SUDDILIVE || SHIVAMOGGA
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ಅಮಾನತಿಗೆ ಆಗ್ರಹಿಸಿ ಎಬಿವಿಪಿ ಧೀಡೀರ್ ಪ್ರತಿಭಟನೆ-Allegation of sexual harassment of a female student: ABVP stages a sudden protest demanding the principal's suspension
ಶಿವಮೊಗ್ಗ: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜಾತಿನಿಂದನೆ ಮಾಡಿದ ಆರೋಪದಡಿ ಪ್ರಾಂಶುಪಾಲರ ವಿರುದ್ದ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಕಾಲೇಜು ಎದುರು ದಿಢೀರ್ ಪ್ರತಿಭಟನೆ ನಡೆಸಿ, ಆರೋಪಿತ ಪ್ರಾಂಶುಪಾಲರನ್ನು ತಕ್ಷಣ ಅಮಾನತುಗೊಳಿಸುವಂತೆ ಆಗ್ರಹಿಸಿದರು.
ಕಾಲೇಜಿನ ಒಳಗೆ ನುಗ್ಗಿದ ಪ್ರತಿಭಟನಾಕಾರರು ಕಾಲೇಜು ತರಗತಿಗೆ ಹೋಗಿ ವಿದ್ಯಾರ್ಥಿಯನ್ನ ಮಾತನಾಡಿಸಲು ಯತ್ನಿಸಿದರು. ಈ ವೇಳೆ ಸಿಬ್ಬಂದಿಗಳು ಮತ್ತು ಎಬಿವಿಪಿಯವರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಕಾಲೇಜಿನ ಗೇಟು ಮತ್ತು ಪ್ರವೇಶ ದ್ವಾರವನ್ನಬಂದ್ ಮಾಡಿ ಪ್ರತಿಭಟಿಸಲಾಯಿತು.
ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳ ಅಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 168/2026 ದಾಖಲಾಗಿರುವುದಾಗಿ ಎಬಿವಿಪಿ ಮುಖಂಡರು ತಿಳಿಸಿದ್ದಾರೆ.
ಪ್ರಾಂಶುಪಾಲರು ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವುದು, ಮಾನಸಿಕವಾಗಿ ಹಿಂಸಿಸಿರುವುದು ಹಾಗೂ ಜಾತಿಯ ಹೆಸರಿನಲ್ಲಿ ಅವಮಾನಿಸಿದ್ದಾರೆ ಎಂಬ ಆರೋಪಗಳು ಗಂಭೀರವಾಗಿದ್ದು, ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಆಡಳಿತದ ಜವಾಬ್ದಾರಿಯಲ್ಲಿರುವ ವ್ಯಕ್ತಿಯ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಎಬಿವಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆರೋಪಿತ ಪ್ರಾಂಶುಪಾಲರು ಹುದ್ದೆಯಲ್ಲಿ ಮುಂದುವರಿದರೆ, ವಿದ್ಯಾರ್ಥಿನಿಯರು ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
ಪ್ರಾಂಶುಪಾಲರನ್ನು ಕೂಡಲೇ ಅಮಾನತುಗೊಳಿಸಿ, ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಪ್ರಕರಣದ ತನಿಖೆಯನ್ನು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದಂತೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ವೇಳೆ ಎಬಿವಿಪಿ ಮುಖಂಡರು ಕಾಲೇಜು ಆಡಳಿತ ಹಾಗೂ ಎನ್ ಇಎಸ್ ರಿಜಿಸ್ಟರ್ ಗೆ ಮನವಿ ಸಲ್ಲಿಸಿ, ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡುವಂತೆ ಒತ್ತಾಯಿಸಿದರು.
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ. ಅಪ್ರಾಪ್ತ ವಿದ್ಯಾರ್ಥಿನಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಆಕೆಯ ಗುರುತು ಹಾಗೂ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸಂಘಟನೆ ನಿಡಿದರು.
ಪ್ರತಿಭಟನೆಯಲ್ಲಿ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಗೋಪಿ ರಂಗನಾಥ್, ಆಕಾಶ್, ರವಿ, ವಿನಯ್, ನಿರಂಜನ್, ಪನ್ನಗ, ಮದನ್, ನಂದನ್, ಧೀರಾಜ್ ಮೊದಲಾದವರು ಉಪಸ್ಥಿತಿದ್ದರು.
