20 ವರ್ಷಗಳಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಮಾಂಸಹಾರಕ್ಕೆ ನಿಷೇಧ! Non-vegetarian food has been banned in Morarji Residential School for 20 years!

SUDDILIVE || BHADRAVATHI

20 ವರ್ಷಗಳಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಮಾಂಸಹಾರಕ್ಕೆ ನಿಷೇಧ! Non-vegetarian food has been banned in Morarji Residential School for 20 years!   

Non, Vegetarian

ಮೂಢನಂಬಿಕೆ, ಸಂಪ್ರದಾಯ ಮತ್ತು ಮಕ್ಕಳ ಪೌಷ್ಠಿಕ ಹಕ್ಕಿನ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಘಟನೆ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದ (ಎಸ್‌ಸಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದ ಎರಡು ದಶಕಗಳಿಂದ ಮುಂದುವರಿದಿದೆ. ಶಾಲೆ ನಿರ್ಮಾಣವಾಗಿರುವ ಜಾಗದಲ್ಲಿ ಗ್ರಾಮದ ಗಡಿ ಕಲ್ಲುಗಳಿವೆ ಎಂಬ ನಂಬಿಕೆಯನ್ನು ಮುಂದಿಟ್ಟುಕೊಂಡು, ಸುಮಾರು 20 ವರ್ಷಗಳಿಂದ ವಸತಿ ಶಾಲೆಯಲ್ಲಿ ಮಾಂಸಾಹಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಇದರ ಪರಿಣಾಮವಾಗಿ, ತಮ್ಮ ಮಕ್ಕಳಿಗೆ ಚಿಕನ್ ಅಥವಾ ಇತರ ಮಾಂಸಾಹಾರ ತಿನ್ನಿಸಬೇಕಾದ ಪಾಲಕರು ಶಾಲೆಯ ಆವರಣದ ಹೊರಗೆ, ಹೊಲ-ಗದ್ದೆಗಳು, ತೋಟಗಳು ಅಥವಾ ಅರಣ್ಯದ ಅಂಚಿನಲ್ಲಿ ಕುಳಿತು ಊಟ ಮಾಡಿಸಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿದ್ದು, ಕೊಡೆ ಹಿಡಿದು ಮಕ್ಕಳಿಗೆ ಬಾಡೂಟ ತಿನ್ನಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಪ್ರತಿ ಭಾನುವಾರ ಪುನರಾವರ್ತನೆಯಾಗುವ ಸಂಕಷ್ಟ

ವಾರದ ಮೆನ್ಯೂ ಪ್ರಕಾರ ಮಾಂಸಾಹಾರ ಸಿಗದ ಕಾರಣ ಮಕ್ಕಳು ಭಾನುವಾರ ಪಾಲಕರ ಬಳಿ ಬಾಡೂಟದ ಬೇಡಿಕೆ ಇಡುತ್ತಾರೆ. ಆದರೆ ಶಾಲಾ ಆವರಣದಲ್ಲಿ ಮಾಂಸಾಹಾರಕ್ಕೆ ಅವಕಾಶ ಇಲ್ಲದ ಕಾರಣ ಪಾಲಕರು ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಊಟ ಮಾಡಿಸಬೇಕಾಗುತ್ತದೆ.

ದೂರದ ಊರುಗಳಾದ ಶಿಕಾರಿಪುರ, ಸೊರಬ, ಸಾಗರ ಸೇರಿದಂತೆ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳ ಪಾಲಕರಿಗೆ ಇದು ಇನ್ನಷ್ಟು ಕಷ್ಟಕರವಾಗಿದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಮಕ್ಕಳನ್ನು ಭೇಟಿ ಮಾಡುವ ಪಾಲಕರು ಸಹ ಶಾಲೆಯ ಹೊರಗಡೆಯೇ ಊಟ ಮಾಡಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಪಾಲಕರು–ಸಿಬ್ಬಂದಿ ನಡುವೆ ನಿತ್ಯದ ವಾಗ್ವಾದ

