ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಸುಲಭ; ಪರ್ಯಾಯ ಸೂಚಿಸುವುದು ಮುಖ್ಯ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್- Criticizing democracy is easy; suggesting an alternative is what matters: Retired Justice Nagamohan Das

SUDDILIVE || SHIVAMOGGA

ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಸುಲಭ; ಪರ್ಯಾಯ ಸೂಚಿಸುವುದು ಮುಖ್ಯ: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್- Criticizing democracy is easy; suggesting an alternative is what matters: Retired Justice Nagamohan Das   

Nagmohan, das




ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಟೀಕಿಸುವುದರ ಜೊತೆಗೆ ಅದಕ್ಕೆ ಸೂಕ್ತವಾದ ಪರ್ಯಾಯವನ್ನೂ ಸೂಚಿಸಬೇಕು. ಆಗ ಮಾತ್ರ ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್, ಶಿವಮೊಗ್ಗ ಸಹಯೋಗದಲ್ಲಿ ಆಯೋಜಿಸಿದ್ದ ತಮ್ಮ ‘Memorable Trials’ (ಅವಿಸ್ಮರಣೀಯ ಪ್ರಕರಣಗಳು) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮಗಳಷ್ಟೇ ನ್ಯಾಯಾಂಗವೂ ಪ್ರಮುಖ ಅಂಗವಾಗಿದೆ ಎಂದರು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಎಲ್ಲ ವ್ಯವಸ್ಥೆಗಳ ಮೇಲಿನ ಜನರ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಚರ್ಚಿಸಿ, ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

“Criticism is easy, but what is alternative that you can provide is very important” ಎಂದು ಹೇಳಿದ ಅವರು, ಟೀಕೆ ಮಾಡಬಾರದು ಎಂದಲ್ಲ; ಆದರೆ ಟೀಕೆಯ ಜೊತೆಗೆ ಪರ್ಯಾಯವನ್ನೂ ನೀಡಬೇಕು. ಈ ಮೂಲಕ ಸಮಾಜವನ್ನು ಒಳ್ಳೆಯ ದಿಕ್ಕಿನಲ್ಲಿ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನ್ಯಾಯಾಂಗದ ಲೋಪದೋಷಗಳ ಬಗ್ಗೆಯೂ ಕೃತಿಯಲ್ಲಿ ಪ್ರಶ್ನೆ

ತಮ್ಮ ಕೃತಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಹಲವು ಲೋಪದೋಷಗಳನ್ನು ಪ್ರಶ್ನಿಸಿರುವುದಾಗಿ ತಿಳಿಸಿದ ನಾಗಮೋಹನ್ ದಾಸ್, ಸತ್ಯವನ್ನು ಹೇಳಿದವರು, ನ್ಯಾಯಕ್ಕಾಗಿ ಹೋರಾಡಿದವರು ಹಾಗೂ ಸರ್ಕಾರದ ನೀತಿಗಳನ್ನು ವಿಮರ್ಶಿಸಿದವರು ಕೆಲ ಸಂದರ್ಭಗಳಲ್ಲಿ ನ್ಯಾಯಾಂಗದ ತೀರ್ಪುಗಳು ಮತ್ತು ಕಾನೂನುಗಳ ಮೂಲಕ ಶಿಕ್ಷೆಗೆ ಒಳಗಾದ ಉದಾಹರಣೆಗಳಿವೆ ಎಂದರು.

ಇದಕ್ಕೆ ಉದಾಹರಣೆಯಾಗಿ ಅಮೆರಿಕದ ಜಾರ್ಜ್ ಸ್ಟಿನ್ನಿ ಪ್ರಕರಣವನ್ನು ಪ್ರಸ್ತಾಪಿಸಿದರು. 14 ವರ್ಷದ ಬಾಲಕ ಜಾರ್ಜ್ ಸ್ಟಿನ್ನಿಗೆ ಮರಣದಂಡನೆ ವಿಧಿಸಲಾಗಿತ್ತು. ವಿದ್ಯುತ್ ಕುರ್ಚಿಯ ಮೂಲಕ ಮರಣದಂಡನೆಗೆ ಗುರಿಯಾದ ಬಳಿಕ ಸುಮಾರು 70 ವರ್ಷಗಳ ನಂತರ ನ್ಯಾಯಾಲಯ ಆ ಪ್ರಕರಣವನ್ನು ಮರುಪರಿಶೀಲಿಸಿ ಆತ ನಿರಪರಾಧಿ ಎಂದು ತೀರ್ಪು ನೀಡಿತು ಎಂದು ವಿವರಿಸಿದರು.

