ಪ್ರೊ. ಎಂ. ಗುರುಮೂರ್ತಿ ಅವರ 62ನೇ ಹುಟ್ಟುಹಬ್ಬ; ಆ.12ರಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ವಿಶೇಷ ಕಾರ್ಯಕ್ರಮ-Prof. M. Gurumurthy's 62nd Birthday; Special Event at McGann Hospital Premises on August 12

SUDDILIVE || SHIVAMOGGA

ಪ್ರೊ. ಎಂ. ಗುರುಮೂರ್ತಿ ಅವರ 62ನೇ ಹುಟ್ಟುಹಬ್ಬ; ಆ.12ರಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ವಿಶೇಷ ಕಾರ್ಯಕ್ರಮ-Prof. M. Gurumurthy's 62nd Birthday; Special Event at McGann Hospital Premises on August 12 

Birthday, gurumurthy

ಶಿವಮೊಗ್ಗ: ಪ್ರೊ. ಎಂ. ಗುರುಮೂರ್ತಿ ಅವರ 62ನೇ ಹುಟ್ಟುಹಬ್ಬದ ಪ್ರಯುಕ್ತ ಆ.12ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವಬಸಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಮೂಲ ಸಂಘಟನೆ 52ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತರ ಹಕ್ಕುಗಳಿಗಾಗಿ ಹೋರಾಡಿದ ಪ್ರೊ. ಎಂ. ಗುರುಮೂರ್ತಿ ಅವರ ಸೇವೆಯನ್ನು ಸ್ಮರಿಸಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

ನಾಲ್ಕು ದಶಕಗಳ ಸಾಮಾಜಿಕ ಹೋರಾಟ

ಪ್ರೊ. ಬಿ. ಕೃಷ್ಣಪ್ಪನವರ ಅಪ್ಪಟ ಶಿಷ್ಯರಾಗಿರುವ ಎಂ. ಗುರುಮೂರ್ತಿ ಅವರು ಕಳೆದ ನಾಲ್ಕು ದಶಕಗಳಿಂದ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ.

ಕರ್ನಾಟಕದಲ್ಲಿ ನಡೆದ ಭೂ ಹೋರಾಟಗಳು, ನಿವೇಶನ ರಹಿತರಿಗೆ ನಿವೇಶನ ಕೊಡಿಸುವ ಹೋರಾಟ, ಬಗರ್‌ಹುಕುಂ ಸಾಗುವಳಿ ಭೂಮಿಗಾಗಿ ನಡೆದ ಚಳವಳಿಗಳು ಸೇರಿದಂತೆ ಹಲವು ಹೋರಾಟಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ರಾಜ್ಯಾದ್ಯಂತ ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಇಲ್ಲದ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸ್ಮಶಾನ ಭೂಮಿ ಒದಗಿಸಲು ಸರ್ಕಾರದ ಸುತ್ತೋಲೆ ಹೊರಡಿಸುವ ನಿಟ್ಟಿನಲ್ಲಿಯೂ ಗುರುಮೂರ್ತಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಇದರೊಂದಿಗೆ ಚಂದ್ರಗುಪ್ತಿಯ ಅಮಾನವೀಯ ಹಾಗೂ ಅನಾಗರಿಕ ಬೆತ್ತಲೆ ಸೇವೆ ಪದ್ಧತಿಯ ವಿರುದ್ಧ ನಡೆದ ಹೋರಾಟದಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದ್ದರು.

200ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ವಿತರಣೆ

ಗುರುಮೂರ್ತಿ ಅವರ ಹುಟ್ಟುಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಕ್ರಮವಾಗಿ ರೂಪಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ನಾನ್-ಕ್ಲಿನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಸೇರಿದಂತೆ ಸುಮಾರು 200ರಿಂದ 250 ಮಹಿಳೆಯರಿಗೆ ಸೀರೆಗಳನ್ನು ಗೌರವಪೂರ್ವಕವಾಗಿ ವಿತರಿಸಲಾಗುತ್ತದೆ.

ಇದರ ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 250 ತೆಂಗಿನ ಸಸಿಗಳನ್ನು ವಿತರಿಸಲಾಗುವುದು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಉದ್ಘಾಟಿಸಲಿದ್ದು, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ಲ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ, ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಮೋಹನ್, ಚಿತ್ರದುರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕ ಗುರುನಾಥ್, ಕೆಪಿಸಿಸಿ ಸದಸ್ಯೆ ಹಾಗೂ ಗದಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ನಮ್ಮ ನಾಡು ದಿನಪತ್ರಿಕೆಯ ಸಂಪಾದಕ ಶಿವಕುಮಾರ್, ಕನ್ನಡ ಮೀಡಿಯಾ 24x7 ಸಂಪಾದಕ ಹೊನ್ನಾಳಿ ಚಂದ್ರಶೇಖರ್, ಸಹ್ಯಾದ್ರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರಸನ್ನ ಕುಮಾರ್, ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ. ಚಂದ್ರಪ್ಪ ಹಾಗೂ ಡಿಎಸ್ಎಸ್ ಗುರುಮೂರ್ತಿ ಅಭಿಮಾನಿಗಳ ಬಳಗದ ಅಧ್ಯಕ್ಷ ಹನುಮಂತಪ್ಪ ಹೆಡವಾಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಾಮಾಜಿಕ ಸಮಾನತೆ, ಶೋಷಿತರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಪ್ರೊ. ಎಂ. ಗುರುಮೂರ್ತಿ ಅವರ ಹುಟ್ಟುಹಬ್ಬದ ಕಾರ್ಯಕ್ರಮವು ಸಮಾಜಮುಖಿ ಸಂದೇಶ ಸಾರುವ ರೀತಿಯಲ್ಲಿ ನಡೆಯಲಿದೆ ಎಂದು  ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುಮೂರ್ತಿ ಅಭಿಮಾನಿಗಳಾದ ಏಳಕೋಟಿ, ಸಹಪ್ರಾಧ್ಯಾಪಕ ಚಂದ್ರಪ್ಪ, ಯಡವಾಲ ಹನುಮಂತಪ್ಪ, ಚಿಕ್ಕಮರಡಿ ರಮೇಶ್, ಅರ್ಜುನ್ ಮೊದಲಾದವರು ಉಪಸ್ಥಿತರಿದ್ದರು. 

Prof. M. Gurumurthy's 62nd Birthday; Special Event at McGann Hospital Premises on August 12

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close