ಮಾಂಸಾಹಾರವನ್ನು ಶಾಲಾ ಆವರಣದೊಳಗೆ ತರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಸಿಬ್ಬಂದಿಗಳ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿದೆ. ಮಕ್ಕಳಿಗೆ ಶಾಲೆಯಲ್ಲಿ ಮೊಟ್ಟೆ ನೀಡಲಾಗುತ್ತಿದ್ದರೂ, ಸರ್ಕಾರದ ಮೆನ್ಯೂ ಪ್ರಕಾರ ದೊರೆಯಬೇಕಾದ ಮಾಂಸಾಹಾರ ಸಿಗುತ್ತಿಲ್ಲ ಎಂಬುದು ಪಾಲಕರ ಆಕ್ಷೇಪವಾಗಿದೆ.

ಹಾಸ್ಟೆಲ್ ನಿಂದ ಹೊರಗೆ ಮಾಂಸಹಾರ ತಿನ್ನುತ್ತಿರುವುದು


ಆರಂಭವಾದದ್ದು ದೇವಸ್ಥಾನದಿಂದ, ಮುಂದುವರಿದದ್ದು ಹೊಸ ಕಟ್ಟಡದಲ್ಲೂ

2006ರಲ್ಲಿ ಹಂಚಿನ ಸಿದ್ದಾಪುರದ ಸಿದ್ದೇಶ್ವರ ದೇವಸ್ಥಾನದ ಸಮೀಪದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಸತಿ ಶಾಲೆ ಆರಂಭಿಸಲಾಗಿತ್ತು. ದೇವಸ್ಥಾನದ ಸಮೀಪವಿದ್ದ ಕಾರಣ ಧಾರ್ಮಿಕ ನೆಪದಲ್ಲಿ ಮಾಂಸಾಹಾರ ನಿಷೇಧಿಸಲಾಗಿತ್ತು.

ನಂತರ ಗ್ರಾಮ ಮುಖಂಡರೊಬ್ಬರು ದಾನವಾಗಿ ನೀಡಿದ ಜಾಗದಲ್ಲಿ ಸಮಾಜ ಕಲ್ಯಾಣ ಇಲಾಖೆ 2012ರಲ್ಲಿ ಹೊಸ ಕಟ್ಟಡ ನಿರ್ಮಿಸಿತು. ಆದರೆ ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ನಂತರವೂ ಹಳೆಯ ನಿಯಮವೇ ಮುಂದುವರಿದಿದೆ.

ಶೆಡ್ ನಿರ್ಮಾಣದ ಮಾತು ವರ್ಷಗಳಿಂದ ಮಾತಾಗಿಯೇ ಉಳಿದಿದೆ

ಪ್ರತಿ ಬಾರಿ ಈ ವಿಷಯ ಚರ್ಚೆಗೆ ಬಂದಾಗ ಶಾಲೆಯ ಹೊರಭಾಗದಲ್ಲಿ ಬಾಡೂಟಕ್ಕಾಗಿ ಪ್ರತ್ಯೇಕ ಶೆಡ್ ನಿರ್ಮಿಸುವ ಪ್ರಸ್ತಾಪ ಮುನ್ನೆಲೆಗೆ ಬರುತ್ತದೆ. ಸ್ಥಳೀಯರಿಂದ ದೇಣಿಗೆಯನ್ನೂ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದ್ದರೂ, ಸ್ಥಳ ಗುರುತಿಸುವ ಹಂತವನ್ನೇ ದಾಟದೆ ಯೋಜನೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.

