ಪೊಲೀಸ್ ದೌರ್ಜನ್ಯಕ್ಕೆ ದಯಾಮರಣ ನೀಡುವಂತೆ ಎಸ್ಟಿ ಕುಟುಂಬ ಮನವಿ- ST family appeals for euthanasia due to police brutality

SUDDILIVE || SHIKARIPURA

ಪೊಲೀಸ್ ದೌರ್ಜನ್ಯಕ್ಕೆ ದಯಾಮರಣ ನೀಡುವಂತೆ ಎಸ್ಟಿ ಕುಟುಂಬ ಮನವಿ- ST family appeals for euthanasia due to police brutality   

Euthanasia, appeal
ದಯಾಮರಣದ ಕುರಿತು ಮಂಜುನಾಥ್ ಬನ್ನೂರು ಮನವಿ


ಶಿವಮೊಗ್ಗ/ಶಿಕಾರಿಪುರ: ಪೊಲೀಸ್ ಅಧಿಕಾರಿಗಳ ನಿರಂತರ ಕಿರುಕುಳ, ದೌರ್ಜನ್ಯ ಮತ್ತು ಕರ್ತವ್ಯ ಲೋಪದಿಂದಾಗಿ ಬದುಕು ದುಸ್ತರವಾಗಿದೆ ಎಂದು ಆರೋಪಿಸಿರುವ ಶಿಕಾರಿಪುರ ತಾಲ್ಲೂಕಿನ ಪರಿಶಿಷ್ಟ ಪಂಗಡ (ಎಸ್.ಟಿ) ಸಮುದಾಯಕ್ಕೆ ಸೇರಿದ ಕುಟುಂಬವೊಂದು ನ್ಯಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ಮೊರೆ ಹೋಗಿದ್ದು, ನ್ಯಾಯ ದೊರೆಯದಿದ್ದರೆ ಕುಟುಂಬ ಸಮೇತ ದಯಾಮರಣಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ಶಿಕಾರಿಪುರ ತಾಲ್ಲೂಕಿನ ಕುಂಬಾರಗುಂಡಿ ಸಾಮಿಲ್ ಹಿಂಭಾಗದ ನಿವಾಸಿ, ಕೂಲಿ ಕಾರ್ಮಿಕರಾದ ರುಕ್ಮಿಣಮ್ಮ (39), ಅವರ ಪತಿ ಫಕೀರಪ್ಪ ಹಾಗೂ ಕುಟುಂಬದವರು ಶಿವಮೊಗ್ಗ ಪ್ರೆಸ್ ಕ್ಲಬ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ (ಸಿಪಿಐ) ಆರ್.ಆರ್. ಪಾಟೀಲ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಮೀನು ವಿವಾದದಿಂದ ಆರಂಭವಾದ ಸಂಘರ್ಷ

ಮನವಿಯಲ್ಲಿರುವ ವಿವರಗಳ ಪ್ರಕಾರ, ಶಿಕಾರಿಪುರ ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದ ಸರ್ವೆ ನಂ.45ರಲ್ಲಿರುವ ಸುಮಾರು ಎರಡು ಎಕರೆ ಬಗರ್ ಹುಕುಂ ಜಮೀನನ್ನು ರುಕ್ಮಿಣಮ್ಮ ಅವರ ತಂದೆ ದಿವಂಗತ ಚನ್ನಬಸಪ್ಪ ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿದ್ದರು. ತಂದೆಯ ನಿಧನದ ಬಳಿಕ ರುಕ್ಮಿಣಮ್ಮ ಹಾಗೂ ಕುಟುಂಬದವರು ಅದೇ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಕೃಷಿ ಚಟುವಟಿಕೆ ಮುಂದುವರಿಸಿದ್ದರು. ಸಾಗುವಳಿ ಚೀಟಿ ಪಡೆಯಲು ನಿಯಮಾನುಸಾರ ಫಾರಂ ನಂ.53 ಅಡಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದರೆ, ಇದೇ ಗ್ರಾಮದ ಎಲ್ಮಕ್ಕ ಎಂಬವರು ಆ ಜಮೀನು ತಮ್ಮದಾಗಿದೆ ಎಂದು ಹಕ್ಕು ಪ್ರತಿಪಾದಿಸಿ ತಕರಾರು ತೆಗೆದಿದ್ದು, ಈ ವಿವಾದದಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ಮಧ್ಯಪ್ರವೇಶಿಸಿ ಜಮೀನನ್ನು ಬಿಟ್ಟುಕೊಡುವಂತೆ ಕುಟುಂಬಕ್ಕೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.

