SUDDILIVE || SHIVAMOGGA
ಶಿವಮೊಗ್ಗ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕ್ರೇನ್ ಅವಘಡ: ಕಾರ್ಮಿಕನ ಕೈ-ಕಾಲುಗಳಿಗೆ ಗಂಭೀರ ಗಾಯ, ಐವರ ವಿರುದ್ಧ ಪ್ರಕರಣ- Crane accident at Shahi Garments in Shivamogga: Worker suffers severe injuries to hands and legs; case registered against five individuals.
ಶಿವಮೊಗ್ಗ, ಆ.9: ಶಿವಮೊಗ್ಗ ತಾಲೂಕಿನ ಮಚೇನಹಳ್ಳಿ ಗ್ರಾಮದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಕ್ರೇನ್ ಯಂತ್ರ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಜೂನ್ 16ರಂದು ನಡೆದಿದ್ದು, ಈ ಕುರಿತು ಗಾಯಾಳುವಿನ ಪತ್ನಿ ಆಗಸ್ಟ್ 3ರಂದು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 289, 291 ಹಾಗೂ 125(b) ಅಡಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಲಸದ ವೇಳೆ ಕ್ರೇನ್ ಬಡಿದು ಕಾರ್ಮಿಕನಿಗೆ ಗಾಯ
ಎಫ್‌ಐಆರ್‌ನಲ್ಲಿರುವ ದೂರಿನ ಪ್ರಕಾರ, ದೂರುದಾರರ ಪತಿ ನಾಗು ನಾಯ್ಕ (53) ಅವರು ಮಚೇನಹಳ್ಳಿ ಗ್ರಾಮದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಮೇಸ್ತ್ರಿ ಶೇಷ ನಾಯ್ಕ ಅವರೊಂದಿಗೆ ಸುಮಾರು ಒಂದು ವರ್ಷದಿಂದ ಗಾರೆ ಕೆಲಸ ಮಾಡುತ್ತಿದ್ದರು.
ಜೂನ್ 16ರಂದು ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ನಾಗು ನಾಯ್ಕ ಅವರು ಮಧ್ಯಾಹ್ನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, 10 ಅಡಿಗೂ ಅಧಿಕ ಎತ್ತರದಿಂದ ಕ್ರೇನ್ ಯಂತ್ರ ಬಂದು ಬಡಿದ ಪರಿಣಾಮ ಕೆಳಗೆ ಬಿದ್ದು ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಟ್ಟೆ ಸಂಪೂರ್ಣ ಒದ್ದೆ, ಮಾತನಾಡಲೂ ಸಾಧ್ಯವಾಗದ ಸ್ಥಿತಿ
ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ಪತ್ನಿ ಹಾಗೂ ಕುಟುಂಬಸ್ಥರು ಭದ್ರಾವತಿಯ ದುರ್ಗಾ ಕ್ಲಿನಿಕ್‌ಗೆ ತೆರಳಿ ನಾಗು ನಾಯ್ಕ ಅವರನ್ನು ನೋಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆ ವೇಳೆ ಅವರ ಬಟ್ಟೆಗಳು ಸಂಪೂರ್ಣ ಒದ್ದೆಯಾಗಿದ್ದವು. ಬಲಗೈ ಮತ್ತು ಬಲಕಾಲಿಗೆ ಗಂಭೀರ ಪೆಟ್ಟಾಗಿದ್ದು, ಅವರು ಸುಸ್ತಾಗಿದ್ದರಿಂದ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಬಲಕಾಲಿನಲ್ಲಿ ರಕ್ತಸ್ರಾವವಾಗುತ್ತಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ. ವೈದ್ಯರನ್ನು ವಿಚಾರಿಸಿದಾಗ ಬಲಗಾಲಿನ ಪಾದದವರೆಗೂ ಗಂಭೀರವಾಗಿ ನುಜ್ಜುಗುಜ್ಜಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಗಾಯಾಳುವನ್ನು ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರಾದ ಡಾ. ಭರತ್ ಚಿಕಿತ್ಸೆ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಘಟನೆ ಬಳಿಕವೂ ನೆರವಿಗೆ ಬರಲಿಲ್ಲ ಎಂಬ ಆರೋಪ
ಘಟನೆಯ ನಂತರ ಜೂನ್ 17ರಂದು ತುಂಗಾನಗರ ಠಾಣೆಯ ಪೊಲೀಸರು ಆಸ್ಪತ್ರೆಗೆ ಬಂದು ಸಹಿ ಪಡೆದುಕೊಂಡು ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ ಶಾಹಿ ಗಾರ್ಮೆಂಟ್ಸ್‌ನ ಮಾಲೀಕರು, ವ್ಯವಸ್ಥಾಪಕರು, ಎಂಜಿನಿಯರ್, ಕಾನ್‌ಟ್ರಾಕ್ಟರ್ ಹಾಗೂ ಮೇಸ್ತ್ರಿ ಗಾಯಾಳುವಿನ ಆರೋಗ್ಯ ವಿಚಾರಿಸಲು ಬಂದಿಲ್ಲ ಮತ್ತು ಚಿಕಿತ್ಸೆಗೆ ನೆರವು ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಕುಟುಂಬದ ಜೀವನಕ್ಕೆ ಸಂಕಷ್ಟ
ಗಾಯಾಳು ಕುಟುಂಬದ ದುಡಿಯುವ ವ್ಯಕ್ತಿಯಾಗಿದ್ದು, ಕಾಲು ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕುಟುಂಬದ ಜೀವನ ಸಾಗಿಸುವುದಕ್ಕೂ ಹಾಗೂ ಚಿಕಿತ್ಸಾ ವೆಚ್ಚ ಭರಿಸುವುದಕ್ಕೂ ಕಷ್ಟವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ಮುಂಜಾಗ್ರತೆ ವಹಿಸದ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಕ್ರೇನ್ ಯಂತ್ರ ಬಡಿದು ತನ್ನ ಪತಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಐವರ ವಿರುದ್ಧ ಪ್ರಕರಣ
ಪ್ರಕರಣದಲ್ಲಿ ಶಾಹಿ ಗಾರ್ಮೆಂಟ್ಸ್‌ನ ಮಾಲೀಕ, ಮ್ಯಾನೇಜರ್, ಎಂಜಿನಿಯರ್, ಕಾನ್‌ಟ್ರಾಕ್ಟರ್ ಹಾಗೂ ಮೇಸ್ತ್ರಿ ಶೇಷ ನಾಯ್ಕ ಅವರನ್ನು ಆರೋಪಿಗಳಾಗಿ ದಾಖಲಿಸಲಾಗಿದೆ. ಗಾಯಾಳು ನಾಗು ನಾಯ್ಕ ಅವರನ್ನು ಪ್ರಕರಣದಲ್ಲಿ 53 ವರ್ಷದ ಕಾರ್ಮಿಕ ಎಂದು ದಾಖಲಿಸಲಾಗಿದೆ.
ದೂರು ತಡವಾಗಿ ನೀಡಿರುವ ಕುರಿತು, ದೂರುದಾರರು ಮತ್ತು ಅವರ ಪತಿ ಕಾನೂನಿನ ಅರಿವು ಇಲ್ಲದ ಕಾರಣ ಘಟನೆಯ ನಂತರ ಏನು ಮಾಡಬೇಕು ಎಂಬುದು ತಿಳಿಯದೆ ತಡವಾಗಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
Crane accident at Shahi Garments in Shivamogga: Worker suffers severe injuries to hands and legs; case registered against five individuals.
