ಕುತೂಹಲ ಕೆರಳಿಸಿದ ನಕಲಿ ತಹಶೀಲ್ದಾರ್ ಸಹಿ ಪ್ರಕರಣ- The case of fake Tahsildar's signature aroused curiosity

 SUDDILIVE || SHIVAMOGGA

ಕುತೂಹಲ ಕೆರಳಿಸಿದ ನಕಲಿ ತಹಶೀಲ್ದಾರ್ ಸಹಿ ಪ್ರಕರಣ- The case of fake Tahsildar's signature aroused curiosity   

Case, fake

ಶಿವಮೊಗ್ಗ: ಕೂಡ್ಲಿಯ ಅಕ್ಷೋಭ್ಯ ತೀರ್ಥ ಮಠದ ವತಿಯಿಂದ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಸಂಬಂಧಿಸಿದಂತೆ ಹಲವು ಗಂಭೀರ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ ಎನ್ನಲಾದ ದಾಖಲೆಗಳಲ್ಲಿ ತಹಶೀಲ್ದಾರ್ ಅವರ ಹೆಸರಿನಲ್ಲಿ ನಕಲಿ ಸಹಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರೂ, ಆ ನಕಲಿ ಸಹಿ ಮಾಡಿದವರು ಯಾರು ಎಂಬುದು ಇಂದಿಗೂ ಪತ್ತೆಯಾಗಿಲ್ಲ. ಜೊತೆಗೆ ಇಷ್ಟು ಗಂಭೀರ ಆರೋಪಗಳ ನಡುವೆಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಹಾಗೂ ಅನುಮಾನಕ್ಕೆ ಕಾರಣವಾಗಿದೆ.

2023ರಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣ

2023ರಲ್ಲಿ ಕೂಡ್ಲಿಯಲ್ಲಿರುವ ಅಕ್ಷೋಭ್ಯ ತೀರ್ಥ ಮಠವು ತನ್ನ ಮಠದ ಎದುರಿನ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿತ್ತು. ಕಾಮಗಾರಿ ಪಾಯ ಹಾಗೂ ಗೋಡೆ ಹಂತ ತಲುಪಿದಾಗ ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದ್ದರು. ನಂತರ ಎಚ್ಚೆತ್ತ ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತ್ತು.

Case, fake

'ಭಾರತಿ' ಹೆಸರಿನ ಸಹಿ ಪತ್ತೆ

ದಾಖಲೆಗಳ ಪರಿಶೀಲನೆ ವೇಳೆ ತಹಶೀಲ್ದಾರ್ ಹೆಸರಿನಲ್ಲಿ "ಭಾರತಿ" ಎಂದು ಸಹಿ ಮಾಡಿರುವ ಪತ್ರವೊಂದು ಪತ್ತೆಯಾಗಿತ್ತು. ಆದರೆ ಆ ಅವಧಿಯಲ್ಲಿ ಸಂಬಂಧಿತ ತಹಶೀಲ್ದಾರ್ ಆಗಿದ್ದವರು ನಾಗರಾಜ್ ಎಂಬುದು ದಾಖಲೆಗಳಿಂದ ತಿಳಿದುಬಂದಿತ್ತು. ಹೀಗಾಗಿ "ಭಾರತಿ" ಎಂಬ ಹೆಸರಿನಲ್ಲಿ ಸಹಿ ಮಾಡಿದವರು ಯಾರು? ಅವರು ಸರ್ಕಾರಿ ಅಧಿಕಾರಿ ಆಗಿದ್ದರೇ ಅಥವಾ ನಕಲಿ ದಾಖಲೆ ಸೃಷ್ಟಿಸಲಾಗಿತ್ತೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಬಗ್ಗೆ ಜಿಲ್ಲಾಡಳಿತ ತನಿಖೆ ಆರಂಭಿಸಿದ್ದರೂ, ನಕಲಿ ಸಹಿ ಮಾಡಿದ ವ್ಯಕ್ತಿಯ ಗುರುತು ಇನ್ನೂ ಬಹಿರಂಗವಾಗಿಲ್ಲ ಎನ್ನಲಾಗಿದೆ.

