ಎಸ್‌ಐಆರ್ ಸಹಾಯ ಕೇಂದ್ರಗಳ ಬಗ್ಗೆ ರಾಜಕೀಯ ಸಂಶಯ ಬೇಡ; ಧರ್ಮದ ಆಧಾರದ ಮೇಲೆ ವಿಭಜನೆ ಸರಿಯಲ್ಲ: ಮುಸ್ಲಿಂ ಸಂಘಟನೆಗಳ ಆಗ್ರಹ-No political suspicions about SIR help centers; Division on the basis of religion is not right: Muslim organizations demand

 SUDDILIVE || SHIVAMOGGA

ಎಸ್‌ಐಆರ್ ಸಹಾಯ ಕೇಂದ್ರಗಳ ಬಗ್ಗೆ ರಾಜಕೀಯ ಸಂಶಯ ಬೇಡ; ಧರ್ಮದ ಆಧಾರದ ಮೇಲೆ ವಿಭಜನೆ ಸರಿಯಲ್ಲ: ಮುಸ್ಲಿಂ ಸಂಘಟನೆಗಳ ಆಗ್ರಹ-No political suspicions about SIR help centers; Division on the basis of religion is not right: Muslim organizations demand   

Muslim, sir

ಶಿವಮೊಗ್ಗ: ಭಾರತದ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳು ಸ್ಥಾಪಿಸಿರುವ ಸಹಾಯ ಕೇಂದ್ರಗಳನ್ನು ರಾಜಕೀಯ ಅಥವಾ ಧರ್ಮದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆ ಹಾಗೂ ಶಿವಮೊಗ್ಗದ ಪೀಸ್ ಆರ್ಗನೈಸೇಷನ್ ಆಗ್ರಹಿಸಿವೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ರಿಯಾಜ್ ಅಹ್ಮದ್, ಚುನಾವಣಾ ಆಯೋಗವು ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಶ್ಲಾಘನೀಯವಾದದ್ದು. ಆದರೆ, ಈ ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಬಿಎಲ್‌ಒ (BLO) ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಅನೇಕ ಬಿಎಲ್‌ಒ ಅಧಿಕಾರಿಗಳಿಗೆ ಅರ್ಜಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡುವ ಬಗ್ಗೆ ಅಗತ್ಯ ಮಾಹಿತಿ ಇಲ್ಲದಿರುವುದರಿಂದ ಸಾರ್ವಜನಿಕರು ಅನಗತ್ಯ ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ಅರ್ಹ ಮತದಾರರು ತಮ್ಮ ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ನಾಗರಿಕ ಸಮಾಜದ ಸಂಘಟನೆಗಳು ಎಸ್‌ಐಆರ್ ಸಹಾಯ ಕೇಂದ್ರಗಳನ್ನು ಆರಂಭಿಸಿ ಸಾರ್ವಜನಿಕರಿಗೆ ಉಚಿತ ಮಾರ್ಗದರ್ಶನ ನೀಡುತ್ತಿವೆ. ಮತದಾರರಿಗೆ ಅರ್ಜಿ ಭರ್ತಿ ಮಾಡಲು ನೆರವು ನೀಡುವುದು ಹಾಗೂ ಸರಿಯಾದ ಮಾಹಿತಿ ಒದಗಿಸುವುದು ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಗುಣವಾದ ಸಾರ್ವಜನಿಕ ಸೇವೆಯಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಗಳನ್ನು ಸಂಘಟನೆಗಳು ಆಕ್ಷೇಪಿಸಿವೆ. ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ಸಹಾಯ ಕೇಂದ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದು ಸೂಕ್ತವಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಯಾವುದೇ ಹೇಳಿಕೆ ನೀಡುವ ಮೊದಲು ನಿಖರ ಮಾಹಿತಿ ಹಾಗೂ ಪರಿಶೀಲಿತ ವಾಸ್ತವಾಂಶಗಳನ್ನು ಆಧಾರವಾಗಿಟ್ಟುಕೊಳ್ಳಬೇಕು ಎಂದು ಒತ್ತಾಯಿಸಿದರು.

ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಿರ್ದಿಷ್ಟ ಸಮುದಾಯ ಅಥವಾ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸುವುದು ಸಮಾಜದಲ್ಲಿ ಅನಗತ್ಯ ಗೊಂದಲ ಮತ್ತು ವಿಭಜನೆಗೆ ಕಾರಣವಾಗಬಹುದು. ಒಂದು ಸಮುದಾಯ ನಡೆಸುವ ಸಹಾಯ ಕೇಂದ್ರವನ್ನು ಸಾರ್ವಜನಿಕ ಸೇವೆಯಾಗಿ ಪರಿಗಣಿಸಿ, ಮತ್ತೊಂದು ಸಮುದಾಯ ನಡೆಸುವ ಕೇಂದ್ರವನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಭಾರತದ ಸಂವಿಧಾನದ ಸಮಾನತೆ ಹಾಗೂ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟವು.

ಪ್ರತಿಯೊಬ್ಬ ಅರ್ಹ ಭಾರತೀಯನ ಮತವೂ ಅಮೂಲ್ಯವಾಗಿದ್ದು, ಪ್ರಜಾಪ್ರಭುತ್ವದ ರಕ್ಷಣೆ ಯಾವುದೇ ಒಂದು ಪಕ್ಷ ಅಥವಾ ಸಮುದಾಯದ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹೊಣೆಯಾಗಿದೆ. ಆದ್ದರಿಂದ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಧರ್ಮ, ಜಾತಿ ಅಥವಾ ರಾಜಕೀಯ ದೃಷ್ಟಿಕೋನದಿಂದ ನೋಡದೆ ಕೇವಲ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿಯೇ ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ರಿಯಾಜ್ ಅಹ್ಮದ್, ಪೀಸ್ ಆರ್ಗನೈಸೇಷನ್ ಪದಾಧಿಕಾರಿಗಳಾದ ಇಮ್ರಾನ್ ಖಾನ್ ಮಖ್ಸೂದ್, ಅನೀಸ್ ಇಕ್ಬಾಲ್, ಸಫೀ, ಸೈಫುಲ್ಲಾ, ಜಕಾವುಲ್ಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

No political suspicions about SIR help centers; Division on the basis of religion is not right: Muslim organizations demand  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close