SUDDILIVE || SHIVAMOGGA
ಶಿವಮೊಗ್ಗ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಗೆ 13.30 ಲಕ್ಷ ಮತದಾರರು: 1.88 ಲಕ್ಷ ಹೆಸರುಗಳು ಸೇರ್ಪಡೆಯಾಗಿಲ್ಲ; ಅ.27ಕ್ಕೆ ಅಂತಿಮ ಪಟ್ಟಿ ಪ್ರಕಟ- 13.30 lakh voters in Shivamogga district's draft electoral roll; 1.88 lakh names not included; final list to be published on October 27
ಶಿವಮೊಗ್ಗ: ಜಿಲ್ಲೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಒಟ್ಟು 13,30,905 ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೂನ್ 16ರಂದು ಪ್ರಸ್ತುತ ಮತದಾರರ ಪಟ್ಟಿಯನ್ನು ಫ್ರೀಜ್ ಮಾಡಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿ 15,19,459 ಮತದಾರರು ಇದ್ದರು. ಇದೀಗ ಕರಡು ಪಟ್ಟಿಯಲ್ಲಿ ಸ್ಥಾನ ಪಡೆಯದ ಮತದಾರರ ಸಂಖ್ಯೆ 1,88,554 ಆಗಿದೆ. ಇದು ಹಿಂದಿನ ಪಟ್ಟಿಗೆ ಹೋಲಿಸಿದರೆ ಶೇ.12.41ರಷ್ಟು ಇಳಿಕೆಯಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ SIR ಪ್ರಕ್ರಿಯೆಯ ಪ್ರಗತಿ, ಕರಡು ಮತದಾರರ ಪಟ್ಟಿ, ಮುಂದಿನ ಕ್ಲೇಮ್ಸ್ ಮತ್ತು ಆಕ್ಷೇಪಣೆಗಳ ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದ ಅವರು, ಕರಡು ಪಟ್ಟಿಯೇ ಅಂತಿಮವಲ್ಲ. ಅರ್ಹ ಮತದಾರರಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.
ನಾಲ್ಕು ಪ್ರಮುಖ ಕಾರಣಗಳಿಂದ 1.88 ಲಕ್ಷ ಹೆಸರುಗಳು ಹೊರಗೆ
SIR ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯದ 1,88,554 ಮತದಾರರನ್ನು ವಿವಿಧ ವರ್ಗಗಳಾಗಿ ಗುರುತಿಸಲಾಗಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ಶಾಶ್ವತವಾಗಿ ಬೇರೆಡೆಗೆ ತೆರಳಿದವರು ಹಾಗೂ ಈಗಾಗಲೇ ಬೇರೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಸೇರಿದಂತೆ ವಿವಿಧ ಕಾರಣಗಳ ಆಧಾರದ ಮೇಲೆ ಈ ಪರಿಶೀಲನೆ ನಡೆಸಲಾಗಿದೆ.
ಈ ವರ್ಗೀಕರಣದಲ್ಲಿ ತಪ್ಪು ಕಂಡುಬಂದರೆ ಸಂಬಂಧಪಟ್ಟವರು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಾಜಕೀಯ ಪಕ್ಷಗಳಿಗೂ SIR ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಂಪೂರ್ಣ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ತಪ್ಪು ಮ್ಯಾಪಿಂಗ್ ಅಥವಾ ಅರ್ಹ ಮತದಾರರ ಹೆಸರು ಕೈಬಿಟ್ಟಿರುವ ಕುರಿತು ಇದುವರೆಗೆ ಯಾವುದೇ ನಿರ್ದಿಷ್ಟ ಆಕ್ಷೇಪಣೆಗಳು ಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
48,668 ಮತದಾರರಿಗೆ ನೋಟಿಸ್
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವವರ ಪೈಕಿ 48,668 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಇವರಲ್ಲಿ ಪ್ರಮುಖವಾಗಿ ಎರಡು ರೀತಿಯ ಪ್ರಕರಣಗಳನ್ನು ಗುರುತಿಸಲಾಗಿದೆ.
