SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಡೆಡ್ ಯೋಜನೆ-ರಾಷ್ಟ್ರಭಕ್ತರ ಬಳಗ-Sharavati Pumped Storage Yojana Dead Yojana- Rashtrabhakta Balaga
ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಳಿಕ ಹೊಸ ಯಾವುದೇ ಯೋಜನೆಗಳಿಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪರಿಸರ ಹೋರಾಟಗಾರರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರಭಕ್ತರ ಬಳಗದ ಕೆ.ಎಸ್ ಈಶ್ವರಪ್ಪ, ಶ್ರೀಕಾಂತ್ ಮತ್ತು ಪರಿಸರಾಸಕ್ತರ ಬಳಗದ ಪ್ರೊ.ಕುಮಾರ ಸ್ವಾಮಿ ಈ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಅನುಮತಿ ಕೋರಿದರೂ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು.
ರಾಜ್ಯ ಸರ್ಕಾರ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸಿ, ಶರಾವತಿ ಯೋಜನೆಯನ್ನು ಕೈಬಿಡುವುದಾಗಿ ಸ್ಪಷ್ಟ ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಭ್ರಷ್ಟಾಚಾರ ಅಥವಾ ಅನಗತ್ಯ ವೆಚ್ಚಕ್ಕಾಗಿ ಯೋಜನೆಯನ್ನು ಮುಂದುವರಿಸುವ ಪ್ರಯತ್ನ ನಡೆಸಬಾರದು ಎಂದರು.
ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೆಪಿಸಿಎಲ್ (KPCL) ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಆರಂಭಿಸಿಲ್ಲ ಹಾಗೂ ಒಂದು ರೂಪಾಯಿಯನ್ನೂ ವೆಚ್ಚ ಮಾಡಿಲ್ಲ ಎಂದು ದಾಖಲೆಯಲ್ಲೇ ತಿಳಿಸಿದೆ ಎಂದು ಅವರು ಹೇಳಿದರು. ಹೈಕೋರ್ಟ್ ಕೂಡ ಯಾವುದೇ ಸಿವಿಲ್ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿರುವುದನ್ನು ಅವರು ಉಲ್ಲೇಖಿಸಿದರು.
ಹೈಕೋರ್ಟ್ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳು ಯೋಜನೆಗೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಅರ್ಜಿದಾರರ ವಾದದಲ್ಲಿ ಪ್ರಾಥಮಿಕವಾಗಿ ಬಲವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು. ಮುಂದಿನ ಆರರಿಂದ ಎಂಟು ತಿಂಗಳೊಳಗೆ ಹೈಕೋರ್ಟ್‌ನಲ್ಲಿ ತಮ್ಮ ಪರವಾಗಿ ಆದೇಶ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವೂ ಹೈಕೋರ್ಟ್‌ನಲ್ಲಿ ಈ ಯೋಜನೆಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಅಧಿಕೃತವಾಗಿ ತಿಳಿಸಿರುವುದರಿಂದ, ಶರಾವತಿ ಯೋಜನೆ ಈಗ "ಮೃತ ಯೋಜನೆ" (Dead Project) ಆಗಿದೆ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.
ಯೋಜನೆಗೆ ಸಂಬಂಧಿಸಿದಂತೆ ಕೆಲವು ಕುಟುಂಬಗಳಿಗೆ ನೋಟಿಸ್ ನೀಡಲಾಗಿದ್ದು, ಅದರ ವಿರುದ್ಧವೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ, ಪುರಾತತ್ವ ಮಹತ್ವ ಹೊಂದಿರುವ ಬೈರಾದೇವಿ ಪ್ರದೇಶ ಸೇರಿದಂತೆ ಐತಿಹಾಸಿಕ ತಾಣಗಳ ಮೇಲೆ ಯೋಜನೆಯ ಸ್ಫೋಟ ಕಾಮಗಾರಿಗಳ ಪರಿಣಾಮ ಕುರಿತು ಕೇಳಿದ ಪ್ರಶ್ನೆಗೆ ಅಧಿಕಾರಿಗಳು "ಯೋಜನಾ ಪ್ರದೇಶದಿಂದ ಏಳು ಕಿಲೋಮೀಟರ್ ದೂರದಲ್ಲಿದೆ" ಎಂಬ ಒಂದೇ ಸಾಲಿನ ಉತ್ತರ ನೀಡಿದ್ದಾರೆ. ಇಂತಹ ಉತ್ತರವು ವೈಜ್ಞಾನಿಕ ಅಧ್ಯಯನಕ್ಕೆ ಅಥವಾ ಸಮರ್ಪಕ ಸಮರ್ಥನೆಗೆ ಸಾಲುವುದಿಲ್ಲ ಎಂದು ಅವರು ಟೀಕಿಸಿದರು.
Sharavati Pumped Storage Yojana Dead Yojana- Rashtrabhakta Balaga