"ನ್ಯಾಯಾಲಯದ ಆದೇಶವಿಲ್ಲದೆ ಗುಡಿಸಲು ತೆರವು"

ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನ್ಯಾಯಾಲಯದ ಯಾವುದೇ ಆದೇಶವಿಲ್ಲದೆ ಸಿಪಿಐ ಆರ್.ಆರ್. ಪಾಟೀಲ್ ನೇತೃತ್ವದ ಪೊಲೀಸ್ ತಂಡ, ಎದುರಾಳಿ ಪಕ್ಷದವರೊಂದಿಗೆ ಸೇರಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದೆ ಎಂದು ರುಕ್ಮಿಣಮ್ಮ ದೂರಿದ್ದಾರೆ.

ಈ ವೇಳೆ ತಮ್ಮ ಕುಟುಂಬದವರ ಮೇಲೆ ದೌರ್ಜನ್ಯ ನಡೆಸಿ, ಜಾತಿ ನಿಂದನೆ ಮಾಡಲಾಗಿದೆ. ಜೀವ ಬೆದರಿಕೆ ಹಾಕಿ, ತಾವು ವಾಸವಿದ್ದ ಗುಡಿಸಲನ್ನು ಕಿತ್ತುಹಾಕಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

"ವಿಡಿಯೋ ಡಿಲೀಟ್ ಮಾಡಿ ಸಾಕ್ಷ್ಯ ನಾಶ"

ಘಟನೆಯ ವೇಳೆ ನಡೆದ ಬೆಳವಣಿಗೆಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ರುಕ್ಮಿಣಮ್ಮ ಅವರ ಮಗ ಹಾಗೂ ಸೊಸೆಯಿಂದ ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ನಂತರ ಪೊಲೀಸ್ ಠಾಣೆಯಲ್ಲಿ ಆ ಮೊಬೈಲ್‌ಗಳಲ್ಲಿದ್ದ ವಿಡಿಯೋಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿ ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ಮನವಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.

"ನಮ್ಮ ದೂರಿಗೆ ಎಫ್‌ಐಆರ್ ಇಲ್ಲ, ಎದುರಾಳಿಗಳ ದೂರಿಗೆ ಪ್ರಕರಣ"

ತಾವು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸದೇ, ಎದುರಾಳಿಗಳು ನೀಡಿದ ಸುಳ್ಳು ದೂರಿನ ಮೇರೆಗೆ ತಮ್ಮ ಕುಟುಂಬದ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ರುಕ್ಮಿಣಮ್ಮ ಆರೋಪಿಸಿದ್ದಾರೆ.

ಇದರಿಂದ ಕುಟುಂಬದವರು ನ್ಯಾಯಾಲಯಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿರಂತರ ಮಾನಸಿಕ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

"ಜೀವ ಬೆದರಿಕೆ ಇದೆ, ಬದುಕಲು ಸಾಧ್ಯವಾಗುತ್ತಿಲ್ಲ"

ಪೊಲೀಸರ ವರ್ತನೆಯಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಎದುರಾಗಿದ್ದು, ಬದುಕು ಅಸಹನೀಯವಾಗಿದೆ ಎಂದು ಮನವಿಯಲ್ಲಿ ತಿಳಿಸಿರುವ ರುಕ್ಮಿಣಮ್ಮ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ನ್ಯಾಯ ದೊರೆಯದಿದ್ದರೆ, ತಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ದಾಖಲೆಗಳೊಂದಿಗೆ ಮನವಿ

ಕುಟುಂಬವು ಸಲ್ಲಿಸಿರುವ ಮನವಿಯೊಂದಿಗೆ ಘಟನೆಯ ವಿಡಿಯೋ ತುಣುಕುಗಳು ಇರುವುದಾಗಿ ಹೇಳಲಾದ ಪೆನ್ ಡ್ರೈವ್, ಜಾತಿ ಪ್ರಮಾಣ ಪತ್ರ, ಜಮೀನಿನ ದಾಖಲೆಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಲಗತ್ತಿಸಲಾಗಿದೆ.

ಈ ಆರೋಪಗಳ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದ್ದು, ಪ್ರಕರಣ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಧಿಕೃತ ತನಿಖೆಯ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

ST family appeals for euthanasia due to police brutality

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close