SUDDILIVE || SHIVAMOGGA
ಶಿವಮೊಗ್ಗದಲ್ಲಿ ಮಾದಿಗ ಸಮಾಜದ ಜಾಗ ಒತ್ತುವರಿ ಆರೋಪ: ತೆರವುಗೊಳಿಸುವಂತೆ ತೇಜಸ್ ನೇತೃತ್ವದಲ್ಲಿ ಪ್ರತಿಭಟನೆ-shivamogga madiga samaja land encroachment protest Tejus
ಶಿವಮೊಗ್ಗ: ನಗರದ ಮಿಳಘಟ್ಟ ಗ್ರಾಮದ ಸರ್ವೆ ನಂ.3ರಲ್ಲಿ ಮಾದಿಗ ಸಮಾಜಕ್ಕೆ ಜಾಂಭವ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಮಂಜೂರಾಗಿರುವ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ, ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮಾದರ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ತೇಜಸ್ ಕುಮಾರ್ ನೇತೃತ್ವ ವಹಿಸಿದ್ದರು.
ಮಿಳಘಟ್ಟ ಗ್ರಾಮದ ಸರ್ವೆ ನಂ.3ರಲ್ಲಿ ಒಟ್ಟು 0-39 ಗುಂಟೆ ಖಾಲಿ ಜಾಗವನ್ನು ಮಾದಿಗ ಸಮಾಜದ ಜಾಂಭವ ಭವನ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿತ್ತು. ಈ ಪೈಕಿ 0-09 ಗುಂಟೆ ಜಾಗವನ್ನು ಪೊಲೀಸ್ ಇಲಾಖೆಗೆ ಮಂಜೂರು ಮಾಡಲಾಗಿದ್ದು, ಉಳಿದ 0-30 ಗುಂಟೆ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಿ ಜಾಂಭವ ಭವನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಮಾದರ ಮಹಾಸಭಾ ತಿಳಿಸಿದೆ.
ಈ ಜಾಗಕ್ಕೆ ಸಂಬಂಧಿಸಿದಂತೆ ಹಿಂದೆಯೂ ಹದ್ದುಬಸ್ತು ಹಾಗೂ ಮರುಸರ್ವೆ ನಡೆಸಲಾಗಿದ್ದು, ಸರ್ವೆ ಇಲಾಖೆ ಅಧಿಕಾರಿಗಳು ಸ್ಥಳ ಅಳತೆ ಮಾಡಿ ಸ್ಕೆಚ್ ಮತ್ತು ವರದಿಯನ್ನು ನೀಡಿದ್ದರು ಎಂದು ಸಂಘಟನೆ ಮನವಿಯಲ್ಲಿ ಉಲ್ಲೇಖಿಸಿದೆ.
ಆದರೆ, ಪ್ರಸ್ತುತ ಪೊಲೀಸ್ ಇಲಾಖೆ, ಸಾರ್ವಜನಿಕ ರಸ್ತೆ ಹಾಗೂ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಸೇರಿದವರು ಮಾದಿಗ ಸಮಾಜಕ್ಕೆ ಮೀಸಲಾದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾದಿಗ ಸಮಾಜಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಜಾಂಭವ ಭವನ ನಿರ್ಮಾಣಕ್ಕೆ ಈ ಜಾಗವೊಂದೇ ಪ್ರಮುಖ ಆಸ್ತಿಯಾಗಿದ್ದು, ಇದನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಿ ದಾಖಲೆಗಳು ಹಾಗೂ ಸರ್ವೆ ಇಲಾಖೆಯ ಹಿಂದಿನ ವರದಿಗಳನ್ನು ಪರಿಶೀಲಿಸಬೇಕು. ಮಾದಿಗ ಸಮಾಜಕ್ಕೆ ಮಂಜೂರಾಗಿರುವ ಜಾಗವನ್ನು ಗುರುತಿಸಿ, ಯಾವುದೇ ಒತ್ತುವರಿ ಇದ್ದಲ್ಲಿ ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಒತ್ತುವರಿ ತೆರವುಗೊಳಿಸಿದ ಬಳಿಕ ಜಾಂಭವ ಭವನ ನಿರ್ಮಾಣಕ್ಕಾಗಿ ಜಾಗವನ್ನು ಕರ್ನಾಟಕ ಮಾದರ ಮಹಾಸಭಾ, ಶಿವಮೊಗ್ಗ ಜಿಲ್ಲೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದಲ್ಲಿ ಮುಂದಿನ ಹಂತದಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಸಂಘಟನೆ ನೀಡಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೇಜೇಶ್ ಆರ್. ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
shivamogga madiga samaja land encroachment protest dss rangappa
