ಬಿದರೂರು ಚಾನೆಲ್‌ಗೆ ಹಾರಲು ಯತ್ನಿಸಿದ ಯುವತಿ-ರಕ್ಷಿಸಿದ ಕಾರ್ಗಲ್ ಪೊಲೀಸರು- Young woman attempts to jump into Bidarur canal; Kargal police rescue her

 SUDDILIVE || KARGAL

ಬಿದರೂರು ಚಾನೆಲ್‌ಗೆ ಹಾರಲು ಯತ್ನಿಸಿದ ಯುವತಿ-ರಕ್ಷಿಸಿದ ಕಾರ್ಗಲ್ ಪೊಲೀಸರು- Young woman attempts to jump into Bidarur canal; Kargal police rescue her  

Yuvathi, save


ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನು ಕಾರ್ಗಲ್ ಠಾಣೆ ಪೊಲೀಸರು ಹಾಗೂ ಶಿವಮೊಗ್ಗ ಜಿಲ್ಲಾ ಪೊಲೀಸ್‌ನ ಇಆರ್‌ಎಸ್‌ಎಸ್‌–112 ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಬುಧವಾರ ಸಂಜೆ ಕಾರ್ಗಲ್ ಠಾಣಾ ವ್ಯಾಪ್ತಿಯ ಬಿದರೂರು ಚಾನೆಲ್ ಬಳಿ ನಡೆದಿದೆ.

ಬಿದರೂರು ಚಾನೆಲ್ ಬಳಿ ಕೆಲ ಸಾರ್ವಜನಿಕರು ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ, ಯುವತಿಯೊಬ್ಬಳು ಬಹಳ ಸಮಯದಿಂದ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಆಕೆ ಆತ್ಮಹತ್ಯೆಗೆ ಯತ್ನಿಸುತ್ತಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು ತಕ್ಷಣ ಕಾರ್ಗಲ್ ಪೊಲೀಸ್ ಠಾಣೆ ಹಾಗೂ ಇಆರ್‌ಎಸ್‌ಎಸ್‌–112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭಿಸುತ್ತಿದ್ದಂತೆಯೇ ಪೊಲೀಸರು ಯಾವುದೇ ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ಇಆರ್‌ವಿ ಅಧಿಕಾರಿಗಳಾದ ಕಾರ್ಗಲ್ ಪೊಲೀಸ್ ಠಾಣೆಯ ಅಣ್ಣಪ್ಪ ಹೆಚ್‌.ಸಿ., ಚಾಲಕರಾದ ರಾಘವೇಂದ್ರ ಎ.ಪಿ.ಸಿ., ಡಿಎಆರ್ ಶಿವಮೊಗ್ಗ, ಹಾಗೂ ಕಾರ್ಗಲ್ ಠಾಣೆಯ ಸಂದೀಪ್ ಸಿ.ಹೆಚ್‌.ಸಿ. ಮತ್ತು ಪುರುಷೋತ್ತಮ್ ಸಿ.ಪಿ.ಸಿ. ಅವರು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಯುವತಿ ಚಾನೆಲ್‌ಗೆ ಹಾರಲು ಓಡುತ್ತಿದ್ದಳು ಎನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಆಕೆಯನ್ನು ತಡೆದು, ಯಾವುದೇ ಅನಾಹುತ ಸಂಭವಿಸುವ ಮುನ್ನ ಸುರಕ್ಷಿತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ನಂತರ ಯುವತಿಯನ್ನು ಕಾರ್ಗಲ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆಕೆ ತುಮಕೂರು ಮೂಲದವಳು ಎಂಬುದು ತಿಳಿದುಬಂದಿದೆ. ಸ್ನೇಹಿತೆಯರೊಂದಿಗೆ ಜೋಗಾಕ್ಕೆ ಪ್ರವಾಸಕ್ಕೆ ಬಂದಿದ್ದ ಯುವತಿ, ವೈಯಕ್ತಿಕ ವಿಚಾರದಿಂದ, ಅದರಲ್ಲೂ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

ಘಟನೆಯ ಬಳಿಕ ಪೊಲೀಸರು ಯುವತಿಯ ಪೋಷಕರನ್ನು ಸಂಪರ್ಕಿಸಿ, ನಡೆದಿರುವ ವಿಚಾರವನ್ನು ವಿವರಿಸಿದ್ದಾರೆ. ಯುವತಿಯನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರ ಸಮಯೋಚಿತ ಮಾಹಿತಿ ಹಾಗೂ ಪೊಲೀಸ್ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಯುವತಿಯ ಜೀವ ಉಳಿಸುವಲ್ಲಿ ತೋರಿದ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ತ್ವರಿತ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇಆರ್‌ಎಸ್‌ಎಸ್‌–112 ಹಾಗೂ ಕಾರ್ಗಲ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಈ ಘಟನೆಯು ಅಪಾಯದ ಸಂದರ್ಭಗಳಲ್ಲಿ ಸಾರ್ವಜನಿಕರು ಯಾವುದೇ ವಿಳಂಬ ಮಾಡದೆ ತಕ್ಷಣ ಪೊಲೀಸರಿಗೆ ಅಥವಾ ತುರ್ತುಸೇವೆಗೆ ಮಾಹಿತಿ ನೀಡುವುದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.

Young woman attempts to jump into Bidarur canal; Kargal police rescue her

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close