SUDDILIVE || SHIVAMOGGA
ನೀವು ಕ್ವೆಶ್ಚನ್ ಕೇಳೋದು ತುಕ್ಕು ಹಿಡಿದಂಗೆ ಇರಬಾರದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದೇಕೆ?Why did Minister Madhu Bangarappa say that the way you ask questions should not be rusty?
ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಇದೆ ಎಂಬ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ದಿಕ್ಕು-ದೆಸೆ ಇಲ್ಲದವರು ಮಾತನಾಡುತ್ತಾರೆ ಎಂದು ಟೀಕಿಸಿರುವ ಅವರು, ರಾಜಕೀಯ ಟೀಕೆಗಳಿಗೆ ಖಾರವಾಗಿ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, “ಅವ್ರು ಮಾತಾಡೋರು, ಆ ಡಮ್ಮಿಯಾಗಿ ಆ ಪಕ್ಷದೊಳಗೆ ಎಲ್ಲಿ ಕೂತ್ಕೊಂಡವ್ರೆ? ದಿಕ್ಕು-ದೆಸೆ ಇಲ್ಲ, ಅದನ್ನ ಫಸ್ಟ್ ತೀರ್ಮಾನ ಮಾಡ್ಕೋಬೇಕು” ಎಂದು ಕುಮಾರ್ ಬಂಗಾರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಮಾತನಾಡಲು ಸಾಕಷ್ಟು ವಿಷಯಗಳಿವೆ. ಆದರೆ ಪ್ರತಿಯೊಂದು ಮಾತಿಗೂ ಉತ್ತರ ನೀಡುವ ಅಗತ್ಯವಿಲ್ಲ ಎಂದ ಅವರು, ಟೀಕೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಕಾರು ರಿಪೇರಿ ಮಾಡುವ ಉದಾಹರಣೆಯನ್ನೂ ನೀಡಿದರು.
“ಕೆಲವು ಸತಿ ಕಾರ್ ರಿಪೇರಿಗೆ ಹೋಗ್ತೀರಿ. ಅದೇ ಕಾರ್‌ನ ಎಷ್ಟು ರಿಪೇರಿ ಮಾಡ್ತೀರಿ? ಮಾಡಿ ಮಾಡಿ ಮಾಡಿ ಗ್ಯಾರೇಜ್ ಓನರ್ ಹೇಳಿಬಿಡ್ತಾನೆ, ‘ಇಲ್ಲ, ಇದು ತುಕ್ಕು ಹಿಡಿದಿದೆ, ರಿಪೇರಿ ಮಾಡೋಕೆ ಆಗಲ್ಲ’ ಅಂತ. ತುಕ್ಕು ಹಿಡ್ಕೊಂಡಿರೋ ಗಿರಾಕಿಗೆ ಇನ್ನೂ ಏನು ಉತ್ತರ ಕೊಡ್ತಕ್ಕಂತದ್ದು? ಅದೆಲ್ಲಾ ಕೊಡಬಾರ್ದು” ಎಂದು ಮಧು ಬಂಗಾರಪ್ಪ ಹೇಳಿದರು.
ಪತ್ರಕರ್ತರು ಕೇಳುವ ಪ್ರಶ್ನೆಗಳೂ ಮೌಲ್ಯಯುತವಾಗಿರಬೇಕು ಎಂದು ಸಲಹೆ ನೀಡಿದ ಸಚಿವರು, “ಡೋಂಟ್ ವೇಸ್ಟ್ ಯುವರ್ ಟೈಮ್ ಇನ್ ಆಸ್ಕಿಂಗ್ ಈವನ್ ಕ್ವೆಶ್ಚನ್ ಆಲ್ಸೋ. ನೀವು ಕ್ವೆಶ್ಚನ್ ಕೇಳೋದು ತುಕ್ಕು ಹಿಡಿದಂಗೆ ಇರಬಾರದು. ವ್ಯಾಲ್ಯೂಬಲ್ ಇರಬೇಕು. ಈ ರಾಜ್ಯಕ್ಕೆ, ದೇಶಕ್ಕೆ ಒಳ್ಳೆದಾಗಬೇಕು” ಎಂದರು. ಆದರೆ ರಾಜಕಾರಣ ಮತ್ತು ಪತ್ರಿಕೋದ್ಯಮ ಸಚಿವರ ಮೂಗಿನ ನೇರಕ್ಕೆ ನಡೆಯೊಲ್ಲವೆಂಬುದು ಅರ್ಥಮಾಡಿಕೊಳ್ಳಬೇಕಿದೆ.
ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಜನರ ಸಮಸ್ಯೆಗಳು ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಸಚಿವರು ನೀಡಿದರು. ಇದೇ ವೇಳೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಇದೆ ಎಂಬ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರ ಈ ತೀಕ್ಷ್ಣ ಪ್ರತಿಕ್ರಿಯೆ ಶಿವಮೊಗ್ಗದ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಮತ್ತೊಂದೆಡೆ, ಶಿಕ್ಷಣ ಇಲಾಖೆಯ ವಿವಿಧ ವಿಚಾರಗಳ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉಂಟಾದ ನೇಮಕಾತಿ, ಮೂಲಸೌಕರ್ಯ ಮತ್ತು ಇತರೆ ಬಾಕಿ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ ಎಂದು ಹೇಳಿದರು. ಅಗತ್ಯವಿರುವ ಹುದ್ದೆಗಳನ್ನು ‘ಕ್ರಿಟಿಕಲ್ ಪೋಸ್ಟ್’ ಎಂದು ಪರಿಗಣಿಸಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಕ್ಷಕರ ನೇಮಕಾತಿ, ವರ್ಗಾವಣೆ-ಮುಂಬಡ್ತಿ, ಶಾಲಾ ಕೊಠಡಿಗಳ ದುರಸ್ತಿ, ಮಕ್ಕಳಿಗೆ ಶೂ-ಸಾಕ್ಸ್ ವಿತರಣೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
“ಸಮಸ್ಯೆ ಇದೆ ಎಂದು ಹೇಳಿ ನಾನು ತಪ್ಪಿಸಿಕೊಂಡು ಹೋಗೋದಿಲ್ಲ. ಪರಿಹಾರ ಹುಡುಕ್ತೀವಿ, ಹಂತ ಹಂತವಾಗಿ ಮಾಡ್ತೀವಿ. ವಿಶ್ವಾಸ ಇಟ್ಟುಕೊಳ್ಳಿ” ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆ ಕಲಾಪಕ್ಕೆ ಅಡ್ಡಿಯಾಗದಂತೆ ಚರ್ಚೆಗೆ ಬನ್ನಿ: ಸಚಿವರ ಮನವಿ
ಶಿವಮೊಗ್ಗ: ವಿಧಾನಸಭೆ ಅಧಿವೇಶನದ ಕಲಾಪ ಸ್ಥಗಿತಗೊಳ್ಳದಂತೆ ವಿರೋಧ ಪಕ್ಷದವರು ಪ್ರತಿಭಟನೆ ಬದಿಗಿಟ್ಟು ಸದನದಲ್ಲಿ ಚರ್ಚೆಗೆ ಬರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ನಾಗೇಂದ್ರ ಅವರ ವಿಚಾರ ಸೇರಿದಂತೆ ವಿರೋಧ ಪಕ್ಷದವರು ಮುಂದಿಟ್ಟಿರುವ ಬೇಡಿಕೆಗಳ ಕುರಿತು ವಿಧಾನಸಭೆಯಲ್ಲೇ ಚರ್ಚೆ ನಡೆಸಿ, ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಂದೆ ವಿಷಯಗಳನ್ನು ಇಟ್ಟು ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಚರ್ಚೆಯೇ ನಡೆಯದೆ ಯಾವುದೇ ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಸಚಿವರು ಹೇಳಿದರು.
ಸೋಮವಾರ ನಡೆಯಲಿರುವ ಬಿಎಸಿ ಸಭೆಯಲ್ಲಿ ಅಧಿವೇಶನದ ಮುಂದಿನ ಕಾರ್ಯಕಲಾಪಗಳ ಕುರಿತು ತೀರ್ಮಾನವಾಗಲಿದೆ. ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಪ್ರತಿಭಟನೆ ಮಾಡುವ ಬದಲು ಸದನದಲ್ಲಿ ಚರ್ಚೆ ನಡೆಸುವುದು ರಾಜ್ಯದ ಜನರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ಆರೋಪ ಸಾಬೀತಾಗುವವರೆಗೆ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲಾಗದು
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ರಾಜ್ಯಪಾಲರ ಅನುಮತಿ ಕೇಳಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇವಲ ಆರೋಪ ಕೇಳಿಬಂದ ಮಾತ್ರಕ್ಕೆ ವ್ಯಕ್ತಿಯೊಬ್ಬರನ್ನು ತಪ್ಪಿತಸ್ಥರೆಂದು ಪರಿಗಣಿಸಲು ಸಾಧ್ಯವಿಲ್ಲ. ಕಾನೂನು ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ತನಿಖೆಗಳು ನಡೆದಿವೆ. ಮುಂದಿನ ಕ್ರಮಗಳನ್ನು ಕಾನೂನಿನ ಪ್ರಕಾರ ಕೈಗೊಳ್ಳಲಾಗುತ್ತದೆ. ಪ್ರತಿಯೊಂದು ವಿಚಾರವನ್ನೂ ರಾಜಕೀಯವಾಗಿ ಚರ್ಚಿಸುವುದಕ್ಕಿಂತ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷ ಪ್ರಶ್ನೆ ಕೇಳಲಿ, ಸರ್ಕಾರ ಉತ್ತರಿಸಲು ಸಿದ್ಧವಿದೆ ಎಂದರು.
