SUDDILIVE || SHIVAMOGGA
ಮಾಜಿ ಪ್ರೇಮಿಯ ಪಾಗಲ್ ತನಕ್ಕೆ ಬೈಕ್‌ಗೆ ಬೆಂಕಿ? Ex-lover's madman set his bike on fire?
ಶಿವಮೊಗ್ಗ: ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಪ್ರೇಮಿಯೊಬ್ಬ ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ಯುವತಿಯೊಬ್ಬಳಿಗೆ ಹಾಗೂ ಮಣಿಕಂಠ ಎಂಬಾತನಿಗೆ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ಬ್ರೇಕಪ್ ಆಗಿದ್ದು, ಇಬ್ಬರೂ ಪ್ರತ್ಯೇಕವಾಗಿದ್ದರು. ಆದರೆ ಆಗಾಗ್ಗೆ ಭೇಟಿಯಾಗುತ್ತಿದ್ದ ವೇಳೆ ಇಬ್ಬರ ನಡುವೆ ಸಣ್ಣಪುಟ್ಟ ಕಿರಿಕಿರಿ ಹಾಗೂ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ.
ಮದುವೆ ವಿಚಾರದ ದ್ವೇಷ; ಮನೆಯ ಹೊರಗಿದ್ದ ಎರಡು ಬೈಕ್‌ಗಳಿಗೆ ಬೆಂಕಿ
ಪೊಲೀಸ್ ದಾಖಲೆಯ ಪ್ರಕಾರ, ದೂರುದಾರರಾದ ಆಂತೋಣಿ ರಾಜ್ ತಮ್ಮ ತಾಯಿಯೊಂದಿಗೆ ವಾಸವಾಗಿದ್ದು, ಹೂವಿನ ಅಲಂಕಾರ (ಫ್ಲವರ್ ಡೆಕೋರೇಷನ್) ಕೆಲಸ ಮಾಡಿಕೊಂಡಿದ್ದಾರೆ. ದೂರುದಾರರಿಗೆ ಹಿರಿಯರು ಸೇರಿ ವೆಂಕಟೇಶ್ವರ ನಗರದ ನಿವಾಸಿಯಾಗಿರುವ ಯುವತಿಯನ್ನು ವಿವಾಹ ಮಾಡಿಸಲು ನಿಶ್ಚಯಿಸಿದ್ದು, 2025ರ ನವೆಂಬರ್ 7ರಂದು ನಿಶ್ಚಿತಾರ್ಥ ಕಾರ್ಯಕ್ರಮವನ್ನೂ ನಡೆಸಲಾಗಿತ್ತು.
ಆದರೆ ಮಾಜಿ ಪ್ರೇಮಿ ಪ್ರೀತಿಸುತ್ತಿದ್ದನೆನ್ನಲಾದ ಕಾಶಿಪುರದ ಮಣಿಕಂಠ, ಮದುವೆ ವಿಚಾರವಾಗಿ ಆಕೆಯ ಕುಟುಂಬದವರೊಂದಿಗೆ ಪದೇಪದೇ ಗಲಾಟೆ ಮಾಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಯುವತಿಯ ಸಹೋದರನಿಗೆ, ತನ್ನೊಂದಿಗೆ ಮದುವೆ ಮಾಡಿಸದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹಲವು ಬಾರಿ ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಮಧ್ಯರಾತ್ರಿ ಬೈಕ್‌ಗಳಿಗೆ ಬೆಂಕಿ
ಆಗಸ್ಟ್ 30ರ ರಾತ್ರಿ ಸುಮಾರು 11 ಗಂಟೆಗೆ ವೆಂಕಟೇಶ್ವರ ನಗರದಲ್ಲಿರುವ ಯುವತಿಯ ಮನೆ ಮುಂದೆ ಆಂತೋಣಿರಾಜ್ ಇದ್ದಾಗ ಮಣಿಕಂಠ ಅಲ್ಲಿಗೆ ಬಂದು ಯುವತಿ ಹಾಗೂ ಸಹೋರರಿಬ್ಬರನ್ನ ಹೊರಗೆ ಬರುವಂತೆ ಕೂಗಿ, ಮದುವೆ ಮಾಡಿಸದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಗಲಾಟೆ ಮಾಡಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಯ ಹೊರಗೆ ನಿಲ್ಲಿಸಿದ್ದ ದೂರುದಾರರ ಹೆಸರಿನ ಎರಡು ಬೈಕ್‌ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೆಎ-14 ಹೆಚ್‌ಡಿ-3034 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ NS-125 ಹಾಗೂ ಕೆಎ-14 ಹೆಚ್‌ಇ-0197 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ NS-200 ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ.
ಬೈಕ್‌ಗಳು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಕೂಗಿಕೊಂಡಿದ್ದು, ಈ ವೇಳೆ ಆರೋಪಿ ಮಣಿಕಂಠ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ. ಬಳಿಕ ಮನೆಯರೆಲ್ಲ ಹೊರಗೆ ಬಂದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ಘಟನೆಯಲ್ಲಿ ಎರಡೂ ಬೈಕ್‌ಗಳು ಸುಟ್ಟುಹೋಗಿದ್ದು, ಸುಮಾರು ₹60,000 ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದರನಿಗೆ ಜೀವ ಬೆದರಿಕೆ ಹಾಕಿ, ಆಂತೋಣಿ ಹೆಸರಿನಲ್ಲಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ಮಣಿಕಂಠ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 68/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
