SUDDILIVE || SHIVAMOGGA
ಶಿವಮೊಗ್ಗದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗಬೇಕು: ಆಯನೂರು ಮಂಜುನಾಥ್-Muslim and Christian communities in Shivamogga must receive adequate political representation: Ayanur Manjunath
ಶಿವಮೊಗ್ಗ: ಜಿಲ್ಲೆಯಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಅವಕಾಶಗಳು ಕೆಲವೇ ವ್ಯಕ್ತಿಗಳು ಅಥವಾ ಅವರ ಹಿಂಬಾಲಕರಿಗೆ ಪುನರಾವರ್ತನೆಯಾಗುವ ಬದಲು, ಸಮುದಾಯದ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ನಿರ್ಧಾರ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಂಘಟನೆಯ ನಾಯಕತ್ವ ಅಥವಾ ನಾಯಕರ ಪ್ರಾತಿನಿಧ್ಯವನ್ನು ಗುರುತಿಸುವಾಗ ಯಾವ ಸಮುದಾಯ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದೆ ಎಂಬುದನ್ನು ಪರಿಗಣಿಸಬೇಕು. ಅಂತಹ ಸಮುದಾಯವನ್ನು ಉಳಿಸಿಕೊಳ್ಳುವುದರ ಜೊತೆಗೆ, ಹೊಸ ಸಮುದಾಯಗಳನ್ನು ಪಕ್ಷದತ್ತ ಸೆಳೆಯುವ ಪ್ರಯತ್ನವೂ ನಡೆಯಬೇಕು. ಈ ವಿಚಾರದಲ್ಲಿ ಜಿಲ್ಲೆಯಲ್ಲಿ ಕೊರತೆ ಕಂಡುಬರುತ್ತಿದೆ ಎಂದು ಹೇಳಿದರು.
ಅವಕಾಶಗಳು ಮತ್ತೆ ಮತ್ತೆ ಕೆಲವರಿಗೆ ಮಾತ್ರ ಸಿಗಬಾರದು
ಮತ್ತೆ ಮತ್ತೆ ಅವಕಾಶಗಳು ಕೆಲವೇ ವ್ಯಕ್ತಿಗಳಿಗೆ ಸಿಗುತ್ತಿವೆ ಎಂಬ ನಿರಾಶೆ ಕೆಲವು ನಾಯಕರಲ್ಲಿ ಮೂಡಿದೆ. ಹೀಗಾಗಿ ವ್ಯಕ್ತಿಗಳ ಹಿಂಬಾಲಕರಿಗೆ ಮಾತ್ರ ಅವಕಾಶ ನೀಡುವುದಕ್ಕಿಂತ, ಇಡೀ ಸಮುದಾಯದ ಪ್ರಾತಿನಿಧ್ಯವನ್ನು ಪರಿಗಣಿಸುವ ಅಗತ್ಯವಿದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅಲ್ಪಸಂಖ್ಯಾತ ಸಮುದಾಯಗಳಾಗಿದ್ದು, ಇವರನ್ನು ಕಡೆಗಣಿಸಿ ಜಿಲ್ಲೆಯ ರಾಜಕೀಯವನ್ನು ನಡೆಸಲು ಸಾಧ್ಯವಿಲ್ಲ. ಆದರೆ ಜಿಲ್ಲೆಗೆ ಗುರುತಿಸಬಹುದಾದಂತಹ ಪ್ರಮುಖ ಸ್ಥಾನಮಾನವನ್ನು ಈ ಸಮುದಾಯಗಳಿಗೆ ನೀಡಲಾಗಿಲ್ಲ ಎಂಬ ನೋವು ಸಮುದಾಯದವರಲ್ಲಿದೆ ಎಂದು ಅವರು ತಿಳಿಸಿದರು.
ಈ ನೋವಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೂ ತೊಂದರೆಯಾಗುವ ಸಾಧ್ಯತೆಯಿದೆ. ಇದೇ ಹಿನ್ನೆಲೆಯಲ್ಲಿ ಸಮುದಾಯದ ಪರವಾಗಿ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಲಾಗುತ್ತಿದೆ ಎಂದರು.