15,164 ಪ್ರಕರಣಗಳಲ್ಲಿ ಮ್ಯಾಪಿಂಗ್ ಆಗಿಲ್ಲ. ಎನ್ಯುಮರೇಷನ್ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ನೀಡದೆ ಅಥವಾ ಸೀಮಿತ ಮಾಹಿತಿ ನೀಡಿ ಫಾರ್ಮ್ ಸಲ್ಲಿಸಿರುವ ಪ್ರಕರಣಗಳು ಇದರಲ್ಲಿ ಸೇರಿವೆ. 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೆ ಅದರ ವಿವರ ನೀಡಬೇಕು. ಆ ಸಂದರ್ಭದಲ್ಲಿ ಮತದಾರರಾಗಿರದಿದ್ದರೆ ತಂದೆ, ತಾಯಿ, ತಾತ ಅಥವಾ ಅಜ್ಜಿಯ ಮಾಹಿತಿಯ ಮೂಲಕ ಸಂಬಂಧವನ್ನು ದೃಢಪಡಿಸಲು ಅವಕಾಶವಿದೆ.
ಇನ್ನು 33,504 ಪ್ರಕರಣಗಳಲ್ಲಿ ಸಿಸ್ಟಮ್ ಜನರೇಟೆಡ್ ಅನೋಮಲಿಗಳನ್ನು ಗುರುತಿಸಲಾಗಿದೆ. ತಂದೆ-ಮಗನ ವಯಸ್ಸಿನ ಅಸಹಜ ವ್ಯತ್ಯಾಸ, ತಾತ-ಮೊಮ್ಮಗನ ವಯಸ್ಸಿನ ಅಂತರ ಸೇರಿದಂತೆ ಸಾಮಾನ್ಯ ಮಾನದಂಡಗಳಿಗೆ ಹೊಂದಿಕೆಯಾಗದ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಪ್ರಕರಣಗಳಲ್ಲೂ ಹೆಚ್ಚುವರಿ ದಾಖಲೆಗಳನ್ನು ಪಡೆದು ಮಾಹಿತಿ ಖಚಿತಪಡಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ನೋಟಿಸ್‌ಗೆ ಕನಿಷ್ಠ ಏಳು ದಿನಗಳ ಕಾಲಾವಕಾಶ
ನೋಟಿಸ್‌ಗಳನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ. ನೋಟಿಸ್ ಪಡೆದವರಿಗೆ ಕನಿಷ್ಠ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಿಗದಿತ ದಿನಾಂಕದಂದು ಹಾಜರಾಗಿ ಸ್ಪಷ್ಟೀಕರಣ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಗದಿತ ದಿನ ಹಾಜರಾಗಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೋಟಿಸ್‌ನಲ್ಲಿ ಯಾವ ಕಾರಣಕ್ಕಾಗಿ ಪರಿಶೀಲನೆ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತದೆ. ‘ನೋ ಮ್ಯಾಪಿಂಗ್’ ಅಥವಾ ಯಾವ ರೀತಿಯ ಅನೋಮಲಿ ಕಂಡುಬಂದಿದೆ ಎಂಬುದನ್ನು ತಿಳಿಸುವುದರ ಜೊತೆಗೆ, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಕುರಿತೂ ಸೂಚನೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
1,793ರಿಂದ 1,886ಕ್ಕೆ ಮತಗಟ್ಟೆಗಳ ಹೆಚ್ಚಳ
SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯ ಜೊತೆಗೆ ಮತಗಟ್ಟೆಗಳನ್ನೂ ಮರುಹೊಂದಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ 1,793 ಮತಗಟ್ಟೆಗಳು ಇದ್ದು, ಇದೀಗ 1,886 ಮತಗಟ್ಟೆಗಳಿಗೆ ಪರಿಷ್ಕರಿಸಲಾಗಿದೆ.