ದ್ವೇಷದ ರಾಜಕಾರಣದ ಆರೋಪಕ್ಕೆ ತಿರುಗೇಟು
ದ್ವೇಷದ ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ವಿವಿಧ ಘಟನೆಗಳ ಕುರಿತು ಪ್ರಶ್ನೆಗಳನ್ನು ಎತ್ತುವ ಅಗತ್ಯವಿದೆ ಎಂದು ಹೇಳಿದರು. ರಾಮನ ಹುಂಡಿ ಕಳ್ಳತನ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಇವೆಲ್ಲವೂ ಸಾರ್ವಜನಿಕವಾಗಿ ಚರ್ಚೆಯಾಗಬೇಕಾದ ವಿಷಯಗಳಾಗಿವೆ ಎಂದರು.
“ನಮ್ಮನ್ನ ಟೀಕಾ-ಟಿಪ್ಪಣಿ ಮಾಡಬೇಕಾದರೆ ಚರ್ಚೆಯಲ್ಲೇ ಮಾಡಿ. ಅದರಿಂದ ರಾಜ್ಯದ ಜನರಿಗೆ ಪರಿಹಾರ ಸಿಗುತ್ತದೆ. ಆರೋಪ-ಪ್ರತ್ಯಾರೋಪಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ” ಎಂದು ಸಚಿವರು ಹೇಳಿದರು.
ನೀರು ಬಿಡುಗಡೆ ಕುರಿತು ಮುಖ್ಯಮಂತ್ರಿಗಳೇ ಅಂತಿಮ ತೀರ್ಮಾನ
ನೀರು ಬಿಡುಗಡೆಗೆ ಸಂಬಂಧಿಸಿದಂತೆ ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಭಾಗಗಳಿಂದ ಬಂದಿರುವ ಮನವಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. 2013ರಿಂದ ಇಂದಿನವರೆಗೆ ಅಣೆಕಟ್ಟಿನ ನೀರು ಬಿಡುಗಡೆ, ಬೆಳೆ ಪ್ರದೇಶ, ಬೆಳೆಗಳ ಪ್ರಮಾಣ ಸೇರಿದಂತೆ ವಿವಿಧ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯನ್ನು ಸಚಿವ ಚೆಲುವರಾಯಸ್ವಾಮಿ ಅವರಿಗೆ ನೀಡಲಾಗಿದ್ದು, ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಈಗಾಗಲೇ ನೀರಿನ ಸಮಸ್ಯೆ ಎಲ್ಲೆಡೆ ಉಂಟಾಗುವ ಸಾಧ್ಯತೆ ಬಗ್ಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಎಲ್ಲಾ ಮಾಹಿತಿಯನ್ನು ತಂದು ಅವರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮುಂದಿನ ವಾರ ಈ ಕುರಿತು ಹೆಚ್ಚಿನ ವಿವರಗಳು ತಿಳಿಯಲಿವೆ ಎಂದರು.
