SUDDILIVE || SHIVAMOGGA
ಗುಡೇಕಲ್ ಆಡಿಕೃತ್ತಿಕೆ ಹರೋಹರ ಜಾತ್ರೆ: ಸಾವಿರಾರು ಭಕ್ತರಿಂದ ಕಾವಡಿ ಸೇವೆ | ಆಗಸ್ಟ್ 7ರಂದು ಶಿವಮೊಗ್ಗದಲ್ಲಿ ಸಂಚಾರ ಮಾರ್ಗ ಬದಲಾವಣೆ-guddekal aadikruthike harohara jatre shivamogga traffic route change
ಶಿವಮೊಗ್ಗ ನಗರದ ತಮಿಳು ಸಮುದಾಯದವರ ಆರಾಧ್ಯ ದೈವವಾದ ಗುಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಿಕೃತ್ತಿಕೆ ಹರೋಹರ ಜಾತ್ರೆಗೆ ಚಾಲನೆ ದೊರೆತಿದ್ದು, ಇಂದು ಮತ್ತು ನಾಳೆ ಜಾತ್ರೆ ವೈಭವದಿಂದ ನಡೆಯುತ್ತಿದೆ. ಆಷಾಢ ಮಾಸದ ಭರಣಿ ಹಾಗೂ ಕೃತ್ತಿಕಾ ನಕ್ಷತ್ರದ ಹಿನ್ನೆಲೆಯಲ್ಲಿ ನಡೆಯುವ ಈ ಜಾತ್ರೆಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ತೀರಿಸುತ್ತಿದ್ದಾರೆ.
ಬೆಳಗಿನ ಜಾವ 4 ಗಂಟೆಯಿಂದಲೇ ನೂರಾರು ಭಕ್ತರು ಕುಟುಂಬ ಸಮೇತರಾಗಿ ನಗರದ ವಿವಿಧ ಭಾಗಗಳಿಂದ ಪಾದಯಾತ್ರೆ ಆರಂಭಿಸಿ ದೇವಸ್ಥಾನ ತಲುಪಿದರು. ಕೆಲವರು ಕಾವಡಿ ಹೊತ್ತು, ಕೆಲವರು ವೇಲಾಯುಧವನ್ನು ಬಾಯಿಗೆ ಚುಚ್ಚಿಕೊಂಡು, ಅರಿಶಿನದ ಮಡಿ ವಸ್ತ್ರ ಧರಿಸಿ, ಕಬ್ಬಿಣದ ಮುಳ್ಳಿನ ಪಾದುಕೆಗಳನ್ನು ತೊಟ್ಟು "ಹರೋ ಹರ" ಎಂಬ ಜಯಘೋಷದೊಂದಿಗೆ ಮಂಗಳವಾದ್ಯಗಳ ನಡುವೆ ದೇವಸ್ಥಾನ ಪ್ರವೇಶಿಸಿ ಭಕ್ತಿಭಾವ ಮೆರೆದರು. ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯರು ವಿವಿಧ ರೀತಿಯಲ್ಲಿ ಅಲಂಕರಿಸಿದ ಕಾವಡಿಗಳೊಂದಿಗೆ ದೇವರ ಸೇವೆಯಲ್ಲಿ ತೊಡಗಿರುವ ದೃಶ್ಯಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು.
ಮಳೆ ವಿರಾಮ; ಭಕ್ತರಿಗೆ ಅನುಕೂಲ
ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಮಳೆ ಸುರಿಯುವುದು ಸಾಮಾನ್ಯ. ಆದರೆ ಈ ಬಾರಿ ಮಳೆ ವಿರಾಮ ನೀಡಿರುವುದರಿಂದ ಸಾವಿರಾರು ಭಕ್ತರು ಯಾವುದೇ ತೊಂದರೆ ಇಲ್ಲದೆ ನಡೆದುಕೊಂಡು ಬಂದು ಹರಕೆ ತೀರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಈ ಬಾರಿ ತಂಪಾದ ವಾತಾವರಣದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.
ಅನ್ನಸಂತರ್ಪಣೆ, ಪ್ರಸಾದ ವಿತರಣೆ
ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ವಿವಿಧ ಕಡೆಗಳಲ್ಲಿ ಕಲ್ಪಿಸಲಾಗಿದೆ. ದೇವಸ್ಥಾನ ಸಮಿತಿಯೊಂದಿಗೆ ತಮಿಳು ಸಮುದಾಯದ ವಿವಿಧ ಸಂಘ-ಸಂಸ್ಥೆಗಳ ಸುಮಾರು 450ಕ್ಕೂ ಹೆಚ್ಚು ಸ್ವಯಂಸೇವಕರು ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅಗತ್ಯ ನೆರವು ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿಶೇಷ ಪೂಜೆ, ವಿವಿಧ ಜಿಲ್ಲೆಗಳಿಂದ ಭಕ್ತರ ಆಗಮನ
ಜಾತ್ರೆಯ ಅಂಗವಾಗಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಪುನಸ್ಕಾರಗಳು ನೆರವೇರಿದವು. ಶಿವಮೊಗ್ಗ, ಚಿತ್ರದುರ್ಗ, ಅರಸೀಕೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಆಗಸ್ಟ್ 7ರಂದು ವಾಹನ ಸಂಚಾರ ಮಾರ್ಗ ಬದಲಾವಣೆ
ಜಾತ್ರೆಯ ಹಿನ್ನೆಲೆಯಲ್ಲಿ ಆಗಸ್ಟ್ 7ರಂದು ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಶಿವಮೊಗ್ಗ ನಗರದಲ್ಲಿ ತಾತ್ಕಾಲಿಕ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ, ಬೆಂಗಳೂರು, ಭದ್ರಾವತಿ ಹಾಗೂ ಎನ್.ಟಿ. ರಸ್ತೆ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನಗಳು ಮತ್ತು ಬಸ್‌ಗಳು ಸಿಟಿ ಬಸ್ ನಿಲ್ದಾಣ ಮಾರ್ಗ ಬಳಸದೆ ಆರ್‌ಎನ್‌ಎಸ್ ಸರ್ಕಲ್ ಮೂಲಕ ಸಂಚರಿಸಬೇಕು.
ಹಾಗೆಯೇ ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿಕ್ಕಮಗಳೂರು ಹಾಗೂ ಹೊಳೆಹೊನ್ನೂರು ಕಡೆಗೆ ತೆರಳುವ ಭಾರಿ ವಾಹನಗಳು, ಎಲ್ಲಾ ಬಸ್‌ಗಳು ಹಾಗೂ ಸಿಟಿ ಬಸ್‌ಗಳು ಕೂಡ ಆರ್‌ಎನ್‌ಎಸ್ ಸರ್ಕಲ್ ಮಾರ್ಗವನ್ನೇ ಬಳಸುವಂತೆ ಸೂಚಿಸಲಾಗಿದೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ. ನಾಳೆ ಜಾತ್ರೆಯ ಪ್ರಮುಖ ದಿನವಾಗಿರುವುದರಿಂದ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ.
