₹200 ಕೋಟಿ ಆಮಿಷವನ್ನೂ ತಿರಸ್ಕರಿಸಿದ್ದೇವೆ – ಬಂಗಾರಮಕ್ಕಿ ಗುರೂಜಿ-We rejected the lure of ₹200 crore – Bangaramakki Guruji

SUDDILIVE || SHIVAMOGGA

₹200 ಕೋಟಿ ಆಮಿಷವನ್ನೂ ತಿರಸ್ಕರಿಸಿದ್ದೇವೆ – ಬಂಗಾರಮಕ್ಕಿ ಗುರೂಜಿ-We rejected the lure of ₹200 crore – Bangaramakki Guruji  


ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಬಂಗಾರಮಕ್ಕಿ ಗುರೂಜಿ ಹಲವು ಮಹತ್ವದ ಆರೋಪಗಳನ್ನು ಸುದ್ದಿಗೋಷ್ಠಿಯಲ್ಲಿ ಮಾಡಿದರು. ಹೋರಾಟ ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಹಣದ ಆಮಿಷ, ಬೆದರಿಕೆ ಹಾಗೂ ವಿವಿಧ ರೀತಿಯ ಒತ್ತಡಗಳು ಬಂದಿದ್ದರೂ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

"ಸ್ವಾಮೀಜಿಗಳಿಗೆ ₹200 ಕೋಟಿ ಕೊಡುತ್ತೇವೆ ಎಂದು ಮಾತುಕತೆ ನಡೆದಿತ್ತು. ನಮಗೆ ದುಡ್ಡಿನ ಆಮಿಷಗಳನ್ನು ತಂದಿದ್ದಾರೆ. ಆದರೆ ನಾವು ಯಾವುದನ್ನೂ ಒಪ್ಪಿಲ್ಲ, ಮುಂದೆ ಕೂಡ ಒಪ್ಪುವುದಿಲ್ಲ. ನಾಳೆ ಇನ್ನೂ ಹೆಚ್ಚು ಹಣ ಕೊಟ್ಟರೂ ಒಪ್ಪುವುದಿಲ್ಲ. ಪ್ರಾಣ ಬಿಟ್ಟರೂ ನಮ್ಮ ಹೆಣದ ಮೇಲೆ ಯೋಜನೆ ಮಾಡಿ ಎಂದಿದ್ದೆ. ಆ ಹೇಳಿಕೆಗೆ ಈಗಲೂ ಬದ್ದ" ಎಂದು ಗುರೂಜಿ ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ನಿರೀಕ್ಷಿತ ಮಟ್ಟದಲ್ಲಿ ತೀವ್ರವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿಯೂ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಆದರೆ "ಒಡೆದು ಆಳುವ" ನೀತಿಯ ಮೂಲಕ ಹೋರಾಟಗಾರರನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

"ಹೋರಾಟದ ಮುಂಚೂಣಿಯಲ್ಲಿರುವವರ ವಿರುದ್ಧ ಪ್ರಕರಣ ದಾಖಲಿಸುವುದು, ನನ್ನ ಮೇಲೂ ಕೇಸ್ ಹಾಕಿಸಲಾಗಿದೆ. ನಾನು ಸಹ ಸೈಬರ್ ಕ್ರೈಂ ವಿಚಾರದಲ್ಲಿ ದೂರೊಂದನ್ನ ಕೊಟ್ಟಿದ್ದೇನೆ.  ಹೋರಾಟವನ್ನು ಒಡೆಯಲು ಬೇಕಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ" ಎಂದು ಹೇಳಿದರು.

ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳ ಮೌನದ ಕುರಿತು ಕೇಳಿದ ಪ್ರಶ್ನೆಗೆ, "ಅದು ಅವರನ್ನೇ ಕೇಳಬೇಕು. ಅದು ನನ್ನ ಜವಾಬ್ದಾರಿ ಅಲ್ಲ. ಇದು ಪಕ್ಷದ ಸಮಸ್ಯೆಯಲ್ಲ, ಜನರ ಸಮಸ್ಯೆ" ಎಂದು ಪ್ರತಿಕ್ರಿಯಿಸಿದರು.

