SUDDILIVE ||
ಸಚಿವರಾದ ಬಳಿಕ ಮೊದಲ ಬಾರಿಗೆ ಸೊರಬಕ್ಕೆ ಮಧು ಬಂಗಾರಪ್ಪ ಭೇಟಿ: ಅದ್ದೂರಿ ಸ್ವಾಗತMadhu Bangarappa visits Soraba for the first time after becoming a minister: Grand welcome.
ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇದೇ ಮೊದಲ ಬಾರಿಗೆ ಸೊರಬ ಕ್ಷೇತ್ರಕ್ಕೆ ಆಗಮಿಸಿದ ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು.
ಸಚಿವರಾಗಿ ಆಯ್ಕೆಯಾದ ಬಳಿಕ ಇಂದು ಸೊರಬಕ್ಕೆ ಆಗಮಿಸಿದ ಮಧು ಬಂಗಾರಪ್ಪ ಅವರನ್ನು ಬಂಗಾರ ಧಾಮದಲ್ಲಿ ಅಭಿಮಾನಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಸಚಿವರು ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಹೂವಿನ ಸುರಿಮಳೆ ಹರಿಸಿದ ಅಭಿಅನಿಗಳು ಗುಚ್ಚ ನೀಡಿ ಶುಭಾಶಯ ಕೋರಿದರು, ಈ ವೇಳೆ ಪಟಾಕಿ ಸಿಡಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವ ಮಧು ಬಂಗಾರಪ್ಪ ಅವರ ಪರ ಘೋಷಣೆಗಳನ್ನು ಕೂಗಿ ಅಭಿನಂದಿಸಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಬಂಗಾರ ಧಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸ್ಮಾರಕಗಳಿಗೆ ಪೂಜೆ
ಬಂಗಾರ ಧಾಮಕ್ಕೆ ಆಗಮಿಸಿದ ಬಳಿಕ ಸಚಿವ ಮಧು ಬಂಗಾರಪ್ಪ ಅವರು ತಮ್ಮ ತಾಯಿ ಶ್ರೀಮತಿ ಶಕುಂತಲಾ ಬಂಗಾರಪ್ಪ ಹಾಗೂ ದಿವಂಗತ ಸಾರಿಕೊಪ್ಪ ಬಂಗಾರಪ್ಪ ಅವರ ಸ್ಮಾರಕಗಳಿಗೆ ಪೂಜೆ ಸಲ್ಲಿಸಿದರು.
ತಂದೆತಾಯಿಯ ಸ್ಮಾರಕಗಳಿಗೆ ಗೌರವ ಸಲ್ಲಿಸಿದ ಬಳಿಕ ಅವರು ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ , ಆಪ್ತರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಚಿವರಾದ ಬಳಿಕ ಕ್ಷೇತ್ರಕ್ಕೆ ಮೊದಲ ಭೇಟಿ ಅಭಿಮಾನಿಗಳ ನಿರೀಕ್ಷೆ
ಸಚಿವ ಸ್ಥಾನ ದೊರೆತ ಬಳಿಕ ಮಧು ಬಂಗಾರಪ್ಪ ಅವರು ಮೊದಲ ಬಾರಿಗೆ ಸೊರಬಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು. ಸಚಿವರ ಆಗಮನವನ್ನು ಸ್ವಾಗತಿಸಲು ವಿವಿಧ ಭಾಗಗಳಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿದ್ದರು.
ಸೊರಬ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ನಿರೀಕ್ಷೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಸಚಿವ ಸ್ಥಾನ ದೊರೆತಿರುವುದು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.
ಮಧು ಬಂಗಾರಪ್ಪ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರಕ್ಕೆ ಆಗಮಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಚಿವರು ಹೆಚ್ಚಿನ ಗಮನ ಹರಿಸಲಿದ್ದಾರೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ.
ಸಚಿವರ ಸೊರಬ ಭೇಟಿ ಹಿನ್ನೆಲೆಯಲ್ಲಿ ಬಂಗಾರ ಧಾಮ ಸೇರಿದಂತೆ ವಿವಿಧೆಡೆ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಂಭ್ರಮ ಮನೆಮಾಡಿತ್ತು.
Bangarappa visits Soraba for the first time after becoming a minister: Grand welcome.