“ತಪ್ಪು ತೀರ್ಪಿನಿಂದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡ ನಂತರ ನ್ಯಾಯಾಲಯ ತಪ್ಪನ್ನು ಒಪ್ಪಿಕೊಂಡರೂ ಆ ವ್ಯಕ್ತಿ ಮರಳಿ ಬರುವುದಿಲ್ಲ. ಆದರೆ ಆ ಕುಟುಂಬಕ್ಕೆ ಅಂಟಿರುವ ಸಾಮಾಜಿಕ ಕಳಂಕವನ್ನು ನಿವಾರಿಸುವ ಜವಾಬ್ದಾರಿ ಯಾರದ್ದು? ತಪ್ಪು ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆಗೆ ಗುರಿಪಡಿಸಿದ ಸರ್ಕಾರ, ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಕ್ಷಮೆಯಾಚಿಸಬೇಕೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ” ಎಂದು ಅವರು ಹೇಳಿದರು.

ಮರಣದಂಡನೆಯನ್ನು ಮುಂದುವರಿಸಬೇಕೇ ಅಥವಾ ರದ್ದುಪಡಿಸಬೇಕೇ ಎಂಬ ಕುರಿತು ಸಮಾಜದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಇಂತಹ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಆ ಪ್ರಶ್ನೆಗಳು ಮತ್ತು ವಿಮರ್ಶೆಗಳ ಮೂಲಕ ಹೊಸ ದಾರಿಯನ್ನು ಕಂಡುಕೊಂಡು ಉತ್ತಮ ಸಮಾಜ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಯುವಜನರಲ್ಲಿ ತ್ಯಾಗದ ಮನೋಭಾವ ಬೆಳೆಸುವ ಆಶಯ

ತಮ್ಮ ಕೃತಿಯ ಉದ್ದೇಶದ ಕುರಿತು ಮಾತನಾಡಿದ ಅವರು, ಇಂದಿನ ಯುವಜನರಲ್ಲಿ ದೇಶ ಮತ್ತು ಸಮಾಜದ ಬಗ್ಗೆ ಚಿಂತನೆ ಹಾಗೂ ತ್ಯಾಗದ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದರು.

“ಕಾಫಿ, ಬ್ರೇಕ್‌ಫಾಸ್ಟ್, ಲಂಚ್ ಯಾವುದೂ ಮಿಸ್ ಆಗಬಾರದು ಎಂಬ ಮನೋಭಾವದ ನಡುವೆ ದೇಶ ಮತ್ತು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಚಿಂತನೆಯನ್ನೂ ಯುವಜನರಲ್ಲಿ ಬಿತ್ತಬೇಕಾಗಿದೆ. ಈ ಕೃತಿ ಯುವ ಪೀಳಿಗೆಯಲ್ಲಿ ದೇಶ ಮತ್ತು ಸಮಾಜಕ್ಕಾಗಿ ತ್ಯಾಗದ ಮನೋಭಾವವನ್ನು ಹುಟ್ಟುಹಾಕಲು ಸಾಧ್ಯವಾದರೆ, ಪುಸ್ತಕ ಬರೆದಿರುವುದು ಸಾರ್ಥಕ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿ ತಮ್ಮ ಅನುಭವ, ಅಭಿಪ್ರಾಯ ಹಾಗೂ ವಿಚಾರಗಳನ್ನು ಹಂಚಿಕೊಂಡರು. ಪ್ರೇಕ್ಷಕರು ಹಾಗೂ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಲಾಯರ್ಸ್ ಗಿಲ್ಡ್ ನ ವಕೀಲ ಶ್ರೀಪಾಲ, ಡಿಎಸ್ಎಸ್ ನ ಗುರುಮೂರ್ತಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪತ್ರಕರ್ತ ಹರ್ಷ ಕುಗ್ವೆ ಮೊದಲಾದವರು ಉಪಸ್ಥಿತರಿದ್ದರು. 

Criticizing democracy is easy; suggesting an alternative is what matters: Retired Justice Nagamohan Das 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close