SUDDILIVE || SHIVAMOGGA
ನೀನಾಸಂ ಸತೀಶ್ ನೋಡಲು ಮುಗಿಬಿದ್ದ ಅಭಿಮಾನಿಗಳು-Fans flocked to see Neenasam Satish
ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಟ ನೀನಾಸಂ ಸತೀಶ್ ಶಿವಮೊಗ್ಗದ ವೀರಭದ್ರ ಚಲನಚಿತ್ರ ಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು.
ಸತೀಶ್ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಚಿತ್ರಮಂದಿರದ ಆವರಣದಲ್ಲಿ ಅಭಿಮಾನಿಗಳಿಂದ ಜೋರಾದ ಕೇಕೆ, ಚಪ್ಪಾಳೆ ಹಾಗೂ ಹರ್ಷೋದ್ಗಾರಗಳು ಕೇಳಿಬಂದವು.
ನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನೀನಾಸಂ ಸತೀಶ್, ‘ಅಯೋಗ್ಯ 2’ ಚಿತ್ರದ ಪಾರ್ಟ್ 2 ಇಷ್ಟವಾಗಿದೆಯೇ? ಪಾರ್ಟ್ 3 ಬೇಕಾ? ಎಂದು ಕೇಳಿದರು. ಇದಕ್ಕೆ ಅಭಿಮಾನಿಗಳು ಜೋರಾಗಿ “ಬೇಕಿದೆ” ಎಂದು ಪ್ರತಿಕ್ರಿಯಿಸಿದರು.
ಅಭಿಮಾನಿಗಳ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ ತಿಳಿಸಿದ ಸತೀಶ್, ಅಭಿಮಾನಿಗಳ ಆಶೀರ್ವಾದ ಮತ್ತು ಪ್ರೀತಿಗೆ ಪ್ರತಿಯಾಗಿ ‘ಅಯೋಗ್ಯ’ ಚಿತ್ರದ ಪಾರ್ಟ್ 3 ಮಾಡುವುದಾಗಿ ಘೋಷಿಸಿದರು. “ನಿಮ್ಮ ಪ್ರೀತಿ ಗೆಲ್ಲಿಸ್ತೀವಿ, ಮತ್ತೆ ಬರ್ತೀವಿ” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.
“ಅಣ್ಣ ಬಂದರೆ ಜೋಶ್ ಬರುತ್ತದೆ, ಮಾತಾಡಿದರೆ ಶಕ್ತಿ ಬರುತ್ತದೆ, ಧೈರ್ಯ ಬರುತ್ತದೆ” ಎಂದು ಅಭಿಮಾನಿಗಳ ಉತ್ಸಾಹದ ನಡುವೆ ಹೇಳಿದ ಅವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ನೀನಾಸಂ ಸತೀಶ್ ಅವರನ್ನು ನೇರವಾಗಿ ಕಂಡು, ಅವರೊಂದಿಗೆ ಸಿನಿಮಾ ವೀಕ್ಷಿಸಿದ ಅಭಿಮಾನಿಗಳ ಸಂಭ್ರಮ ವೀರಭದ್ರ ಚಿತ್ರಮಂದಿರದಲ್ಲಿ ಮುಗಿಲು ಮುಟ್ಟಿತ್ತು. ಇದಾದಮೇಲೆ ದಾವಣಗೆರೆ ರಾಣೇಬೆನ್ನೂರು ಮತ್ತು ಹುಬ್ಬಳ್ಳಿಗೆ ಹೋಗುತ್ತಿರುವುದಾಗಿ ನೀನಾಸಂ ಸತೀಶ್ ತಿಳಿಸಿದರು.





