SUDDILIVE || SHIVAMOGGA
ಸೆಪ್ಟೆಂಬರ್ 1ರಿಂದ 10ರವರೆಗೆ ಭದ್ರಾ ಬಲದಂಡೆ ನಾಲೆಗೆ ನೀರು ಬಿಡುಗಡೆ-Water to be released into the Bhadra Right Bank Canal from September 1 to 10.
ದಾವಣಗೆರೆ, ಚನ್ನಗಿರಿ ತಾಲ್ಲೂಕುಗಳ ಕುಡಿಯುವ ನೀರಿನ ಉದ್ದೇಶಕ್ಕೆ ಪ್ರತಿದಿನ 1,500 ಕ್ಯೂಸೆಕ್ ನೀರು ಹರಿಸಲು ನಿರ್ಧಾರ
ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಉದ್ದೇಶಕ್ಕಾಗಿ ಭದ್ರಾ ಬಲದಂಡೆ ನಾಲೆಯಿಂದ ನೀರು ಹರಿಸಲು ನಿರ್ಧರಿಸಲಾಗಿದೆ.
ಪ್ರಾದೇಶಿಕ ಆಯುಕ್ತರ ಆದೇಶದಂತೆ 2026ರ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 10ರವರೆಗೆ ಪ್ರತಿದಿನ 1,500 ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಇಂಪೌಂಡ್ ರಿಸರ್ವಿಯರ್‌ಗಳಿಗೆ ಹರಿಸಲಾಗುವುದು ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿಗೆ ಮಾತ್ರ ಬಳಕೆ
ನಾಲೆಯಲ್ಲಿ ಹರಿಸಲಾಗುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಈ ನೀರನ್ನು ಬಳಸಬಾರದು ಎಂದು ಸೂಚಿಸಲಾಗಿದೆ.
ಅಕ್ರಮವಾಗಿ ನೀರೆತ್ತಿದರೆ ಕ್ರಮ
ನಾಲೆಯಿಂದ ರೈತರು ಅಕ್ರಮವಾಗಿ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರನ್ನು ಸಮರ್ಪಕವಾಗಿ ಬಳಸುವಂತೆ ಸಾರ್ವಜನಿಕರು ಹಾಗೂ ರೈತರಿಗೆ ಮನವಿ ಮಾಡಲಾಗಿದೆ.
ಕಾಲುವೆ ಬಳಿ ಸಾರ್ವಜನಿಕರಿಗೆ ಎಚ್ಚರಿಕೆ
ನೀರು ಹರಿಯುವ ಅವಧಿಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ. ಕಾಲುವೆಯಲ್ಲಿ ತಿರುಗಾಡುವುದು, ಕಾಲುವೆಗೆ ಇಳಿಯುವುದು ಅಥವಾ ದನ-ಕರುಗಳನ್ನು ಕಾಲುವೆಗೆ ಇಳಿಸುವುದನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕೈಗೊಳ್ಳಲಾಗಿರುವ ಈ ಕ್ರಮಕ್ಕೆ ಸಾರ್ವಜನಿಕರು ಹಾಗೂ ರೈತಬಾಂಧವರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಮನವಿ ಮಾಡಿದೆ.
