ಸಿದ್ದರಾಮಯ್ಯ ಅವರು "ಬ್ರೇಕಿಂಗ್ ಮುಖ್ಯಮಂತ್ರಿ"-ಎಂಎಲ್‌ಸಿ ರಘು ಕೌಟಿಲ್ಯ ವ್ಯಂಗ್ಯ- Siddaramaiah is a "breaking chief minister" - MLC Raghu Kautilya sarcastically

 SUDDILIVE ||SHIVAMOGGA

ಸಿದ್ದರಾಮಯ್ಯ ಅವರು "ಬ್ರೇಕಿಂಗ್ ಮುಖ್ಯಮಂತ್ರಿ"-ಎಂಎಲ್‌ಸಿ ರಘು ಕೌಟಿಲ್ಯ ವ್ಯಂಗ್ಯ- Siddaramaiah is a "breaking chief minister" - MLC Raghu Kautilya sarcastically   

Raghu, Koutilya

ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ತಕ್ಷಣ ಬಿಡುಗಡೆ ಮಾಡಿ, ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಪರ ಇರುವುದಾಗಿ ಸಾಬೀತು ಪಡಿಸಲಿ ಹಾಗೂ ಮಾಜಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂಬುದನ್ನು ಸಾಬೀತುಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಮತ್ತು ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ವಂಚನೆ ಮಾಡಿದೆ ಎಂದು ಆರೋಪಿಸಿದರು.

ದೇವರಾಜ ಅರಸು ಅವರು  ನಿರಂತರ ಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಅವರು "ಬ್ರೇಕಿಂಗ್ ಮುಖ್ಯಮಂತ್ರಿ" ಎಂದು ವ್ಯಂಗ್ಯವಾಡಿದ ಅವರು, ಈ ಅವಧಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಯಾವುದೇ ಸಬಲತೆ, ಸೌಲಭ್ಯ, ಯೋಜನೆ ಅಥವಾ ಕಾರ್ಯಕ್ರಮಗಳನ್ನು ನೀಡದೇ ವಂಚಿಸಲಾಗಿದೆ ಎಂದು ಟೀಕಿಸಿದರು.

ಜಾತಿ ಗಣತಿಯ ಹೆಸರಿನಲ್ಲಿ ಜನರ "ಮೂಗಿಗೆ ತುಪ್ಪ ಸವರಿ", ಆಯೋಗ ಹಾಗೂ ಸಮೀಕ್ಷಾ ವರದಿಯನ್ನು ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ಪಾದರಕ್ಷೆಯಂತೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ಧವಾದ ವರದಿಯನ್ನು ಏಳು ವರ್ಷ ಅಧಿಕಾರದಲ್ಲಿದ್ದರೂ ಸಿದ್ದರಾಮಯ್ಯ ಸ್ವೀಕರಿಸಲಿಲ್ಲ. ವರದಿ ಜಾರಿಗೊಳಿಸುವುದು ಇರಲಿ, ಸ್ವೀಕರಿಸುವ ಮನಸ್ಸನ್ನೂ ಮಾಡಲಿಲ್ಲ. ಇದು ಪಲಾಯನವಾದ ಹಾಗೂ ಆತ್ಮವಂಚನೆಯಾಗಿದೆ ಎಂದು ದೂರಿದರು.

ರಾಹುಲ್ ಗಾಂಧಿ ಹೇಳಿದರೆಂದು ಕರ್ನಾಟಕದ ಆಯೋಗದ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ವರಿಷ್ಠ ವೇಣುಗೋಪಾಲ್ ಹೇಳಿಕೆ ನೀಡಿದ್ದು, ಆ ವರದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ಕಸದ ಬುಟ್ಟಿಗೆ ಹಾಕಿದಂತಾಗಿದೆ ಎಂದು ಟೀಕಿಸಿದರು.

ಹಿಂದುಳಿದವರ ಹೆಸರಿನಲ್ಲಿ ಸುಮಾರು 165 ಕೋಟಿ ರೂಪಾಯಿ ನೀರಿಗೆ ಹೋಮ ಮಾಡಲಾಗಿದೆ. ಬಳಿಕ ಮತ್ತಷ್ಟು ವೆಚ್ಚ ಸೇರಿ ಒಟ್ಟಾರೆ 600 ರಿಂದ 650 ಕೋಟಿ ರೂಪಾಯಿ ಜಾತಿ ಗಣತಿ ಹಾಗೂ ಸಾಮಾಜಿಕ ಸಮೀಕ್ಷೆಗೆ ಖರ್ಚಾಗಿದೆ ಎಂದು ಹೇಳಿದ ಅವರು, ಮೂರು ತಿಂಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿ ಸಮೀಕ್ಷೆ ಪೂರ್ಣಗೊಳಿಸುತ್ತೇವೆ ಎಂದು ನೀಡಿದ್ದ ಭರವಸೆ ಈಡೇರಲಿಲ್ಲ ಎಂದರು.

