ನಿಯಾಜ್ ಸಂಸ್ಥೆಯೇ ಫೇಕ್ -ಈಶ್ವರಪ್ಪ-Niaz organization itself is fake - Eshwarappa

 SUDDILIVE || SHIVAMOGGA

ನಿಯಾಜ್ ಸಂಸ್ಥೆಯೇ ಫೇಕ್ -ಈಶ್ವರಪ್ಪ-Niaz organization itself is fake - Eshwarappa    

Niyaz, esshwarappa

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಈ ಹಿಂದೆ ರಾಷ್ಟ್ರಭಕ್ತರ ಬಳಗ ಹೇಳಿತ್ತು. ಅದರಂತೆ ಈಗ ಕೆಪಿಸಿ ಸಂಸ್ಥೆ ನಿಯಾಜ್ ಸಂಸ್ಥೆಯ ಮೂಲಕ ಯೋಜನೆಗೆ ಗ್ರೀನ್ ಸಿಗ್ನ್ ಕೊಡಿಸಲು ಮುಂದಾಗಿದ್ದು ಇದು ಜಾರ್ಜ್ ಕುತಂತ್ರದಿಂದ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಸ್ಪಷ್ಟಪಡಿಸಿದರು.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ನೀಡಲು ನಿಯಾಜ್ ಸಂಸ್ಥೆಯಾವುದು? ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಪ್ರೇರಣೆಯಿಂದ ಕೆಪಿಸಿ ಅಧಿಕಾರಿಗಳು ಯೋಜನೆಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯೋಜನೆ ಕುರಿತು ಈಗಾಗಲೇ ಪ್ರಣೀತಾ ಪೌಲ್ ಹಾಗೂ ಡಾ. ಹೆಚ್.ಎಸ್. ಸಿಂಗ್ ಅವರ ವರದಿಗಳು ಬಂದಿದ್ದು, ಆ ವರದಿಗಳಲ್ಲಿ ಯೋಜನೆಗೆ ಅವಕಾಶ ನೀಡಬಾರದು ಎಂದು ಉಲ್ಲೇಖಿಸಲಾಗಿದೆ. ಆದರೆ ಆ ವರದಿಗಳನ್ನು ಕಡೆಗಣಿಸಿ, 'ನಿಯಾಸ್' ಸಂಸ್ಥೆಯ ವರದಿಯನ್ನು ಮುಂದಿಟ್ಟುಕೊಂಡು ಯೋಜನೆಗೆ ಬೆಂಬಲ ದೊರೆತಂತೆ ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.

ಸಾಧು-ಸಂತರು, ಪರಿಸರವಾದಿಗಳು ಹಾಗೂ ಸ್ಥಳೀಯ ನಾಗರಿಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಮಾರು 6,500 ಜನರು 325 ಬಸ್‌ಗಳಲ್ಲಿ ಕೆಪಿಸಿ ಕಚೇರಿ ಮುಂದೆ ಧರಣಿ ನಡೆಸಿದ್ದು, 76 ಸಾವಿರಕ್ಕೂ ಹೆಚ್ಚು ಜನರು ಯೋಜನೆ ವಿರೋಧಿಸಿ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರ ಅಭಿಪ್ರಾಯ ಪಡೆಯದೆ ಯಾವುದೇ ವರದಿ ನೀಡಿರುವುದು ಪ್ರಶ್ನಾರ್ಹ ಎಂದು ಈಶ್ವರಪ್ಪ ಹೇಳಿದರು.

ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ ಅವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ತರಲಾಗುವುದು ಎಂದು ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಡಿಪಿಆರ್ ಕೂಡ ಸಿದ್ಧವಾಗದ ಹಂತದಲ್ಲಿ ಅಂತಹ ಹೇಳಿಕೆ ನೀಡಲು ಅವರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು.

ಯೋಜನೆಗೆ ಸಂಬಂಧಿಸಿದ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡದೇ ತ್ವರಿತವಾಗಿ ಅನುಮೋದನೆ ನೀಡಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೆಪಿಸಿ ಮೇಲೆ ಯಾರ ಒತ್ತಡವಿದೆ ಎಂಬುದು ಸ್ಪಷ್ಟವಾಗಬೇಕು ಎಂದು ಆಗ್ರಹಿಸಿದರು.

ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಲು ಅವಕಾಶ ನೀಡುವುದಿಲ್ಲ. ಸ್ಥಳೀಯರ ಅಭಿಪ್ರಾಯ, ಪರಿಸರ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

Niaz organization itself is fake - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close