SUDDILIVE || SHIVAMOGGA
ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ತೀವ್ರ: ಕಲೀಮ್ ಪಾಷಾ ವಿರುದ್ಧ ರಂಗೇಗೌಡ ಬೆಂಬಲಿಗರ ಧರಣಿ-shivamogga congress kaleem pasha rangegowda protest
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನಾಭಿಪ್ರಾಯ ಇದೀಗ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಲಾಟೆಯ ಬೆನ್ನಲ್ಲೇ ಇಂದು ಕಚೇರಿ ಎದುರು ರಂಗೇಗೌಡ ಬೆಂಬಲಿಗರು ಧರಣಿ ನಡೆಸಿದ್ದು, ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿ ಹೊರಹೊಮ್ಮಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಕಚೇರಿ ಬಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ ಕಾಂಗ್ರೆಸ್ ಮುಖಂಡ ಕಲೀಮ್ ಪಾಷಾ ಅವರು ಕಾರಿನಲ್ಲಿ ಆಗಮಿಸಿ ಕಚೇರಿಗೆ ತೆರಳಲು ಮುಂದಾದಾಗ, ರಂಗೇಗೌಡ ಬೆಂಬಲಿಗರು ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ.
ಮಾತಿನ ಚಕಮಕಿ ತೀವ್ರಗೊಂಡು ಕಲೀಮ್ ಪಾಷಾ ಅವರ ಮೇಲೆ ಹಲ್ಲೆಗೆ ಮುಂದಾದ ಆರೋಪವೂ ಕೇಳಿಬಂದಿದೆ. ಪರಿಸ್ಥಿತಿ ಕೈಮೀರುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಬಳಿಕ ಕಲೀಮ್ ಪಾಷಾ ಅವರನ್ನು ಸ್ಥಳದಿಂದ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಜಯನಗರ ಪೊಲೀಸರ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಯನಗರ ಠಾಣೆ ಪೊಲೀಸರು ಕಾಂಗ್ರೆಸ್ ಕಚೇರಿ ಬಳಿ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಸ್ಥಳದಲ್ಲಿ ನಿಗಾ ವಹಿಸಲಾಯಿತು.
ನಿನ್ನೆ ನಡೆದ ಗಲಾಟೆಯ ಬೆನ್ನಲ್ಲೇ ಇಂದು ಮತ್ತೆ ಮಾತಿನ ಚಕಮಕಿ ಹಾಗೂ ಹಲ್ಲೆ ಯತ್ನದ ಆರೋಪ ಕೇಳಿಬಂದಿರುವುದು ಪೊಲೀಸರಿಗೂ ಸವಾಲು ತಂದಿದೆ. ಕಾಂಗ್ರೆಸ್ ಕಚೇರಿ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಕಾಂಗ್ರೆಸ್ ಕಚೇರಿ ಎದುರು ರಂಗೇಗೌಡ ಬೆಂಬಲಿಗರ ಧರಣಿ
ಇದರ ನಡುವೆ ರಂಗೇಗೌಡ ಬೆಂಬಲಿಗರು ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಕ್ತ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಸಂಘಟನೆಗಾಗಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸಿ, ಇತ್ತೀಚೆಗೆ ರಾಜಕೀಯವಾಗಿ ಗುರುತಿಸಿಕೊಂಡವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಧರಣಿನಿರತರು, “ಕೇವಲ ಫ್ಲೆಕ್ಸ್ ಹಾಕಿಸಿಕೊಂಡು ಇತ್ತೀಚೆಗೆ ರಾಜಕೀಯಕ್ಕೆ ಬಂದವರಿಗೆ ಮಣೆ ಹಾಕಬಾರದು. ಪಕ್ಷಕ್ಕಾಗಿ ವರ್ಷಗಳಿಂದ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರಿಗೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆ ನಿರತರನ್ನ ಪಕ್ಷದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಎದುರು ಸಂಧಾನ ಮಾಡಿಸಲು ಎತ್ನಿಸಲಾಯಿತು. ಕಲೀಂ ಪಾಷರನ್ನ ಸ್ಥಳಕ್ಕೆ ಕರೆಯಿಸಿ ಕ್ಷಮೆಯಾಚಿಸುವಂತೆ ಕೋರಲಾಯಿತು. ಸಂಜೆ ನಾಲ್ಕು ಗಂಟೆಯ ವರೆಗೆ ಅಧ್ಯಕ್ಷರು ಸಮಯಾವಧಿ ಕೋರಿದ್ದಾರೆ. ಅದಕ್ಕೂ ಜಗ್ಗದ ಪ್ರತಿಭಟನಾಕಾರರು ಸಭೆ ಮುಗಿಸಿ ಹೊರಗಡೆ ಬಂದಿದ್ದಾರೆ. ಇಂದು ಸವಿವ ಮಧು ಬಂಗಾರಪ್ಪ ನಗರಕ್ಕೆ ಆಗಮಿಸುತ್ತಿದ್ದು ಅವರ ಎದುರು ಸಂಧಾನ ನಡೆಯಲಿದೆಯಾ ಎಂಬ ಕುತೂಹಲ ಹೆಚ್ಚಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಹಿನ್ನೆಲೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷದ ವಿವಿಧ ಬಣಗಳಲ್ಲಿ ಅಭಿಪ್ರಾಯಭೇದಗಳಿದ್ದು, ಇದೀಗ ಅದು ಬಹಿರಂಗ ಪ್ರತಿಭಟನೆ ಹಾಗೂ ಪರಸ್ಪರ ವಾಗ್ವಾದದ ಹಂತಕ್ಕೆ ತಲುಪಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯರನ್ನು ಒಳಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದರು. ಇದರ ಬೆನ್ನಲ್ಲೇ ಇಂದು ಮತ್ತೆ ಕಚೇರಿ ಬಳಿ ಉದ್ವಿಗ್ನತೆ ಕಾಣಿಸಿಕೊಂಡಿದೆ.