ಒಂದು ಮತಗಟ್ಟೆಯಲ್ಲಿ 1,200ಕ್ಕಿಂತ ಹೆಚ್ಚು ಮತದಾರರು ಇರಬಾರದು ಎಂಬ ಉದ್ದೇಶದೊಂದಿಗೆ ಹಾಗೂ ಮತದಾರರಿಗೆ ಮತಗಟ್ಟೆ ದೂರವಾಗುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಇಂದಿನಿಂದ Form 6, 7, 8 ಸ್ವೀಕಾರ
ಜೂನ್ 16ರಿಂದ ಸ್ಥಗಿತಗೊಳಿಸಲಾಗಿದ್ದ Form 6, Form 7 ಮತ್ತು Form 8 ಅರ್ಜಿಗಳ ಸ್ವೀಕಾರವನ್ನು ಕರಡು ಮತದಾರರ ಪಟ್ಟಿ ಪ್ರಕಟವಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಪುನಃ ಆರಂಭಿಸಲಾಗಿದೆ.
ಹೊಸ ಮತದಾರರು Form 6 ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಆದರೆ SIR ನಂತರ Form 6 ಸಲ್ಲಿಸುವವರು 2002ರ ಮ್ಯಾಪಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಈ ಮೂಲಕ ಅರ್ಹರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ.
ಹೆಸರು ಅಥವಾ ಇತರ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ Form 8 ಮೂಲಕ ಪರಿಷ್ಕರಣೆ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
277 ಹೆಚ್ಚುವರಿ ERO/AEROಗಳ ನಿಯೋಜನೆಗೆ ಪ್ರಸ್ತಾವನೆ
48 ಸಾವಿರಕ್ಕೂ ಅಧಿಕ ನೋಟಿಸ್‌ಗಳ ವಿಚಾರಣೆ ಹಾಗೂ ಕ್ಲೇಮ್ಸ್ ಮತ್ತು ಆಕ್ಷೇಪಣೆಗಳ ವಿಲೇವಾರಿಗೆ ಹೆಚ್ಚುವರಿ ಅಧಿಕಾರಿಗಳ ಅಗತ್ಯವಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 277 ERO/AEROಗಳ ವ್ಯವಸ್ಥೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಿರುವ ಅಧಿಕಾರಿಗಳ ಜೊತೆಗೆ 266 ಹೆಚ್ಚುವರಿ ERO/AEROಗಳನ್ನು ನೇಮಕ ಮಾಡುವಂತೆ ಪ್ರಸ್ತಾವನೆ ನೀಡಲಾಗಿದೆ.
ಮತದಾರರು ವಿಚಾರಣೆಗಾಗಿ ದೂರದ ವಿಧಾನಸಭಾ ಕ್ಷೇತ್ರದ ಕೇಂದ್ರ ಕಚೇರಿಗೆ ತೆರಳಬೇಕಾಗದಂತೆ ನಗರ ಪ್ರದೇಶದ ಪ್ರತಿ ವಾರ್ಡ್‌ಗೆ ಒಬ್ಬ AERO ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ AERO ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅ.27ರಂದು SIR ಅಂತಿಮ ಮತದಾರರ ಪಟ್ಟಿ
ಕರಡು ಪಟ್ಟಿಯ ಪ್ರಕಟಣೆಯ ಬಳಿಕ ಕ್ಲೇಮ್ಸ್ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ನೋಟಿಸ್ ಪ್ರಕರಣಗಳ ವಿಚಾರಣೆಯನ್ನೂ ನಡೆಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಕ್ಟೋಬರ್ 27, 2026ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ ಮೂಲಕ SIR ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಯಾವುದೇ ತಪ್ಪು, ನ್ಯೂನತೆ ಅಥವಾ ಸಂದೇಹ ಕಂಡುಬಂದರೆ ತಕ್ಷಣ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು. ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು ಎಂದು ಅವರು ಮನವಿ ಮಾಡಿದರು.