ಮೂರು ತಿಂಗಳು ಮಾತ್ರವಲ್ಲ, ಆರು ತಿಂಗಳು ಹಾಗೂ ಒಂದು ವರ್ಷ ಕಳೆದರೂ ಸಮೀಕ್ಷೆ ಪೂರ್ಣಗೊಂಡಿಲ್ಲ. ತಮ್ಮ ಮಾಹಿತಿಯ ಪ್ರಕಾರ ಸುಮಾರು ಒಂದು ಕೋಟಿ ಜನರ ಸಮೀಕ್ಷೆಯೇ ಆಗದೆ, ಅಪೂರ್ಣ ವರದಿಯಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆಯಾಗಬಹುದು ಎಂಬ ಆತಂಕದಿಂದ ವರದಿಯನ್ನು ಉದ್ದೇಶಪೂರ್ವಕವಾಗಿ ಸ್ವೀಕರಿಸಲಿಲ್ಲ. ದೆಹಲಿಯಿಂದ ರಾಜೀನಾಮೆ ನೀಡುವಂತೆ ಸೂಚನೆ ಬಂದ ನಂತರವೇ ತರಾತುರಿಯಲ್ಲಿ ವರದಿಯನ್ನು ತರಿಸಿಕೊಳ್ಳಲಾಯಿತು. ಇದರಿಂದ ವರದಿ ಬಹಳ ಹಿಂದೆಯೇ ಸಿದ್ಧವಾಗಿದ್ದರೂ ಅದನ್ನು ಸ್ವೀಕರಿಸುವ ಮನಸ್ಸು ಸಿದ್ದರಾಮಯ್ಯ ಅವರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಹಿಂದುಳಿದ, ಶೋಷಿತ ಹಾಗೂ ದಮನಿತ ಸಮುದಾಯಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇದ್ದದ್ದು ಕೇವಲ ಕೃತಕ ಪ್ರೀತಿ ಮತ್ತು ಮೊಸಳೆ ಕಣ್ಣೀರು ಮಾತ್ರ ಎಂದು ಆರೋಪಿಸಿದ ಅವರು, ಈ ವಿಷಯ ಈಗ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರು.

ಈಗಿನ ಮುಖ್ಯಮಂತ್ರಿಗಳಿಂದಲೂ ವರದಿ ಸ್ವೀಕಾರದ ಬಗ್ಗೆ ಬದ್ಧತೆ ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೆ ಡಿ.ಕೆ. ಶಿವಕುಮಾರ್ ಕಾಂತರಾಜು ವರದಿಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಈಗ ಅವರು ವರದಿಯನ್ನು ಸ್ವೀಕರಿಸುವ ಮನಸ್ಸು ಮಾಡುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.

ಸಾಮಾಜಿಕ ಸಮೀಕ್ಷೆ ನಡೆಸುವುದು ಸಂವಿಧಾನಬದ್ಧ ಪ್ರಕ್ರಿಯೆಯಾಗಿದ್ದು, ಹತ್ತು ವರ್ಷಕ್ಕೊಮ್ಮೆ ಸರ್ಕಾರ ಆಯೋಗದ ಮೂಲಕ ಸಾಮಾಜಿಕ ಸ್ಥಿತಿಗತಿಯ ವರದಿ ಸಿದ್ಧಪಡಿಸುವುದು ಕಡ್ಡಾಯವಾಗಿದೆ. ಆದರೆ ಅದು ನಡೆಯದೆ ಇರುವುದು ದುರಂತ ಎಂದು ಹೇಳಿದರು.

ಹಿಂದುಳಿದ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ನ್ಯಾಯ ಒದಗಿಸುವ ಬದ್ಧತೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. "ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ" ಎಂಬಂತಾಗಿದೆ ಎಂದು ರಘು ಕೌಟಿಲ್ಯ ಟೀಕಿಸಿದರು.

ಕೊನೆಯಲ್ಲಿ, "ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಿ, ಸಿದ್ದರಾಮಯ್ಯ ಅವರು ಅಹಿಂದ ನಾಯಕ ಎಂಬುದನ್ನು ಸಾಬೀತುಪಡಿಸಬೇಕು" ಎಂದು ಎಂಎಲ್‌ಸಿ ರಘು ಕೌಟಿಲ್ಯ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜಿಪಿ ಒಬಿಸಿ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯಾ, ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್, ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಮಾಜಿ ಉಪಾಧ್ಯಕ್ಷರಾದ ಪೂರ್ಣಿಮ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಹರಿಕೃಷ್ಣ, ಚಿಕ್ಕಮಗಳೂರು ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷರಾದ ಲಕ್ಕಪ್ಪ, ಶಿವಮೊಗ್ಗ ಜಿಲ್ಲಾ ಒಬಿಸಿ ಅಧ್ಯಕ್ಷರಾದ ಸುಧಾಕರ್, ಮಹಾ ನಗರ ಪಾಲಿಕೆಯ ಮಾಜಿ ಮಹಾ ಪೌರರಾದ ಸುನೀತಾ ಅಣ್ಣಪ್ಪ, ಒಬಿಸಿ ಪ್ರಮುಖರುಗಳಾದ ಮಮತಾ ರೆಡ್ಡಿ, ಪ್ರಭಾಕರ್, ಭೋಜರಾವ್, ರಂಗನಾಥ, ಮಾಧ್ಯಮದ ಚಂದ್ರಶೇಖರ್ ಎಸ್, ಮಂಜುನಾಥ್ ಎನ್ ಉಪಸ್ಥಿತರಿದ್ದರು.

Siddaramaiah is a "breaking chief minister" - MLC Raghu Kautilya sarcastically 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close