ನಾಯಕತ್ವದ ನಿರ್ಧಾರದತ್ತ ಎಲ್ಲರ ಚಿತ್ತ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಹಾಗೂ ವೀಕ್ಷಕರು ನಡೆಸುತ್ತಿರುವ ಪ್ರಕ್ರಿಯೆಯ ನಡುವೆಯೇ ಈ ರೀತಿಯ ಆಂತರಿಕ ಭಿನ್ನಾಭಿಪ್ರಾಯಗಳು ಬಹಿರಂಗವಾಗಿರುವುದು ಪಕ್ಷದ ಮುಂದಿನ ನಿರ್ಧಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ಚರ್ಚೆ ಹುಟ್ಟಿಸಿದೆ.
ಒಂದೆಡೆ ಪಕ್ಷದ ಹಳೆಯ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣಾ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ನಿರ್ಧಾರ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂದು ಕಾಂಗ್ರೆಸ್ ಕಚೇರಿ ಎದುರು ನಡೆದ ಧರಣಿ, ಕಲೀಮ್ ಪಾಷಾ ಅವರ ಆಗಮನದ ವೇಳೆ ಉಂಟಾದ ಮಾತಿನ ಚಕಮಕಿ ಹಾಗೂ ಹಲ್ಲೆ ಯತ್ನದ ಆರೋಪದಿಂದಾಗಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ಬಹಿರಂಗಗೊಂಡಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಮತ್ತು ಪ್ರಸ್ತುತ ಉಂಟಾಗಿರುವ ಅಸಮಾಧಾನವನ್ನು ಹೇಗೆ ಶಮನಗೊಳಿಸಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಆರ್ ಪ್ರಸನ್ನ ಕುಮಾರ್ ಮಾತು
ಪಕ್ಷದಲ್ಲಿ ಸಂಘಟನ ಸೃಜನ್ ಅಭಿಯಾನದಲ್ಲಿ ನಿನ್ನೆ ಮಧ್ಯಾಹ್ನ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಭೆಯ ವೇಳೆ ನುಗ್ಗಾಟವಾಗಿದೆ. ಅವರರವರೆ ತಳ್ಳಾಟ ನಡೆದಿದೆ. ಪರಿಸ್ಥಿತಿ ಬಗ್ಗೆ ನಿನ್ನೆ ಗೊತ್ತಿರಲಿಲ್ಲ. ಇವತ್ತು ಪರಿಸ್ಥಿತಿ ಗೊತ್ತಾಗಿದೆ. ಕೆಲವು ಅಹಿತಕರ ಘಟನೆ ನಡೆದಿದೆ. ಅದನ್ನ ಪಕ್ಷದ ಮುಖಂಡರು, ಸಚಿವರು ಬಗೆಹರಿಸಲಿದ್ದಾರೆ. ಇದು ಪಕ್ಷದ ವೈಯುಕ್ತಿಕ ಘಟನೆಯಾಗಿದೆ. ಕೂರಿಸಿ ಬಗೆಹರಿಸಲಾಗುವುದು. ಪಕ್ಷದ ಆಸ್ತಿ ಹಾನಿಯಾಗಿದೆ. ಯಾರೋ ಮಾಡಿದ್ದಾರೆ. ಅದನ್ನ ಪಕ್ಷದ ಆಸ್ತಿ ಹಾನಿಮಾಡುವುದನ್ನ ವಿರೋಧಿಸುತ್ತೇವೆ. ತಳ್ಳಾಟದಲ್ಲಿ ನಡೆದಿದೆ ಎಂದರು.
shivamogga congress kaleem pasha rangegowda protest