‘ಅದರ್ಸ್’ ವರ್ಗ ಶೂನ್ಯಕ್ಕೆ ಇಳಿಕೆ
SIR ಪ್ರಕ್ರಿಯೆಯಲ್ಲಿ ಹಿಂದೆ ‘Others’ ಎಂದು ಗುರುತಿಸಲಾಗಿದ್ದ ಸುಮಾರು 28 ಸಾವಿರ ಪ್ರಕರಣಗಳನ್ನು ಪರಿಶೀಲಿಸಿ ಸ್ಪಷ್ಟ ವರ್ಗೀಕರಣ ಮಾಡಲಾಗಿದೆ. ಇದೀಗ ಜಿಲ್ಲೆಯಲ್ಲಿ ‘Others’ ವರ್ಗವನ್ನು ಶೂನ್ಯಕ್ಕೆ ಇಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮೃತಪಟ್ಟವರು, ಗೈರುಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಅಥವಾ ಈಗಾಗಲೇ ಬೇರೆಡೆ ಮತದಾರರ ಪಟ್ಟಿಯಲ್ಲಿ ಇರುವವರು ಎಂಬ ನಾಲ್ಕು ಪ್ರಮುಖ ವರ್ಗಗಳ ಆಧಾರದ ಮೇಲೆ ಅಂತಿಮವಾಗಿ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎಂದರು.
ರಾಜಕೀಯ ಪಕ್ಷಗಳಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದುವರೆಗೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ಯಾವುದೇ ನಿರ್ದಿಷ್ಟ ಆಕ್ಷೇಪಣೆ ಅಥವಾ ದೂರು ಬಂದಿಲ್ಲ. ನಿರಂತರವಾಗಿ ಮಾಹಿತಿಯನ್ನು ಹಂಚಿಕೊಂಡು, ತಪ್ಪುಗಳಿದ್ದರೆ ತಿಳಿಸುವಂತೆ ಪಕ್ಷಗಳಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಯುವ ಸಂಘಗಳ ನೋಂದಣಿಯಲ್ಲಿ ಶಿವಮೊಗ್ಗ ರಾಜ್ಯದಲ್ಲಿ 6ನೇ ಸ್ಥಾನ
ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಯುವ ಸಂಘಗಳ ನೋಂದಣಿ ಪ್ರಕ್ರಿಯೆಯ ಬಗ್ಗೆಯೂ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಜಿಲ್ಲೆಯಾದ್ಯಂತ 356 ಯುವ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಪ್ರತಿಯೊಂದು ಸಂಘದಲ್ಲೂ ಕನಿಷ್ಠ 100 ಸದಸ್ಯರಂತೆ ಒಟ್ಟು 35,600 ಸದಸ್ಯರನ್ನು ನೋಂದಾಯಿಸುವ ಗುರಿ ನಿಗದಿಪಡಿಸಲಾಗಿದೆ.
ಈವರೆಗೆ 28,137 ಸದಸ್ಯರ ನೋಂದಣಿ ಪೂರ್ಣಗೊಂಡಿದ್ದು, 8,165 ನೋಂದಣಿ ಬಾಕಿ ಇದೆ. ಈ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಶಿವಮೊಗ್ಗ ನಗರ ಪ್ರದೇಶಕ್ಕೆ ಇನ್ನೂ ಎರಡು-ಮೂರು ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕಾಗಬಹುದು. ಅದನ್ನು ಹೊರತುಪಡಿಸಿ ಉಳಿದ ಪ್ರದೇಶಗಳ ಸಂಘ ರಚನೆ ಪ್ರಕ್ರಿಯೆಯನ್ನು ಸೋಮವಾರವೇ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.
