರ್ಶಕ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿಯೊಬ್ಬ ಆಟಗಾರನಿಗೂ ವಿಶಿಷ್ಟ ಗುರುತು ಸಂಖ್ಯೆ (UID) ನೀಡಲಾಗುತ್ತಿದ್ದು, ಅವರ ಪ್ರದರ್ಶನದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಲಾಗುತ್ತಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪ್ರಭಾವ ಅಥವಾ ಶಿಫಾರಸಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೊಸ ಕ್ಲಬ್‌ಗಳಿಗೆ ಅವಕಾಶ ಇಲ್ಲ

ರಾಜ್ಯದಲ್ಲಿ ಈಗಾಗಲೇ ಸುಮಾರು 350 ಕ್ರಿಕೆಟ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ಲೀಗ್ ಪಂದ್ಯಗಳಿಗೆ ಬೇಕಾದಷ್ಟು ಆಟಗಾರರೇ ಸಿಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಹೊಸ ಕ್ಲಬ್‌ಗಳಿಗೆ ಅವಕಾಶ ನೀಡುವ ಯೋಚನೆ ಇಲ್ಲ ಎಂದು ತಿಳಿಸಿದರು.

ಹೆಚ್ಚು ಸ್ಪರ್ಧೆ ಇದ್ದರೆ ಮಾತ್ರ ಉತ್ತಮ ಪ್ರತಿಭೆಗಳು ಹೊರಹೊಮ್ಮುತ್ತವೆ. ಆದ್ದರಿಂದ ಈಗಿರುವ ಕ್ಲಬ್‌ಗಳಲ್ಲಿಯೇ ಹೆಚ್ಚು ಯುವಕರು ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಶಿವಮೊಗ್ಗ ಯೋಧಾಸ್ ತಂಡಕ್ಕೆ ಸಿದ್ಧತೆ

ಜುಲೈ 28ರಂದು ಕೆಎಸ್‌ಸಿಎ ಅಧಿಕಾರಿಗಳು, ಮಾಜಿ ಕ್ರಿಕೆಟಿಗರು ಹಾಗೂ ತರಬೇತುದಾರರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಕಾಮೆಂಟೇಟರ್ ಶ್ರೀನಿವಾಸ ಮೂರ್ತಿ ತಂಡದ ಮೆಂಟರ್ ಆಗಿ ಹಾಗೂ ಮಾಜಿ ಕ್ರಿಕೆಟಿಗ ಭರತ್ ಚಿಪ್ಳಿ ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶಿವಮೊಗ್ಗ ಯೋಧಾಸ್ ತಂಡಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಹಪ್ರಮುಖ ಎನ್. ಮಂಜುನಾಥ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ನಾವಿಕ ಮಂಜು ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kuvempu University suspects irregularities in budget-value measurement-DS Arun

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close