ತೀರ್ಥಹಳ್ಳಿ-ಗುಡ್ಡಕುಸಿದ ಪ್ರಕರಣದಲ್ಲಿ ಇಬ್ವರ ವಿರುದ್ಧ ಎಫ್ಐಆರ್- FIR against two in Thirthahalli landslide case

 SUDDILIVE || THIRTHAHALLI

ತೀರ್ಥಹಳ್ಳಿ-ಗುಡ್ಡಕುಸಿದ ಪ್ರಕರಣದಲ್ಲಿ ಇಬ್ವರ ವಿರುದ್ಧ ಎಫ್ಐಆರ್-  FIR against two in Thirthahalli landslide case  

Thirthahalli, fir






ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ಭಾರೀ ಮಳೆಯ ಪರಿಣಾಮ ಸಂಭವಿಸಿದ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾಯಕಾರಿ ಸ್ಥಳದಲ್ಲಿ ಕಾರ್ಮಿಕರಿಗೆ ವಾಸಕ್ಕೆ ಶೆಡ್ ನಿರ್ಮಿಸಿ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಕೊಪ್ಪಳ ಜಿಲ್ಲೆಯ ಕೊಕ್ಕರಗಾಳ ಸಿದ್ದಾಪುರ ಗ್ರಾಮದ ಹನುಮಂತಪ್ಪ ಹಾಗೂ ಅವರ ಪತ್ನಿ ಕಳೆದ ಮೂರು ತಿಂಗಳಿನಿಂದ ತೀರ್ಥಹಳ್ಳಿಯಲ್ಲಿ ಅಂಜನಪ್ಪ ಎಂಬ ಮೇಸ್ತ್ರಿ ಬಳಿ ಕೂಲಿ ಕೆಲಸ ಮಾಡುತ್ತಿದ್ದರು. ಅವರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರು ಗಾಂಧಿನಗರದಲ್ಲಿರುವ ರಮೇಶ್ ಅವರ ಜಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದರು.

ಆಗಸ್ಟ್ 2ರಂದು ಮುಂಜಾನೆ ಸುಮಾರು 2.30 ಗಂಟೆ ವೇಳೆಗೆ ಸುರಿದ ಭಾರೀ ಮಳೆಯಿಂದ ಶೆಡ್ ಹಿಂಭಾಗದಲ್ಲಿದ್ದ ಸಿಮೆಂಟ್ ಕಾಂಪೌಂಡ್ ಗೋಡೆ ಹಾಗೂ ಮಣ್ಣಿನ ದಿಬ್ಬ ಏಕಾಏಕಿ ಕುಸಿದಿದೆ. ಘಟನೆಯಲ್ಲಿ ಹನುಮಂತಪ್ಪ ಮಣ್ಣಿನಡಿ ಸಿಲುಕಿಕೊಂಡಿದ್ದು, ಅವರ ಪತ್ನಿ ಸುಮಿತ್ರಾ ಹಾಗೂ ಸ್ಥಳೀಯರು ಸೇರಿ ಅವರನ್ನು ರಕ್ಷಿಸಿದ್ದಾರೆ. ಆದರೆ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಲ್ಲಿಕಾರ್ಜುನ (29), ಅವರ ಪತ್ನಿ ನಾಗವೇಣಿ (25) ಮತ್ತು ಮೂರು ವರ್ಷದ ಪುತ್ರ ಸಂತೋಷ್ ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮಂತಪ್ಪ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಶೆಡ್ ನಿರ್ಮಿಸಿ ಅಪಾಯಕಾರಿ ಪ್ರದೇಶದಲ್ಲಿ ಕಾರ್ಮಿಕರಿಗೆ ವಾಸಕ್ಕೆ ಅವಕಾಶ ನೀಡಿದ ಜಾಗದ ಮಾಲೀಕ ರಮೇಶ್ ಹಾಗೂ ಕಾರ್ಮಿಕರನ್ನು ಅಲ್ಲಿಗೆ ಕರೆತಂದು ಸುರಕ್ಷತಾ ಕ್ರಮಗಳನ್ನು ಪಾಲಿಸದ ಮೇಸ್ತ್ರಿ ಅಂಜನಪ್ಪ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 105, 125(ಎ) ಹಾಗೂ 3(5) ಅಡಿಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

FIR against two in Thirthahalli landslide case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close