ಕೆಪಿಎಸ್ ಶಾಲೆಗಳಿಗೆ ಅನುದಾನ, ಕೊಠಡಿ ಮತ್ತು ಶೌಚಾಲಯ
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ನಿರ್ವಹಣೆ ಕುರಿತು ಮಾತನಾಡಿದ ಸಚಿವರು, ಕೆಪಿಎಸ್ ಕೂಡ ಸರ್ಕಾರಿ ಶಾಲೆಯಾಗಿರುವುದರಿಂದ ಅಗತ್ಯ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಲೆಗಳ ದುರಸ್ತಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಕೆಲವು ಶಾಲೆಗಳಲ್ಲಿ ಶೌಚಾಲಯ ಸೇರಿದಂತೆ ಸಮಸ್ಯೆಗಳಿರುವುದು ಸರ್ಕಾರದ ಗಮನದಲ್ಲಿದ್ದು, ಅವುಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳಿದ್ದು, ಎಲ್ಲ ಶಾಲೆಗಳಿಗೂ ನಿರ್ವಹಣೆಗಾಗಿ ಹಣ ನಿಗದಿಪಡಿಸಲಾಗಿದೆ. ಕೆಲವೆಡೆ ಸಮಸ್ಯೆಗಳಿದ್ದರೆ ಅವುಗಳನ್ನು ನಿರ್ಲಕ್ಷಿಸುವುದಿಲ್ಲ. ನಿರ್ದಿಷ್ಟ ಶಾಲೆಯ ಸಮಸ್ಯೆಯನ್ನು ತಿಳಿಸಿದರೆ ಪ್ರಕರಣವಾರು ಪರಿಶೀಲಿಸಿ ಪರಿಹಾರ ಒದಗಿಸುವುದಾಗಿ ಸಚಿವರು ಭರವಸೆ ನೀಡಿದರು.
ಸಾರ್ವಜನಿಕರು ಕೂಡ ಶಾಲೆಗಳ ಅಭಿವೃದ್ಧಿಲ್ಲಿ ಸಹಭಾಗಿತ್ವ ವಹಿಸಬೇಕು ಎಂದು ಮನವಿ ಮಾಡಿದ ಸಚಿವರು, ಮಾಧ್ಯಮಗಳು ನಿರ್ದಿಷ್ಟ ಶಾಲೆ ಅಥವಾ ಪ್ರದೇಶದ ಸಮಸ್ಯೆಯನ್ನು ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.
ಗ್ರಾಮೀಣ ಶಾಲೆಗಳಿಗೆ ಬಸ್ ಸೌಲಭ್ಯ: ಸಮಸ್ಯೆಗಳ ಮಾಹಿತಿ ನೀಡಿ
ಗ್ರಾಮೀಣ ಭಾಗದ ಶಾಲೆಗಳಿಗೆ ಬಸ್ ಸೌಲಭ್ಯ ಕೊರತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪ್ರತಿಯೊಂದು ಶಾಲೆಗೂ ಪ್ರತ್ಯೇಕವಾಗಿ ಬಸ್ ವ್ಯವಸ್ಥೆ ಕಲ್ಪಿಸುವುದು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮಾರ್ಗಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಸ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇಂತಹ ಸಮಸ್ಯೆಗಳಿರುವ ಶಾಲೆ ಹಾಗೂ ಮಾರ್ಗಗಳ ವಿವರಗಳನ್ನು ತಮ್ಮ ಕಚೇರಿಗೆ ನೀಡಬೇಕು. ಕೆಡಿಪಿ ಸಭೆಯಲ್ಲೂ ಈ ಕುರಿತು ಹೇಳಲಾಗಿದೆ. ಮಾಧ್ಯಮದವರು ಕೂಡ ನಿರ್ದಿಷ್ಟ ಮಾಹಿತಿ ನೀಡಿದರೆ ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಅನಧಿಕೃತವಾಗಿ ಚರ್ಚೆಯಾಗಿರುವ ಮಾಹಿತಿ ಇದ್ದರೂ, ಅದು ತಮ್ಮ ಇಲಾಖೆಗೆ ಸಂಬಂಧಿಸಿದ ಅಂತಿಮ ನಿರ್ಧಾರವಲ್ಲ. ಸಂಪುಟದ ಅಧಿಕೃತ ತೀರ್ಮಾನವಾದ ಬಳಿಕವೇ ಅದನ್ನು ಖಚಿತವಾಗಿ ಹೇಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದ ಶಾಲೆಗಳು, ವಿದ್ಯಾರ್ಥಿಗಳು, ನೀರಿನ ಸಮಸ್ಯೆ ಹಾಗೂ ವಿಧಾನಸಭಾ ಕಲಾಪದಂತಹ ಪ್ರಮುಖ ವಿಚಾರಗಳ ಬಗ್ಗೆ ಸರ್ಕಾರ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗದೆ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು.
Why did Minister Madhu Bangarappa say that the way you ask questions should not be rusty?