ಪ್ರಕರಣ ದಾಖಲಾಗದೇ ಉಳಿದಿರುವುದು ಆಶ್ಚರ್ಯ

ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಯ ಸಹಿಯನ್ನು ನಕಲಿ ಮಾಡಿ ದಾಖಲೆ ಸೃಷ್ಟಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಪ್ರಕರಣದಲ್ಲಿ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಬೇಕಾಗಿತ್ತು. ಆದರೆ ಈ ಪ್ರಕರಣದಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಾಗಲಿ ಅಥವಾ ಜಯನಗರ ಪೊಲೀಸ್ ಠಾಣೆಯಲ್ಲಾಗಲಿ ಯಾವುದೇ ಅಪರಾಧ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿಲ್ಲ.

ಯಾವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಅದರ ಅಪರಾಧ ಸಂಖ್ಯೆ (Crime Number) ಏನು ಎಂಬ ವಿವರಗಳೂ ಇಲ್ಲದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಪಾಲನಾ ವರದಿ ಕೇಳಿದ ತಹಶೀಲ್ದಾರ್

ಪ್ರಕರಣ ದಾಖಲಾಗದಿದ್ದರೂ ಸಂಬಂಧಿತ ತಹಶೀಲ್ದಾರ್ ಅವರು ಜಯನಗರ ಪೊಲೀಸ್ ಠಾಣೆಗೆ ಪಾಲನಾ ವರದಿ (Action Taken Report) ಕೋರಿರುವುದು ಮತ್ತೊಂದು ಪ್ರಶ್ನೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ಬಳಿಕವೇ ಅದರ ಆಧಾರದ ಮೇಲೆ ತನಿಖೆ ಹಾಗೂ ಪಾಲನಾ ವರದಿ ನಡೆಯುವುದು ರೂಢಿಯಾಗಿದೆ. ಆದರೆ ಅಪರಾಧ ಸಂಖ್ಯೆ ಉಲ್ಲೇಖಿಸದೆ ಪಾಲನಾ ವರದಿ ಕೇಳಿರುವುದು ಕಾನೂನು ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವ್ಯಾಪ್ತಿ ಗೊಂದಲವೂ ಚರ್ಚೆಗೆ

ಘಟನೆ ನಡೆದ ಸ್ಥಳದ ಪೊಲೀಸ್ ವ್ಯಾಪ್ತಿ ಹೊಳೆಹೊನ್ನೂರು ಠಾಣೆಗೆ ಸೇರಿದೆ ಎನ್ನಲಾಗುತ್ತಿದೆ. ಆದರೆ ತಹಶೀಲ್ದಾರ್ ಕಚೇರಿ ಆಡಳಿತಾತ್ಮಕ ವ್ಯಾಪ್ತಿ ಜಯನಗರ ಪೊಲೀಸ್ ಠಾಣೆಗೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಯಾವ ಪೊಲೀಸ್ ಠಾಣೆ ತನಿಖೆ ನಡೆಸಬೇಕು ಎಂಬ ಗೊಂದಲವೂ ಎದುರಾಗಿದೆ. ಆದರೂ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಪಾಲನಾ ವರದಿ ಕೇಳಿರುವ ಕ್ರಮ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತನಿಖೆ ಯಾವ ಹಂತದಲ್ಲಿದೆ?

ನಕಲಿ ಸಹಿ ಪ್ರಕರಣದಲ್ಲಿ ನಿಜವಾದ ಆರೋಪಿ ಯಾರು? ನಕಲಿ ದಾಖಲೆ ಸೃಷ್ಟಿಸಲು ಯಾರು ಸಹಕರಿಸಿದ್ದಾರೆ? ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಹೇಗೆ ದೊರಕಿತು? ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

The case of fake Tahsildar's signature aroused curiosity

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close