ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಗರದ ಯುವತಿ ಬಲಿ-Young woman from Sagara commits suicide due to harassment by an obsessed lover

SUDDILIVE || SHIVAMOGGA || BANGLORE

ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಗರದ ಯುವತಿ ಬಲಿ-Young woman from Sagara commits suicide due to harassment by an obsessed lover   

Pagal, premi



ಶಿವಮೊಗ್ಗ/ಬೆಂಗಳೂರು: ಯುವಕನೊಬ್ಬನ ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಮೃತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಾಣಿಶ್ರೀ (22) ಎಂದು ಗುರುತಿಸಲಾಗಿದೆ.

ವಾಣಿಶ್ರೀ ಕಳೆದ ಸುಮಾರು ಆರು ತಿಂಗಳಿಂದ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಲೇಡೀಸ್ ಪಿಜಿಯಲ್ಲಿ ವಾಸವಾಗಿದ್ದರು. ಅಲ್ಲಿಯೇ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 22ರಂದು ಬೆಳಗ್ಗೆ ವಾಣಿಶ್ರೀ ಅವರು ತಮಗೆ ಅಭಿಷೇಕ್ ಎಂಬ ವ್ಯಕ್ತಿ ಬಹಳ ದಿನಗಳಿಂದ ಬ್ಲ್ಯಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಪತ್ರ ಬರೆದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಹೊರಟಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಗೆ ದೊರೆತಿದೆ. ಬಳಿಕ ಅವರು ವಾಸವಿದ್ದ ಪಿಜಿಗೆ ತೆರಳಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

ನಂತರ ಪತ್ರದಲ್ಲಿ ಉಲ್ಲೇಖಿಸಿದ್ದ ಕಾರಣದಿಂದ ಕುಟುಂಬಸ್ಥರು ಹಾಗೂ ಪಿಜಿ ಸಿಬ್ಬಂದಿ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರೊಂದಿಗೆ ಅಗರ ಕೆರೆಗೆ ತೆರಳಿ ಪರಿಶೀಲಿಸಿದಾಗ ವಾಣಿಶ್ರೀ ಕೆರೆಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಅಭಿಷೇಕ್ ವಿರುದ್ಧ ಗಂಭೀರ ಆರೋಪ

ಮೃತ ಯುವತಿಯ ಸಹೋದರಿ ನೀಡಿರುವ ದೂರಿನ ಪ್ರಕಾರ, ಅಭಿಷೇಕ್ ಎಂಬಾತ ವಾಣಿಶ್ರೀ ಅವರಿಗೆ ವಿಡಿಯೋ, ಫೋಟೋ, ಕಾಲ್ ಹಾಗೂ ಮೆಸೇಜ್‌ಗಳ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಕಿರುಕುಳದಿಂದ ಮಾನ-ಮರ್ಯಾದೆಗೆ ಧಕ್ಕೆ ಉಂಟಾಗಬಹುದೆಂಬ ಆತಂಕದಿಂದ ವಾಣಿಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಯುವತಿ ಬರೆದಿದ್ದಾಳೆ ಎನ್ನಲಾದ ಮರಣ ಪತ್ರದಲ್ಲಿ ಅಭಿಷೇಕ್‌ನ ಹೆಸರು ಉಲ್ಲೇಖವಾಗಿದ್ದು, ಆತನಿಂದ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಹಾಗೂ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಅರ್ಥದ ವಿಷಯಗಳನ್ನು ಬರೆದಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸ್ ದಾಖಲೆಗಳಲ್ಲಿ ಆರೋಪಿ ಎಂದು ಉಲ್ಲೇಖವಾಗಿರುವ ಅಭಿಷೇಕ್‌ನ ವಿಳಾಸ ಬೆಂಗಳೂರಿನದ್ದಾಗಿ ದಾಖಲಾಗಿದ್ದು, ಆತನ ವಿರುದ್ಧ ತನಿಖೆ ಮುಂದುವರಿದಿದೆ.

BNS ಕಲಂ 108 ಅಡಿ ಪ್ರಕರಣ

ಈ ಘಟನೆಗೆ ಸಂಬಂಧಿಸಿದಂತೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 316/2026ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 108 ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ದಿನಾಂಕ ಆಗಸ್ಟ್ 22, 2026 ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಪೊಲೀಸ್ ದೂರಿನಲ್ಲಿ ಮೃತ ವಾಣಿಶ್ರೀ ಅವರಿಗೆ 22 ವರ್ಷ ಎಂದು ದಾಖಲಾಗಿದ್ದು, ಹೆಚ್‌ಎಸ್‌ಆರ್ ಲೇಔಟ್‌ನ ಲೇಡೀಸ್ ಪಿಜಿಯಲ್ಲಿ ವಾಸವಾಗಿದ್ದರು ಎಂದು ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯಾಗಿರುವ ಅಭಿಷೇಕ್‌ನ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಮೃತ ಯುವತಿ ಹಾಗೂ ಆರೋಪಿ ಸಾಗರ ತಾಲೂಕಿನ ಮೂಲದವರು.

ವಾಣಿಶ್ರೀ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ಮೂಲದವರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವತಿ ಇದೀಗ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.

ವಾಣಿಶ್ರೀ ಅವರ ಮೃತದೇಹವನ್ನು ಹುಟ್ಟೂರಿಗೆ ತರಲಾಗಿದ್ದು, ಬೆಳಮಕ್ಕಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಸಿದ್ಧತೆ ನಡೆದಿದೆ. ಯುವತಿಯ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿ ಅಭಿಷೇಕ್ ಸಹ ಸಾಗರ ತಾಲೂಕಿನ ಬ್ಯಾಕೋಡಿನ ಅಳೂರು ಗ್ರಾಮದ ನಿವಾಸಿಯಾಗಿದ್ದಾನೆ. ಇಂದು ಯುವತಿಯ ಅಂತ್ಯಕ್ರಿಯೆ ಬೆಳಮಕ್ಕಿಯಲ್ಲಿ ನಡೆದಿದೆ. 

Young woman from Sagara commits suicide due to harassment by an obsessed lover

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close