ನಕಲಿ ಗ್ರಾಮಲೆಕ್ಕಿಗನನ್ನ ಬಂಧಿಸಿದ ಶಿರಾಳಕೊಪ್ಪ ಪೊಲೀಸರು-Shiralakoppa police arrest fake village enumerator

 SUDDILIVE || SHIVAMOGGA

ನಕಲಿ ಗ್ರಾಮಲೆಕ್ಕಿಗನನ್ನ ಬಂಧಿಸಿದ ಶಿರಾಳಕೊಪ್ಪ ಪೊಲೀಸರು-Shiralakoppa police arrest fake village enumerator    
Shiralkoppa, police

ಶಿಕಾರಿಪುರ: ಗ್ರಾಮಲೆಕ್ಕಿಗನಂತೆ ನಟಿಸಿ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ತಾನು ಗ್ರಾಮಲೆಕ್ಕಿಗ ಎಂದು ಪರಿಚಯಿಸಿಕೊಂಡು ಸಾರ್ವಜನಿಕರ ವಿಶ್ವಾಸ ಗಳಿಸಿದ್ದ ರವಿಕುಮಾರ್ ತಂದೆ ಕಾಮಣ್ಣ, ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಡವಿಬಾವಿ ಗ್ರಾಮದ ನಿವಾಸಿಯಾಗಿದ್ದು, ವಿವಿಧ ಸರ್ಕಾರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಡುವುದಾಗಿ ಹೇಳಿ ಸಾರ್ವಜನಿಕರನ್ನು 2.16 ಲಕ್ಷ ರೂ ವಂಚಿಸಿದ್ದನೆಂದು ಆರೋಪಿಸಲಾಗಿದೆ.

ಆರೋಪಿ ಆಶ್ರಯ ಮನೆ, ಪ್ರಕೃತಿ ವಿಕೋಪ ಪರಿಹಾರ ಧನ, ವಿಧವಾ ವೇತನ, ಹೊಸ ಮನೆಗಳ ಮಂಜೂರಾತಿ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳನ್ನು ಶೀಘ್ರದಲ್ಲೇ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿ, ಅಧಿಕಾರಿಗಳೊಂದಿಗೆ ತನ್ನ ಸಂಪರ್ಕವಿದೆ ಎಂದು ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ.

ಪೊಲೀಸರ ತನಿಖೆಯಲ್ಲಿ, ದೂರುದಾರರಿಂದ ಹಂತ ಹಂತವಾಗಿ ಒಟ್ಟು ₹2.16 ಲಕ್ಷ ಹಣವನ್ನು ಪಡೆದು ಬಳಿಕ ಸಂಪರ್ಕ ಕಡಿತಗೊಳಿಸಿದ್ದಾನೆ ಎಂಬ ಆರೋಪವೂ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿರಾಳಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಶಾಂತ್ ಕುಮಾರ್ ಟಿ.ಬಿ. ಅವರ ನೇತೃತ್ವದ ತಂಡ, ಆರೋಪಿಯನ್ನು ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದಲ್ಲಿ ಪತ್ತೆಹಚ್ಚಿ ಬಂಧಿಸಿದೆ. ಬಳಿಕ ಆರೋಪಿಯನ್ನು ಶಿಕಾರಿಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಹಣ ಕೇಳುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಯಾವುದೇ ಸರ್ಕಾರಿ ಸೌಲಭ್ಯ ಅಥವಾ ಯೋಜನೆಗಾಗಿ ಹಣ ನೀಡುವ ಮೊದಲು ಸಂಬಂಧಿತ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆದು ದೃಢೀಕರಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Shiralakoppa police arrest fake village enumerator 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close