ಆಗಸ್ಟ್ 6-7 ಹರೋಹರ ಜಾತ್ರೆ-August 6-7 Harohar Fair

 SUDDILIVE || SHIVAMOGGA

  ಆಗಸ್ಟ್ 6-7 ಹರೋಹರ ಜಾತ್ರೆ-August 6-7 Harohar Fair   

Harohara, fair


ಶಿವಮೊಗ್ಗ: ಗುಡ್ಡೆಕಲ್‌ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಆಗಸ್ಟ್ 6ರಂದು ಭರಣಿ ಕಾವಡಿ ಉತ್ಸವ ಹಾಗೂ ಆಗಸ್ಟ್ 7ರಂದು ಅಡಿಕೃತ್ತಿಕೆ ಹರೋಹರ ಜಾತ್ರೆ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್‌ನ ಅಧ್ಯಕ್ಷ ರಘುಕುಮಾರ್ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡ್ಡೆಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಡಿಕೃತ್ತಿಕೆ ಹರೋಹರ ಜಾತ್ರೆಯನ್ನು ಹಲವು ದಶಕಗಳಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಆಷಾಢ ಮಾಸದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಾತ್ರೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ. ಗ್ರಹದೋಷ, ಚರ್ಮ ಸಂಬಂಧಿ ಸಮಸ್ಯೆಗಳು ಸೇರಿದಂತೆ ವಿವಿಧ ಸಂಕಷ್ಟಗಳಿಂದ ಮುಕ್ತಿ ದೊರೆಯಲಿ ಎಂಬ ನಂಬಿಕೆಯಿಂದ ಭಕ್ತರು ದೇವರಿಗೆ ಹರಕೆ ಹೊತ್ತು, ಜಾತ್ರೆಯ ದಿನ ಅದನ್ನು ತೀರಿಸುವ ಸಂಪ್ರದಾಯವೂ ಮುಂದುವರಿದಿದೆ ಎಂದು ಹೇಳಿದರು.

ತಮಿಳು ಸಮುದಾಯದ ಭಕ್ತರು ತಮ್ಮ ಕುಟುಂಬದ ಒಳಿತಿಗಾಗಿ ವಿಶೇಷ ಹರಕೆಗಳನ್ನು ಹೊರುತ್ತಾರೆ. ಹರೋಹರ ಜಾತ್ರೆಯ ವೇಳೆ ದೇಹಕ್ಕೆ ವೇಲ್ (ಶೂಲ) ಚುಚ್ಚಿಕೊಳ್ಳುವುದು ಸೇರಿದಂತೆ ಕಠಿಣ ವ್ರತಗಳನ್ನು ಆಚರಿಸುವ ಮೂಲಕ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸುತ್ತಾರೆ. ಈ ವಿಶಿಷ್ಟ ಆಚರಣೆ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ ಎಂದು ತಿಳಿಸಿದರು.

ಈ ವೇಳೆ ದೇವಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಯಾದ 151 ಅಡಿ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿ ನಿರ್ಮಾಣ ಕುರಿತು ಮಾಹಿತಿ ನೀಡಿದ ರಘುಕುಮಾರ್, ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಅಡಿಪಾಯ (ಬೆಡ್) ಕಾಮಗಾರಿ ಪೂರ್ಣಗೊಂಡಿದೆ ಎಂದರು.

ವಿಶ್ವದಲ್ಲೇ ಅತಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಗಳಲ್ಲಿ ಒಂದಾಗಲಿರುವ ಈ ಯೋಜನೆಗೆ ಮೂರ್ತಿ ನಿರ್ಮಾಣಕ್ಕೆ ಸುಮಾರು ₹6 ಕೋಟಿ ಹಾಗೂ ಸಂಪೂರ್ಣ ಯೋಜನೆಗೆ ಸುಮಾರು ₹25 ಕೋಟಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ಜಾತ್ರೆಯ ಯಶಸ್ಸಿಗಾಗಿ ದೇವಸ್ಥಾನ ಟ್ರಸ್ಟ್ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

August 6-7 Harohar Fair   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close