ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ; ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನದ ಬಳಿಕ ಎಸ್‌ಪಿ ಅವರಿಗೆ ದೂರು-bjp complaint against congress to SP

SUDDILIVE || SHIVAMOGGA

ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ; ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನದ ಬಳಿಕ ಎಸ್‌ಪಿ ಅವರಿಗೆ ದೂರು-bjp complaint against congress to SP

Bjp, complaint


ಶಿವಮೊಗ್ಗ, ಜು.23: ನೀಟ್ ಪರೀಕ್ಷೆ ಅಕ್ರಮ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವೇಳೆ ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಉಂಟಾದ ಗಲಾಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಲಿಖಿತ ದೂರು ಸಲ್ಲಿಸಿದೆ.

ದೂರಿನಲ್ಲಿ ತಿಳಿಸಿರುವಂತೆ, ಜುಲೈ 23ರಂದು ಬೆಳಿಗ್ಗೆ ಸುಮಾರು 11.26ರ ವೇಳೆಗೆ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಯತ್ತ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭದ್ರತೆ ಒದಗಿಸಿದ್ದರು.

ಆದರೆ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯನ್ನು ತಳ್ಳಾಟ-ನೂಕಾಟ ನಡೆಸಿ, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಯತ್ನಿಸಿದ್ದು, ಕರ್ತವ್ಯದಲ್ಲಿದ್ದ ಡಿವೈಎಸ್‌ಪಿ, ಸಿಪಿಐ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ತಳ್ಳಾಟ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಬಿಜೆಪಿ ಕಚೇರಿಯೊಳಗೆ ನುಗ್ಗಲು ಪ್ರಯತ್ನಿಸಿ, ಬಿಜೆಪಿ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿರುವ ಗಂಭೀರ ಪ್ರಕರಣವಾಗಿದ್ದು, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ದೂರಿನಲ್ಲಿ ಹೇಳಿದೆ.

ದೂರು ಆಧರಿಸಿ ಘಟನೆಗೆ ಸಂಬಂಧಿಸಿದ ಎಲ್ಲರ ವಿರುದ್ಧ ಸಮಗ್ರ ತನಿಖೆ ನಡೆಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರು ಹಾಗೂ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಎಸ್‌ಪಿ ಅವರಿಗೆ ಮನವಿ ಮಾಡಿದೆ.

ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಮನವಿ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಆರ್ ಕೆ ಸಿದ್ದರಾಮಣ್ಣ, ಬಿಜೆಪಿ ಮಾಜಿ ಅಧ್ಯಕ್ಷ ಮೇಘರಾಜ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು. 

bjp complaint against congress to SP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close