ಹತ್ಯೆಯಾದ ಅವಿನಾಶನ ತಂದೆ ತಾಯಿಗೆ ಧಮ್ಕಿ ಹಾಗೂ ಕೊಲೆ ಬೆದರಿಕೆ- Intimidation and death threats issued to the parents of the murdered Avinash

 SUDDILIVE || SHIVAMOGGA

ಹತ್ಯೆಯಾದ ಅವಿನಾಶನ ತಂದೆ ತಾಯಿಗೆ ಧಮ್ಕಿ ಹಾಗೂ ಕೊಲೆ ಬೆದರಿಕೆ- Intimidation and death threats issued to the parents of the murdered Avinash  

Avinash, parents

Avinash, parents


ಶಿವಮೊಗ್ಗ:
ಹಳೆಯ ಬೊಮ್ಮನಕಟ್ಟೆ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಹಾಗೂ ಅವರ ಪತಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಇಬ್ಬರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2025ರಲ್ಲಿ ನಡೆದಿದ್ದ ಅವಿನಾಶ್ ಎಂಬವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.

ಆಗಸ್ಟ್ 18ರಂದು ಮಧ್ಯಾಹ್ನ ಸುಮಾರು 12.30ರಿಂದ 12.40ರ ವೇಳೆಯಲ್ಲಿ ಹಳೆಯ ಬೊಮ್ಮನಕಟ್ಟೆಯ ಸೊಪ್ಪಿನ ತೋಟದಲ್ಲಿ ಘಟನೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 56 ವರ್ಷದ ಕಲಾವತಿ ಹಾಗೂ ಅವರ ಪತಿ ಶೇಖರಪ್ಪ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಪಕ್ಕದ ಜಮೀನಿನವರಾದ ಪ್ರವೀಣ ಮತ್ತು ದೇವೇಂದ್ರಪ್ಪ ಅಲ್ಲಿಗೆ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅವಿನಾಶ್ ಹತ್ಯೆ ಪ್ರಕರಣದ ಹಿನ್ನೆಲೆ

ದೂರುದಾರರಾದ ಕಲಾವತಿ ನೀಡಿರುವ ಹೇಳಿಕೆಯ ಪ್ರಕಾರ, ತಮ್ಮ ಮಗ ಅವಿನಾಶ್ ಅವರನ್ನು ಪ್ರವೀಣ ಮತ್ತು ದೇವೇಂದ್ರಪ್ಪ ಇಬ್ಬರೂ ಸೇರಿ 2025ರ ಜೂನ್ 21ರಂದು ಕೊಲೆ ಮಾಡಿದ್ದರು. ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮನ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಮೇಲೆ ಶನಿವಾರ ತಡರಾತ್ರಿ ಇವರ ಕಲಾವತಿ ಮತ್ತು ಶೇಖರಪ್ಪನವರ ಪುತ್ರ ಅವಿನಾಶನನ್ನ  ಕೊಲೆ ಮಾಡಲಾಗಿತ್ತು. 

ಅವಿನಾಶ್ 10 ವರ್ಷಗಳ ಹಿಂದೆ ನಡೆದ ರೌಡಿ ಶೀಟರ್ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ನಂತರ ನ್ಯಾಯಾಲಯ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೆರೋಲ್ ಮೇಲೆ ಅವಿನಾಶ್ ಮನೆಗೆ ಬಂದಿದ್ದ. ಕೊಲೆ ನಡೆದ ಸ್ಥಳದಲ್ಲಿ ಮದ್ಯದ ಬಾಟಲಿ ದೊರೆತಿದ್ದು, ತಡರಾತ್ರಿ ವರೆಗೆ ಪಾರ್ಟಿ ಮಾಡಿ ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಆಗ ಶಂಕಿಸಲಾಗುತ್ತು. 

ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳು ತಮ್ಮ ಮೇಲೆ ದ್ವೇಷ ಹೊಂದಿದ್ದು, ಪದೇಪದೇ ದುರುಗುಟ್ಟಿಕೊಂಡು ನೋಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಆಗಸ್ಟ್ 18ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆರೋಪಿಗಳು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದನ್ನು ಪ್ರಶ್ನಿಸಿದಾಗ ಇಬ್ಬರೂ ಸೇರಿ ತಮ್ಮ ಕೈ ಹಿಡಿದು ಎಳೆದಾಡಿದರು. ಪ್ರವೀಣ ಮುಖಕ್ಕೆ ಕೈಯಿಂದ ಹೊಡೆದರೆ, ದೇವೇಂದ್ರಪ್ಪ ಬೆನ್ನಿಗೆ ಬಲವಾಗಿ ಹೊಡೆದಿದ್ದಾನೆ ಎಂದು ಕಲಾವತಿ ದೂರಿನಲ್ಲಿ ತಿಳಿಸಿದ್ದಾರೆ. ಜಗಳ ಬಿಡಿಸಲು ಬಂದ ತಮ್ಮ ಪತಿ ಶೇಖರಪ್ಪ ಅವರಿಗೂ ಇಬ್ಬರೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳದಿಂದ ಪರಾರಿಯಾದ ಆರೋಪಿಗಳು

ಹಲ್ಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಾವತಿ ಮತ್ತು ಶೇಖರಪ್ಪ ಜೋರಾಗಿ ಕೂಗಿಕೊಂಡಿದ್ದು, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ಸ್ಥಳದಿಂದ ತೆರಳುವ ಸಂದರ್ಭದಲ್ಲಿ ಅವಿನಾಶ್‌ನನ್ನು ಕೊಲೆ ಮಾಡಿದಂತೆ ನಿಮ್ಮನ್ನೂ ಕೊಲೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ಕಲಾವತಿ ಆರೋಪಿಸಿದ್ದಾರೆ. ಮತ್ತೊಮ್ಮೆ ಸಿಕ್ಕರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದರಿಂದ ತಮಗೆ ಭಯವಾಗುತ್ತಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.

ರಕ್ತಗಾಯವಾಗಿಲ್ಲ; ತನಿಖೆ ಆರಂಭ

ಹಲ್ಲೆಯಿಂದ ಯಾವುದೇ ರಕ್ತಗಾಯವಾಗಿಲ್ಲ ಮತ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿಲ್ಲ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಆದರೂ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 170/2026ರಡಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 352, 74, 115(2), 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಕರಣದ ಆರೋಪಿಗಳಾಗಿ ಹಳೆಯ ಬೊಮ್ಮನಕಟ್ಟೆಯ ಪ್ರವೀಣ (A1) ಮತ್ತು ದೇವೇಂದ್ರಪ್ಪ (A2) ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣವು ಶಿವಮೊಗ್ಗದ ಜೆಎಂಎಫ್‌ಸಿ 3ನೇ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಿಸಿದೆ.

Intimidation and death threats issued to the parents of the murdered Avinash  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close