SUDDILIVE || SHIVAMOGGA
ಅಬ್ಬಲಗೆರೆಯಲ್ಲಿ ತುಂಗಾ ಚಾನೆಲ್‌ಗೆ ಇಳಿದ ಎಸ್‌ಎಸ್‌ಎಲ್‌ಸಿ ಬಾಲಕ ನೀರುಪಾಲು: ಶೋಧ ಕಾರ್ಯ ಮುಂದುವರಿಕೆ- SSLC student swept away after entering Tunga Canal at Abbalagere; search operation underway
ಶಿವಮೊಗ್ಗ: ನಗರದ ಹೊರವಲಯದ ಅಬ್ಬಲಗೆರೆ ಸಮೀಪ ಈಶ್ವರವನದ ಎದುರಿನ ತುಂಗಾ ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೀರುಪಾಲಾಗಿರುವ ಆತಂಕಕಾರಿ ಘಟನೆ ಬುಧವಾರ ನಡೆದಿದೆ. ನೀರುಪಾಲಾಗಿರುವ ಬಾಲಕನಿಗಾಗಿ ಅಗ್ನಿಶಾಮಕ ದಳ ಹಾಗೂ ಸಂಬಂಧಿಸಿದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ನೀರುಪಾಲಾದ ಬಾಲಕನನ್ನು ಬೊಮ್ಮನಕಟ್ಟೆ ನಿವಾಸಿ ಕೃಷ್ಣ (15) ಎಂದು ಗುರುತಿಸಲಾಗಿದೆ. ಕೃಷ್ಣ ಗೋಪಾಳದ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಒಟ್ಟು ಆರು ಮಂದಿ ಬಾಲಕರು ಈಜಲೆಂದು ತುಂಗಾ ಚಾನೆಲ್‌ಗೆ ತೆರಳಿದ್ದರು. ಈ ವೇಳೆ ಕೃಷ್ಣ ಮೊದಲು ನೀರಿಗೆ ಇಳಿದು ಈಜಲು ಮುಂದಾಗಿದ್ದಾನೆ. ಆದರೆ ಚಾನೆಲ್‌ನಲ್ಲಿ ನೀರಿನ ಹರಿವು ಹಾಗೂ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆತ ನೀರಿನಲ್ಲಿ ನಿಯಂತ್ರಣ ಕಳೆದುಕೊಂಡು ಮುಳುಗಲು ಆರಂಭಿಸಿದ್ದಾನೆ ಎನ್ನಲಾಗಿದೆ.
ಕೃಷ್ಣ ನೀರಿನಲ್ಲಿ ಕೈ ಬೀಸುತ್ತಿರುವುದನ್ನು ಗಮನಿಸಿದ ಆತನ ಸ್ನೇಹಿತ ಕೂಡಲೇ ಆತನನ್ನು ರಕ್ಷಿಸಲು ಮುಂದಾಗಿದ್ದಾನೆ. ಆದರೆ ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಆತನನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲು ಸಾಧ್ಯವಾಗಲಿಲ್ಲ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತುಂಗಾ ಚಾನೆಲ್‌ನಲ್ಲಿ ಬಾಲಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನೀರಿನ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎನ್ನಲಾಗಿದೆ. ಸ್ಥಳದಲ್ಲಿ ಬಾಲಕನ ಕುಟುಂಬಸ್ಥರು ಹಾಗೂ ಸ್ನೇಹಿತರು ಆತಂಕದಿಂದ ಕಾಯುತ್ತಿದ್ದಾರೆ.
ಈ ನಡುವೆ, ಮೂರು ದಿನಗಳ ಹಿಂದಷ್ಟೇ ತುಂಗಾ ನದಿಯಲ್ಲಿ ಚಿತ್ರದುರ್ಗ ಮೂಲದ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಶಿವಮೊಗ್ಗದಲ್ಲಿ ಆತಂಕ ಮೂಡಿಸಿತ್ತು. ಆ ಘಟನೆಯಲ್ಲಿ ಇಬ್ಬರು ಬಚಾವಾಗಿದ್ದರೆ, ಇಬ್ಬರು ಹೆಣ್ಣುಮಕ್ಕಳು ನೀರುಪಾಲಾಗಿದ್ದು, ಮೂರು ದಿನ ಕಳೆದರೂ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿತ್ತು. ಆ ಘಟನೆಯ ಆತಂಕ ಇನ್ನೂ ಮರೆಯಾಗುವ ಮುನ್ನವೇ ಇದೀಗ ತುಂಗಾ ಚಾನೆಲ್‌ನಲ್ಲಿ ಮತ್ತೊಬ್ಬ ಬಾಲಕ ನೀರುಪಾಲಾಗಿರುವ ಘಟನೆ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ತುಂಗಾ ನದಿ ಹಾಗೂ ಚಾನೆಲ್‌ಗಳಲ್ಲಿ ನೀರಿನ ಹರಿವು ಹೆಚ್ಚಿರುವ ಸಂದರ್ಭದಲ್ಲಿ ಮಕ್ಕಳು ಹಾಗೂ ಯುವಕರು ಈಜಲು ಇಳಿಯದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈಜು ಬಾರದವರು ಮಾತ್ರವಲ್ಲದೆ, ಈಜು ಬಲ್ಲವರೂ ಸಹ ನೀರಿನ ಸೆಳೆತ ಮತ್ತು ಆಳದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಪ್ರಸ್ತುತ ಕೃಷ್ಣನಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
