ಮಲೆನಾಡಿನ ರೈತರ ಭೂಮಿ ಹಕ್ಕು ಸಮಸ್ಯೆ: ಸಿಎಂ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸುವಂತೆ ಒತ್ತಾಯ-Land rights issue of farmers in Malnad: Demand for an emergency meeting chaired by the CM

 SUDDILIVE || SHIVAMOGGA

ಮಲೆನಾಡಿನ ರೈತರ ಭೂಮಿ ಹಕ್ಕು ಸಮಸ್ಯೆ: ಸಿಎಂ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸುವಂತೆ ಒತ್ತಾಯ-Land rights issue of farmers in Malnad: Demand for an emergency meeting chaired by the CM   
Malnad, farmer

ಶಿವಮೊಗ್ಗ: ಮಲೆನಾಡಿನ ಎಲ್ಲ ಜಿಲ್ಲೆಗಳ ರೈತರ ಭೂಮಿ ಹಕ್ಕಿನ ಸಮಸ್ಯೆ ಗಂಭೀರವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕೂಡಲೇ ಸಭೆ ಕರೆದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮಲೆನಾಡು ಭಾಗದ ರೈತರ ಬಹುಕಾಲದ ಭೂಮಿ ಹಕ್ಕಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಲೆನಾಡು ರೈತರ ಭೂಮಿ ಸಮಸ್ಯೆಗಳ ಅಧ್ಯಯನಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದರು. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಪ್ರತಿನಿಧಿಗಳು ಆ ಸಮಿತಿಯಲ್ಲಿ ಇದ್ದರು. ತಾವೂ ಸಹ ಸಮಿತಿಯ ಸದಸ್ಯರಾಗಿದ್ದು, ಸಮಿತಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿತ್ತು. ಆದರೆ ವರದಿಯಲ್ಲಿನ ಶಿಫಾರಸುಗಳು ಇನ್ನೂ ಜಾರಿಗೆ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

1952, 1959 ಹಾಗೂ 1964ರ ಅವಧಿಯಲ್ಲಿ ಅರಣ್ಯ ಭೂಮಿಯನ್ನು ಸಾಗು ಮಾಡುತ್ತಿರುವ ಸಾವಿರಾರು ರೈತರು ಇಂದಿಗೂ ಹಕ್ಕುಪತ್ರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಲೆನಾಡಿನ ಲಕ್ಷಾಂತರ ಎಕರೆ ಭೂಮಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ಗೊಂದಲದಿಂದ ರೈತರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಸರ್ಕಾರ ರೈತರಿಗೆ ನ್ಯಾಯ ಒದಗಿಸಿ ಭೂಮಿ ಹಕ್ಕುಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Land rights issue of farmers in Malnad: Demand for an emergency meeting chaired by the CM   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close