SUDDILIVE || SHIVAMOGGA
ಈದ್ ಮಿಲಾದ್ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಆರೋಪ: ಮೂವರ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ-Case filed against three people in Shivamogga for allegedly hoisting Palestinian flag on the occasion of Eid Milad
ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಆರ್.ಎಂ.ಎಲ್. ನಗರದಲ್ಲಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಪ್ಯಾಲೆಸ್ತೀನ್ ಧ್ವಜ ಹಾರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರೂಪದಲ್ಲಿ ಹರಿಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 25ರಂದು ದಾಖಲಾದ ಪ್ರಕರಣದ ಪ್ರಕಾರ, ದೊಡ್ಡಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂದೀಪ್ ಎಸ್.ಡಿ. ಅವರು ಸ್ವಯಂಪ್ರೇರಿತವಾಗಿ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 353(2), 196(1) ಹಾಗೂ 197ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಆಗಸ್ಟ್ 24ರಂದು ಬೆಳಗ್ಗೆ ಸುಮಾರು 8ರಿಂದ 9 ಗಂಟೆಯ ಅವಧಿಯಲ್ಲಿ ಆರ್.ಎಂ.ಎಲ್. ನಗರದ ಭಾರತೀ ಸಭಾಭವನದ ಸಮೀಪ ಈದ್ ಮಿಲಾದ್ ಹಿನ್ನೆಲೆಯಲ್ಲಿ ಕಟೌಟ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಕಟೌಟ್‌ನ ಮೇಲ್ಭಾಗದಲ್ಲಿ ನಿಂತು ಪ್ಯಾಲೆಸ್ತೀನ್ ಧ್ವಜ ಹಾರಿಸುತ್ತಿರುವ 14 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಪೊಲೀಸರ ದಾಖಲೆಯ ಪ್ರಕಾರ, ನಿಹಾಲ್ ಅಲಿಯಾಸ್ ಬೆಕ್ಕು, ಉಮರ್ ಹಾಗೂ ಅಬ್ರಹಾರ್ ಎಂಬ ಮೂವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಮೂವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿ ದಾಖಲಿಸಲಾಗಿದೆ.
ದೂರಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋದಿಂದ ರಾಷ್ಟ್ರದ ಏಕತೆಗೆ ಧಕ್ಕೆ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಹಾಗೂ ವಿವಿಧ ಜನಾಂಗೀಯ, ಪ್ರಾದೇಶಿಕ ಮತ್ತು ಸಮುದಾಯಗಳ ನಡುವೆ ವೈಮನಸ್ಸು ಅಥವಾ ದ್ವೇಷದ ಭಾವನೆ ಉಂಟಾಗಿ ಸಾರ್ವಜನಿಕ ನೆಮ್ಮದಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ವಿಡಿಯೋವನ್ನು ಪರಿಶೀಲಿಸಿದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಟೌಟ್ ನಿರ್ಮಿಸುತ್ತಿದ್ದ ವೇಳೆ ಆರೋಪಿಗಳು ಪ್ಯಾಲೆಸ್ತೀನ್ ಧ್ವಜ ಹಾರಿಸಿ ವಿಡಿಯೋ ಮಾಡಿರುವುದಾಗಿ ಮಾಹಿತಿ ಲಭಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣವನ್ನು ದೊಡ್ಡಪೇಟೆ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 291/2026 ಎಂದು ದಾಖಲಿಸಲಾಗಿದ್ದು, ಆಗಸ್ಟ್ 25ರಂದು ಮಧ್ಯಾಹ್ನ 2.30ಕ್ಕೆ ದೂರು ಸ್ವೀಕರಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನು ನ್ಯಾಯಾಲಯಕ್ಕೂ ಕಳುಹಿಸಲಾಗಿದೆ.
