SUDDILIVE || SHIVAMOGGA
ಶಿವಮೊಗ್ಗದಲ್ಲಿ ಬಿಜೆಪಿ ಬರ ಅಧ್ಯಯನ ಸಮಿತಿ ಭೇಟಿ: ರೈತರ ಅಹವಾಲು ಸ್ವೀಕಾರ-Shivamogga BJP Drought Study Committee meets in Shivamogga: Farmers' demands accepted
ಶಿವಮೊಗ್ಗ, ಜು.30: ಶಾಸಕ ಸುನಿಲ್ ಕುಮಾರ್ ನೇತೃತ್ವದ ಬಿಜೆಪಿ ಬರ ಅಧ್ಯಯನ ಸಮಿತಿ ಗುರುವಾರ ಶಿವಮೊಗ್ಗ ಜಿಲ್ಲೆಯ ತ್ಯಾಜುವಳ್ಳಿ ಹಾಗೂ ಚಾಮೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿತು. ಬಳಿಕ ಗ್ರಾಮದ ಕೆರೆ ಹಾಗೂ ಬೆಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ಬರ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಿತು.
ಸಭೆಯಲ್ಲಿ ರೈತರು ಹಗಲಿನ ವೇಳೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಡ್ರಿಪ್ ನೀರಾವರಿ ನಿರ್ವಹಣೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ರಾತ್ರಿ ವೇಳೆಯಲ್ಲಿ ಮಾತ್ರ ವಿದ್ಯುತ್ ನೀಡುವುದರಿಂದ ಕಾಡುಪ್ರಾಣಿಗಳ ಹಾವಳಿ ಹಾಗೂ ಹಾವುಗಳ ಭಯದಿಂದ ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಹಾರನಹಳ್ಳಿ ಹೋಬಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ತೀವ್ರ ಕೊರತೆ ಉಂಟಾಗಿದ್ದು, ಕೆರೆಗಳು ಬರಿದಾಗಿವೆ ಎಂದು ರೈತರು ಮನವಿ ಮಾಡಿದರು. ಮೆಕ್ಕೆಜೋಳ, ಅಡಿಕೆ, ಶುಂಠಿ, ಜೋಳ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಗೌಡನಕೆರೆ ಏತ ನೀರಾವರಿ ಯೋಜನೆಯಡಿ ನೀರಿನ ಸಮರ್ಪಕ ಹಂಚಿಕೆ ಆಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಯೋಜನೆಯ ಪೈಪ್‌ಲೈನ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಹೆಚ್ಚಿನ ಕೆರೆಗಳಿಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಬರ ಅಧ್ಯಯನ ಸಮಿತಿ ಬೆಳೆ ಹಾನಿ, ನೀರಿನ ಸಮಸ್ಯೆ ಹಾಗೂ ರೈತರ ಸಂಕಷ್ಟವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಗಳ ಸ್ಥಿತಿ ಆತಂಕಕಾರಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆ ಕೊರತೆಯಿಂದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಅಧಿಕಾರಿಗಳಿಂದ ಮಳೆ ಪ್ರಮಾಣ, ಬೆಳೆ ಬಿತ್ತನೆ, ಬೆಳೆ ಹಾನಿ ಹಾಗೂ ರೋಗಬಾಧೆ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಸ್ಥಳ ಪರಿಶೀಲನೆಯೊಂದಿಗೆ ಸಮಗ್ರ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಆಗಸ್ಟ್ 13ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ರೈತರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಬರ ಅಧ್ಯಯನ ಸಮಿತಿ ಸದಸ್ಯರು, ವಿಧಾನ ಪರಿಷತ್ ಸದಸ್ಯ ಅರುಣ್, ಸ್ಥಳೀಯ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು. ಬಳಿಕ ಸಮಿತಿ ಸದಸ್ಯರು ತ್ಯಾಜುವಳ್ಳಿ ಗ್ರಾಮದ ಹೊಲಕ್ಕೆ ಮತ್ತು ತೋಟಕ್ಕೆ ಭೇಟಿ ನೀಡಿದರು. ಈ ವೇಳೆ ಊರಿನ ರೈತಜಗದೀಶ್ ತ್ಯಾಜುವಳ್ಳಿಯಲ್ಲಿ ಶೇ.70 ರಷ್ಟು ಮೆಕಗಕೆಜೋಳ ಉಳಿದ ಶೇಖಡವಾರು ಭತ್ತ ರಾಗಿ ಬೆಳೆಯುತ್ತೇವೆ. ಈಬಾರಿ ಮಳೆ ಅಭಾವದಿಂದ ಬಿತ್ತನೆ ನಡೆದಿಲ್ಲ. ನಾವು ಗುಳೆ ಹೋಗುವ ಸ್ಥಿತಿಯಿದೆ ಎಂದರು.