ಅಧಿಕಾರಿಗಳ ಪ್ರತಿಕ್ರಿಯೆ

"ವಸತಿ ಶಾಲೆಯಲ್ಲಿ ಮಾಂಸಾಹಾರ ನೀಡುವುದಕ್ಕೆ ಕೆಲ ಸ್ಥಳೀಯರ ವಿರೋಧವಿದೆ ಎನ್ನಲಾಗಿದೆ. ಅನೇಕರು ಈ ವಿಚಾರವಾಗಿ ನಮ್ಮೊಂದಿಗೆ ಚರ್ಚಿಸಿದ್ದಾರೆ. ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪ್ರಾಂಶುಪಾಲರೊಂದಿಗೆ ಚರ್ಚಿಸಿ ಹಲವು ವರ್ಷಗಳ ಸಮಸ್ಯೆಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು."

ಮಲ್ಲೇಶಪ್ಪ, ಜಿಲ್ಲಾ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ


"ಮೊದಲಿನಿಂದಲೂ ಶಾಲೆಯಲ್ಲಿ ಮಾಂಸಾಹಾರ ತಯಾರಿಸಿಲ್ಲ. ಪ್ರತಿ ಭಾನುವಾರ ಚಿಕನ್ ಬದಲಿಗೆ ಮೊಟ್ಟೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಹೊರಗೆ ಊಟ ಮಾಡಿಸುವುದು ಕಷ್ಟವಾಗುತ್ತಿರುವುದರಿಂದ ಶಾಲೆಯ ಹೊರಭಾಗದಲ್ಲಿ ಪ್ರತ್ಯೇಕ ಶೆಡ್ ನಿರ್ಮಾಣದ ಕುರಿತು ಸ್ಥಳೀಯರೊಂದಿಗೆ ಚರ್ಚಿಸಲಾಗಿದೆ."

ಎಂ.ಜಿ. ಗಣೇಶ್, ಪ್ರಾಂಶುಪಾಲರು

ಪಾಲಕರ ಅಸಮಾಧಾನ

"ಊಟದ ವಿಚಾರದಲ್ಲಿ ಮಕ್ಕಳ ಮೇಲೆ ಇಂತಹ ನಿರ್ಬಂಧ ಹೇರುವುದು ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. 'ನಾವು ತಿನ್ನುವುದಿಲ್ಲ, ನೀವು ತಿನ್ನಬಾರದು' ಎನ್ನುವುದು ಯಾವ ನ್ಯಾಯ? ಮೆನ್ಯೂ ಪ್ರಕಾರ ಮಕ್ಕಳಿಗೆ ಮಾಂಸಾಹಾರ ನೀಡಬೇಕು. ಹಿಂದೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡಿದ್ದು ಮಾಂಸಾಹಾರ ನೀಡಿದ್ದಕ್ಕಾಗಿ ಅಲ್ಲ, ದಿನಸಿ ಅಕ್ರಮದ ಕಾರಣ."

ಜಯಪ್ಪ, ವಿದ್ಯಾರ್ಥಿಯ ಪಾಲಕ

ಗ್ರಾಮ ಮುಖಂಡರ ಅಭಿಪ್ರಾಯ

"ಮಕ್ಕಳಿಗೆ ಮಾಂಸಾಹಾರ ನೀಡಲು ಇಲಾಖೆ ಅನುದಾನ ನೀಡಿದರೂ ಬಳಸಿಕೊಳ್ಳುತ್ತಿಲ್ಲ. ಗ್ರಾಮದ ಗಡಿಯೊಳಗೆ ಮಾಂಸಾಹಾರ ಬಳಸಬಾರದು ಎನ್ನುವುದಾದರೆ ಇಡೀ ಗ್ರಾಮದಲ್ಲೇ ನಿಷೇಧಿಸಬೇಕು. ಮಕ್ಕಳಿಗೊಂದು ನ್ಯಾಯ, ಗ್ರಾಮಸ್ಥರಿಗೊಂದು ನ್ಯಾಯ ಸರಿಯಲ್ಲ. ಸ್ಥಳೀಯರು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು."

ರುದ್ರೇಶಪ್ಪ, ಗ್ರಾಮ ಮುಖಂಡ


 Non-vegetarian food has been banned in Morarji Residential School for 20 years!    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close