ಎಂಎಲ್‌ಸಿ ಸ್ಥಾನವನ್ನು ಜಿಲ್ಲೆಯ ಮುಸ್ಲಿಂ ಕೋಟಾ ಎಂದು ಪರಿಗಣಿಸಲು ಸಾಧ್ಯವಿಲ್ಲ
ಮುಸ್ಲಿಂ ಸಮುದಾಯಕ್ಕೆ ಈಗಾಗಲೇ ಎಂಎಲ್‌ಸಿ ಸ್ಥಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ಅದು ಶಿವಮೊಗ್ಗ ಜಿಲ್ಲೆಯ ಮುಸ್ಲಿಂ ಸಮುದಾಯದ ಕೋಟಾ ಅಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಮಟ್ಟದಲ್ಲಿ ಒಕ್ಕಲಿಗರು, ಲಿಂಗಾಯತರು ಸೇರಿದಂತೆ ವಿವಿಧ ಸಮುದಾಯಗಳಿಗೆ ಸಚಿವ ಸ್ಥಾನ, ಎಂಎಲ್‌ಸಿ ಸೇರಿದಂತೆ ವಿವಿಧ ಅವಕಾಶಗಳನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ಅಲ್ಪಸಂಖ್ಯಾತರಿಗೂ ರಾಜ್ಯ ಮಟ್ಟದ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ಅದನ್ನು ಶಿವಮೊಗ್ಗ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಪ್ರತ್ಯೇಕ ಅವಕಾಶ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದರು.
ಮಹಿಳಾ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಹೆಸರಿನಲ್ಲಿ ಒಂದು ಸ್ಥಾನ ನೀಡುವುದರಿಂದ ಮುಸ್ಲಿಂ ಸಮುದಾಯಕ್ಕೂ, ಮಹಿಳೆಯರಿಗೂ ಒಂದೇ ಅವಕಾಶ ನೀಡಿದಂತಾಗಿದೆ. ಪುರುಷ ಮತ್ತು ಮಹಿಳಾ ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾಗಿ ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.
ಸಮುದಾಯದೊಳಗಿನ ಭಿನ್ನಾಭಿಪ್ರಾಯದಿಂದ ಅವಕಾಶ ತಪ್ಪುತ್ತಿದೆ
ಮುಸ್ಲಿಂ ಸಮುದಾಯದ ಯಾರಿಗಾದರೂ ಪ್ರಮುಖ ಸ್ಥಾನ ನೀಡಲು ಪಕ್ಷ ಮುಂದಾದಾಗ, ಅದೇ ಸಮುದಾಯದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿ ಅವಕಾಶವನ್ನು ತಡೆಯುವ ಪರಿಸ್ಥಿತಿಯೂ ಇದೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಈ ಹಿಂದೆ ಸ್ಥಳೀಯ ಸಂಸ್ಥೆಯೊಂದರ ಅಧ್ಯಕ್ಷ ಸ್ಥಾನಕ್ಕೆ ವ್ಯಕ್ತಿಯೊಬ್ಬರ ಹೆಸರು ಪ್ರಕಟವಾಗಿದ್ದ ಸಂದರ್ಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿ ಅದನ್ನು ರದ್ದುಗೊಳಿಸುವಂತೆ ಮಾಡಿದ್ದರು ಎಂದು ಉದಾಹರಿಸಿದರು.
ಇಂತಹ ಒಳಗಿನ ಭಿನ್ನಾಭಿಪ್ರಾಯಗಳು ಎಲ್ಲಾ ಸಮುದಾಯಗಳಲ್ಲೂ ಸಹಜ. ಆದರೆ ಪಕ್ಷದ ಪ್ರಮುಖರು ಎಲ್ಲರನ್ನು ಕರೆದು ಚರ್ಚಿಸಿ, ಪಕ್ಷಕ್ಕೆ ಮತ್ತು ಜಿಲ್ಲೆಗೆ ಹೆಚ್ಚು ಉಪಯುಕ್ತರಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅವಕಾಶ ಸಿಗದವರಿಗೆ ಮುಂದಿನ ಹಂತದಲ್ಲಿ ಅವಕಾಶ ನೀಡುವ ಪ್ರಯತ್ನವೂ ನಡೆಯಬೇಕು ಎಂದು ಹೇಳಿದರು.
ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದಲ್ಲಿ ಒಗ್ಗಟ್ಟಿನ ನಾಯಕತ್ವದ ಕೊರತೆ
ಒಕ್ಕಲಿಗರು ಅಥವಾ ಲಿಂಗಾಯತ ಸಮುದಾಯಗಳಲ್ಲಿ ನಿರ್ದಿಷ್ಟ ನಾಯಕತ್ವದ ವ್ಯವಸ್ಥೆ ಕಂಡುಬರುತ್ತದೆ. ಆದರೆ ಶಿವಮೊಗ್ಗದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಪರವಾಗಿ ಒಟ್ಟಾಗಿ ಮಾತನಾಡುವ, ಎಲ್ಲರನ್ನೂ ಪ್ರತಿನಿಧಿಸುವ ನಾಯಕತ್ವದ ಕೊರತೆ ಇದೆ ಎಂದು ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.
ಕೆಲವು ಸ್ಥಳೀಯ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಗುಂಪುಗಳನ್ನು ವಿಭಜಿಸುವ ಕೆಲಸ ಮಾಡಿದ್ದಾರೆ. ಒಬ್ಬರಿಗೆ ಅವಕಾಶ ಬಂದಾಗ ಮತ್ತೊಬ್ಬರನ್ನು ಪ್ರೋತ್ಸಾಹಿಸುವ ಬದಲು ಅವರನ್ನು ಕೀಳಾಗಿ ಕಾಣಿಸುವ ಪ್ರವೃತ್ತಿಯಿಂದ ಗುಂಪುಗಳಾಗಿ ವಿಭಜನೆಯಾಗಿದೆ ಎಂದು ಹೇಳಿದರು.
ಈ ಬಾರಿ ಮಾತ್ರ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಒಟ್ಟಾಗಿ ಅರ್ಜಿ ಸಲ್ಲಿಸುತ್ತಿದ್ದು, ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಮುಂದಿಟ್ಟು ಸ್ಥಾನ ಕೇಳುತ್ತಿಲ್ಲ. ತಮ್ಮ ಸಮುದಾಯಕ್ಕೆ ಸೇರಿದ ಅರ್ಹ ವ್ಯಕ್ತಿಗೆ ಅವಕಾಶ ನೀಡಬೇಕು ಎಂಬುದು ಅವರ ಬೇಡಿಕೆ ಎಂದು ತಿಳಿಸಿದರು.
"ನಮ್ಮ ಪರವಾಗಿ ನೀವೇ ಧ್ವನಿ ಎತ್ತಿ" ಎಂದು ಮನವಿ
ಹಿಂದೆಯೂ ಮುಸ್ಲಿಂ ಸಮುದಾಯದವರು ತಮ್ಮ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡುವಂತೆ ಹಲವು ಸುದ್ದಿಗೋಷ್ಠಿಗಳನ್ನು ನಡೆಸಿ ಒತ್ತಾಯಿಸಿದ್ದರು. ಆದರೆ ನಂತರ ಅವರು ಹಿಂಜರಿದ ಘಟನೆಗಳಿವೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಈ ಅನುಭವದ ಹಿನ್ನೆಲೆಯಲ್ಲಿ, "ನಾವಷ್ಟೇ ಕೇಳಿ ಅಪಹಾಸ್ಯಕ್ಕೊಳಗಾಗುವುದಕ್ಕಿಂತ, ನಮ್ಮ ಪರವಾಗಿ ನೀವು ಏಕೆ ಕೇಳಬಾರದು? ನಾನ್-ಮುಸ್ಲಿಂ, ನಾನ್-ಕ್ರಿಶ್ಚಿಯನ್ ಆಗಿರುವ ನೀವು ನಮ್ಮೊಂದಿಗೆ ಬಂದು ನಮ್ಮ ಪರವಾಗಿ ಮಾತನಾಡಿ" ಎಂದು ಸಮುದಾಯದವರು ಮನವಿ ಮಾಡಿದ್ದಾರೆ ಎಂದು ಹೇಳಿದರು.
ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರನ್ನು ಭೇಟಿ ಮಾಡಿ ಜಿಲ್ಲೆಯ ರಾಜಕೀಯ ಪರಿಸ್ಥಿತಿ, ಇತರ ಪಕ್ಷಗಳ ಸ್ಥಿತಿ, ತಮ್ಮ ಪಕ್ಷದ ಪರಿಸ್ಥಿತಿ ಹಾಗೂ ಜಿಲ್ಲೆಗೆ ಅಗತ್ಯವಿರುವ ವಿಚಾರಗಳ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಮುಂದಿನ ವಾರ ಮುಖಂಡರ ಭೇಟಿ
ಮುಂದಿನ ವಾರದಲ್ಲಿ ಸಂಬಂಧಪಟ್ಟ ನಾಯಕರನ್ನು ಭೇಟಿ ಮಾಡುವುದಾಗಿ ಆಯನೂರು ಮಂಜುನಾಥ್ ಹೇಳಿದರು. ಈಗಾಗಲೇ ಎರಡು ನಿಯೋಗಗಳು ತೆರಳಿ ಭೇಟಿ ಮಾಡಿವೆ. ತಾವು ದೊಡ್ಡ ನಿಯೋಗವನ್ನು ಕರೆದೊಯ್ಯುವುದಕ್ಕಿಂತ, ನಾಲ್ಕೈದು ಹಿರಿಯರನ್ನು ಕರೆದುಕೊಂಡು ಹೋಗಬಹುದು ಅಥವಾ ವೈಯಕ್ತಿಕವಾಗಿ ಭೇಟಿಯಾಗಿ ಜಿಲ್ಲೆಯ ರಾಜಕೀಯ ಪರಿಸ್ಥಿತಿ ಕುರಿತು ವಿವರವಾಗಿ ಚರ್ಚಿಸಬಹುದು ಎಂದರು.
ಸರ್ಕಾರ ಮತ್ತು ಪಕ್ಷ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಅವರ ಕೈಯಲ್ಲಿದೆ. ಆದರೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಸಮುದಾಯದ ಬೇಡಿಕೆಯನ್ನು ಮುಂದಿಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ
ಜಿಲ್ಲಾ ಕಾಂಗ್ರೆಸ್‌ನ ಪ್ರಸ್ತುತ ಸ್ಥಿತಿಯ ಕುರಿತು ಮಾತನಾಡಿದ ಆಯನೂರು ಮಂಜುನಾಥ್, ಜಿಲ್ಲೆಯಲ್ಲಿ ಪಕ್ಷದ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಪೈಪೋಟಿ ಕಂಡುಬಂದಿದೆ. ಇಷ್ಟೊಂದು ಮಂದಿ ಪಕ್ಷ ಕಟ್ಟಲು ಉತ್ಸಾಹ ತೋರಿಸುತ್ತಿರುವುದು ಪಕ್ಷದ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
"ಪಕ್ಷ ಕಟ್ಟಲು ಮ್ಯಾನೇಜರ್‌ಗಳನ್ನು ಹುಡುಕಬೇಕಾದ ಪರಿಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಆದರೆ ಇಲ್ಲಿ ಪಕ್ಷ ಕಟ್ಟಲು ಇಷ್ಟೊಂದು ಜನರು ಸಿದ್ಧರಾಗಿರುವುದು ದೊಡ್ಡ ಪ್ಲಸ್ ಪಾಯಿಂಟ್" ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರಿನ ಚರ್ಚೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರೂ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ತಮ್ಮ ಹೆಸರು ತಾವು ಓಡಿಸುತ್ತಿಲ್ಲ. ಸಂದರ್ಭಾನುಸಾರ ತಮ್ಮ ಹೆಸರು ಚರ್ಚೆಗೆ ಬಂದಿದೆ ಅಷ್ಟೇ ಎಂದರು.
ತಮ್ಮ ಹೆಸರನ್ನು ಶಾಸಕ ಗೋಪಾಲಕೃಷ್ಣ ಅವರು ಪ್ರಸ್ತಾಪಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ತಮ್ಮ ಪರವಾಗಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಆದರೆ ಆ ಸ್ಥಾನ ತಮಗೆ ಸಿಗಲೇಬೇಕು ಎಂಬ ಯಾವುದೇ ಹಠವಿಲ್ಲ ಎಂದು ಸ್ಪಷ್ಟಪಡಿಸಿದರು.
"ಮೇಲ್ಮನೆಗೆ ಹೋದವರು ಕೆಳಮಟ್ಟದಲ್ಲಿ ಬಂದು ಕೆಲಸ ಮಾಡುತ್ತೀರಾ?" ಎಂಬ ಪ್ರಶ್ನೆಯನ್ನೂ ಅವರು ಎದುರಿಸಿದ್ದು, ಪಕ್ಷ ಮತ್ತು ನಾಯಕತ್ವ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂಬ ಸಂದೇಶ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮುಸ್ಲೀಂ ಸಮುದಾಯದ ರಿಯಾಜ್ ಅಹಮದ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
Muslim and Christian communities in Shivamogga must receive adequate political representation: Ayanur Manjunath