ತಮ್ಮ ಮೇಲೆ ಒತ್ತಡ ಹೇರಿದವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಗುರೂಜಿ, "ಕೆಪಿಸಿಎಲ್ ಅಧಿಕಾರಿಗಳು ನೇರವಾಗಿ ಬಂದು ಮಾತನಾಡಿದ್ದರು. ನಾವು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ಒಂದು ಇಲಾಖೆಯ ಅಧಿಕಾರಿಗಳು ನಿಮ್ಮ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುತ್ತೇವೆ ಎಂದರು. ಅದಕ್ಕೂ ಸ್ವಾಗತ ಎಂದಿದ್ದೇವೆ. ನನ್ನ ವಾಹನಕ್ಕೂ ಅಪಘಾತ ಮಾಡಿಸಲಾಯಿತು. ಅನೇಕ ಬೆದರಿಕೆ ಕರೆಗಳು ಬಂದವು. ಆದರೂ ನಾವು ಹೋರಾಟದಿಂದ ಹಿಂದೆ ಸರಿದಿಲ್ಲ" ಎಂದು ಆರೋಪಿಸಿದರು.

ಯೋಜನೆಯ ತಾಂತ್ರಿಕ ಅಂಶಗಳ ಕುರಿತು ಮಾತನಾಡಿದ ಅವರು, 2,500 ಮೆಗಾವ್ಯಾಟ್ ವಿದ್ಯುತ್ ಬಳಸಿ ನೀರನ್ನು ಮೇಲಕ್ಕೆ ಎತ್ತಿ ಬಳಿಕ 2,000 ಮೆಗಾವ್ಯಾಟ್ ಉತ್ಪಾದಿಸುವುದು "ನೆಟ್ ಲಾಸ್" ಎಂದು ವಾದಿಸಿದರು.

"ಇಂದು ವಿದ್ಯುತ್ ಸಂಗ್ರಹಿಸಲು ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ. ಗುಜರಾತ್‌ನಲ್ಲಿ ಬ್ಯಾಟರಿ ಆಧಾರಿತ ವಿದ್ಯುತ್ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದ್ದು, 40 ದಿನಗಳವರೆಗೆ ವಿದ್ಯುತ್ ಸಂಗ್ರಹಿಸುವ ತಂತ್ರಜ್ಞಾನ ಲಭ್ಯವಿದೆ. ಅಂತಹ ಪರ್ಯಾಯಗಳು ಇರುವಾಗ ಅರಣ್ಯ, ವನ್ಯಜೀವಿ ಹಾಗೂ ಪ್ರಕೃತಿಯನ್ನು ನಾಶ ಮಾಡುವ ಯೋಜನೆಗಳ ಅಗತ್ಯವೇ ಇಲ್ಲ", ಜೊತೆಗೆ ಸಚಿವ ಜಾರ್ಜ್ ಅವರು ಕೇವಲ 25 ಕರೆ ಸಾಕು ಎಂದಿದ್ದಾರೆ. ಆದರೆ ಯೋಜನೆಯಲ್ಲಿ  ಕೇವಲ 25 ಎಕರೆ ಜಮೀನು ಇಲ್ಲ ಎಂದು ಹೇಳಿದರು.

"ಪ್ರಕೃತಿಗೆ ಅಪಾರ ಹಾನಿ ಉಂಟುಮಾಡುವ ಯೋಜನೆಗಳ ಬದಲು ಸೌರ ಹಾಗೂ ಗಾಳಿ ವಿದ್ಯುತ್ ಸೇರಿದಂತೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸಬೇಕು. ಈ ಯೋಜನೆಯಿಂದ ಉಂಟಾಗುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ" ಎಂದು ಗುರೂಜಿ ಅಭಿಪ್ರಾಯಪಟ್ಟರು.

ಮುಂದಿನ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ, "ಎಲ್ಲರೂ ಕೂತು ಚರ್ಚೆ ಮಾಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ" ಎಂದು ತಿಳಿಸಿ ಸುದ್ದಿಗೋಷ್ಠಿಯನ್ನು ಮುಕ್ತಾಯಗೊಳಿಸಿದರು.

We rejected the lure of ₹200 crore – Bangaramakki Guruji

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close