ಪ್ರತಿ ಸಂಘಕ್ಕೆ 100 ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಸಂಘಗಳಿಗೆ ಮಾರ್ಗದರ್ಶನ ನೀಡಲು ಸರ್ಕಾರಿ ನೌಕರರನ್ನು ‘ಮೆಂಟರ್’ಗಳಾಗಿ ನೇಮಕ ಮಾಡಲಾಗುತ್ತದೆ. ಸಂಘದ ಖರ್ಚುಗಳನ್ನು ಅಧ್ಯಕ್ಷರು ಮತ್ತು ಮೆಂಟರ್‌ಗಳ ಜಂಟಿ ಸಹಿಯೊಂದಿಗೆ ನಿರ್ವಹಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತು
ಅಧ್ಯಕ್ಷರ ಆಯ್ಕೆಯಲ್ಲಿ ಪ್ರತ್ಯೇಕ ಮೀಸಲಾತಿ ಇಲ್ಲದಿದ್ದರೂ, ಅಧ್ಯಕ್ಷರು ಪುರುಷರಾಗಿದ್ದರೆ ಉಪಾಧ್ಯಕ್ಷರು ಕಡ್ಡಾಯವಾಗಿ ಮಹಿಳೆಯಾಗಿರಬೇಕು. ಕಾರ್ಯಕಾರಿ ಸಮಿತಿಯಲ್ಲೂ ಮೀಸಲಾತಿ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಯುವ ಸಂಘಗಳ ಮೂಲಕ ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ ಹಾಗೂ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಯುವಕರನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ವೇದಿಕೆಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಸೆಪ್ಟೆಂಬರ್‌ನಿಂದ ಜನಸೇವಾ ಕಾರ್ಯಕ್ರಮ
ಸೆಪ್ಟೆಂಬರ್ ಮೊದಲ ಶನಿವಾರದಿಂದ ಜನಸೇವಾ ಕಾರ್ಯಕ್ರಮಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ನಂತರ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ.
ಅರ್ಜಿಗಳ ವಿಲೇವಾರಿಗಾಗಿ ಇಂಟಿಗ್ರೇಟೆಡ್ ಪ್ಲಾಟ್‌ಫಾರ್ಮ್ ಹಾಗೂ IPGRS ವ್ಯವಸ್ಥೆ ಬಳಸಲಾಗುತ್ತದೆ. ಅರ್ಜಿಗಳಿಗೆ ಸಕಾಲದ ಕಾಲಮಿತಿಯನ್ನು ಅನ್ವಯಿಸಿ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆಹಾರ ಸುರಕ್ಷತೆ: ಹೋಟೆಲ್, ರೆಸ್ಟೋರೆಂಟ್, ಪ್ಯಾಕೇಜಿಂಗ್ ಘಟಕಗಳ ಪರಿಶೀಲನೆ
ಜಿಲ್ಲೆಯಲ್ಲಿ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಶೀಲನೆ ನಡೆಸಲು ಯೋಜನೆ ರೂಪಿಸಲಾಗಿದೆ. ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್, ಫುಡ್ ಡೆಲಿವರಿ ಸೇವೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ವಿವಿಧ ಘಟಕಗಳನ್ನು ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಕುರಿತು ಆಂತರಿಕ ಚರ್ಚೆ ನಡೆಸಲಾಗಿದ್ದು, ಕಾರ್ಯಾಚರಣೆಯ ವಿವರಗಳನ್ನು ಮುಂಚಿತವಾಗಿ ಬಹಿರಂಗಪಡಿಸುವುದಿಲ್ಲ. ಆಹಾರ ಸುರಕ್ಷತಾ ಮಾನದಂಡಗಳು ಹಾಗೂ ಫುಡ್ ಸೇಫ್ಟಿ ಕಾಯ್ದೆಯ ವ್ಯಾಪ್ತಿಗೆ ಬರುವ ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುವುದು ಎಂದರು.
