SUDDILIVE || SHIVAMOGGA
ಈದ್ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಪೊಲೀಸ್ ರೂಟ್ ಮಾರ್ಚ್: 24–36 ಗಂಟೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಎಸ್‌ಪಿ ನಿಖಿಲ್ ಕರೆ- Police route march in Shivamogga ahead of Eid festival: SP Nikhil calls for 24-36 hour alert duty
ಶಿವಮೊಗ್ಗ: ಈದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಸಂಜೆ ರೂಟ್ ಮಾರ್ಚ್ ನಡೆಸಲಾಯಿತು.
ರೂಟ್ ಮಾರ್ಚ್‌ನಲ್ಲಿ ಸುಮಾರು 300ರಿಂದ 400 ಮಂದಿ ಡಿಎಆರ್, ಆರ್‌ಎಫ್ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಡಿಎಆರ್ ಮೈದಾನದಿಂದ ಆರಂಭವಾದ ರೂಟ್ ಮಾರ್ಚ್ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋಟೆ ಪೊಲೀಸ್ ಠಾಣೆಯಲ್ಲಿ ಮುಕ್ತಾಯಗೊಂಡಿತು.
ಡಿಎಆರ್ ಮೈದಾನದಿಂದ ಹೊರಟ ಪೊಲೀಸರು ಅಶೋಕ ವೃತ್ತ, ಎಎ ವೃತ್ತ, ಶಿವಪ್ಪ ನಾಯಕ ಪ್ರತಿಮೆ, ಮೈಲಾರೇಶ್ವರ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರದೇಶಗಳ ಮೂಲಕ ಸಂಚರಿಸಿ ಕೋಟೆ ಪೊಲೀಸ್ ಠಾಣೆ ತಲುಪಿದರು.
ರೂಟ್ ಮಾರ್ಚ್‌ಗೆ ಮುನ್ನ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ, ಈದ್ ಹಬ್ಬವನ್ನು ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಸಾರ್ವಜನಿಕರಿಗೆ ಪೊಲೀಸರು ಅಗತ್ಯ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
“ಮುಂದಿನ 24ರಿಂದ 36 ಗಂಟೆಗಳ ಕಾಲ ಪ್ರತಿಯೊಬ್ಬರೂ ಹೆಚ್ಚಿನ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಾರ್ವಜನಿಕರಿಗೆ ಅಗತ್ಯ ಭದ್ರತೆ ಒದಗಿಸಬೇಕು. ನಗರದಲ್ಲಿ ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸರು ಸಹಕರಿಸೋಣ” ಎಂದು ಎಸ್‌ಪಿ ನಿಖಿಲ್ ಸಿಬ್ಬಂದಿಗೆ ಹುಮ್ಮಸ್ಸು ತುಂಬಿದರು.
ಈದ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ರೂಟ್ ಮಾರ್ಚ್ ಮೂಲಕ ಸಾರ್ವಜನಿಕರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಜೊತೆಗೆ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಸಜ್ಜಾಗಿದೆ ಎಂಬ ಸಂದೇಶ ನೀಡಲಾಯಿತು.