ಹಿಂದೆ ಶಿವಮೊಗ್ಗ ನಗರದಲ್ಲಿ ಅವಧಿ ಮೀರಿದ ದಿನಾಂಕಗಳನ್ನು ಬದಲಿಸಿ ಪ್ಯಾಕಿಂಗ್ ಮಾಡುತ್ತಿದ್ದ ಘಟಕದ ಮೇಲೆ ನಡೆದ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ, ಅದರ ಕ್ರಮದ ಬಗ್ಗೆ ಮಾಹಿತಿ ಪಡೆದು ತಿಳಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಬರ ಪರಿಸ್ಥಿತಿ: ಭದ್ರಾವತಿ ತಾಲೂಕಿನಲ್ಲಿ ಗ್ರೌಂಡ್ ಟ್ರೂಥಿಂಗ್
ಬರ ಪರಿಸ್ಥಿತಿ ಕುರಿತು ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ನಿಗದಿತ ಮಾನದಂಡಗಳ ಆಧಾರದ ಮೇಲೆ ಭದ್ರಾವತಿ ತಾಲೂಕಿನಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಲಾಗಿದೆ ಎಂದು ತಿಳಿಸಿದರು.
ಮಳೆ ಕೊರತೆ, ನಿರಂತರ ಮೂರು ವಾರಗಳ ಒಣಹವೆ ಸೇರಿದಂತೆ ನಿಗದಿತ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಭೂಮಿಯ ತೇವಾಂಶ, ಹಸಿರು ಹೊದಿಕೆ ಹಾಗೂ ಬೆಳೆಗಳ ಸ್ಥಿತಿಗತಿ ಸೇರಿದಂತೆ ವಿವಿಧ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಗ್ರೌಂಡ್ ಟ್ರೂಥಿಂಗ್ ಬಳಿಕ ಮುಂದಿನ ಹಂತದ ಪರಿಶೀಲನೆ ನಡೆಯಲಿದೆ ಎಂದರು.
ಭದ್ರಾ ಜಲಾಶಯದ ನೀರು ಬಳಕೆ ಕುರಿತು ಸಮಾಲೋಚನೆ
ಭದ್ರಾ ಜಲಾಶಯದ ನೀರು ಬಳಕೆಯ ವಿಚಾರದಲ್ಲಿ ರೈತರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಈಗಲೇ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರೆ, ಇನ್ನೂ ಕೆಲವರು ಬೇಸಿಗೆಗಾಗಿ ನೀರನ್ನು ಕಾಯ್ದಿರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
MAMCOS ಜಾಗ ಖರೀದಿ ಕುರಿತು ದಾಖಲೆ ಪರಿಶೀಲನೆ
MAMCOS ಜಾಗಕ್ಕೆ ಸಂಬಂಧಿಸಿದಂತೆ ಕೇಳಿಬಂದಿರುವ ಹೆಚ್ಚಿನ ಬೆಲೆಗೆ ಖರೀದಿ ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಜಿಲ್ಲಾಧಿಕಾರಿ, ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಜಮೀನು ವ್ಯವಹಾರದಲ್ಲಿ ಸಬ್ ರಿಜಿಸ್ಟ್ರಾರ್ ಮಾರ್ಗಸೂಚಿ ಮೌಲ್ಯ ಹಾಗೂ ಕಳೆದ ಮೂರು ವರ್ಷಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ನೋಂದಣಿ ವ್ಯವಹಾರಗಳ ಆಧಾರದ ಮೇಲೆ ದರ ಪರಿಶೀಲಿಸಲಾಗುತ್ತದೆ. ಈ ಕುರಿತು ಸಬ್ ರಿಜಿಸ್ಟ್ರಾರ್‌ರಿಂದ ಅಗತ್ಯ ಮಾಹಿತಿಯನ್ನು ಕೇಳಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ತಮ್ಮ ನಿಲುವನ್ನು ತಿಳಿಸುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಕರಡು ಮತದಾರರ ಪಟ್ಟಿ ವೀಕ್ಷಣೆಗಾಗಿ: ceo.karnataka.gov.in ಸಂಪರ್ಕಿಸಲು ಕೋರಿದೆ.
