SUDDILIVE || SHIVAMOGGA
ಶಿವಮೊಗ್ಗದಲ್ಲಿ ತಿರಂಗಾ ಅಭಿಯಾನ: 30 ಸಾವಿರ ಮನೆಗಳಿಗೆ ರಾಷ್ಟ್ರಧ್ವಜ, 1,500 ಬೈಕ್‌ಗಳ ರ‍್ಯಾಲಿ- 'Tiranga' Campaign in Shivamogga: National flags for 30,000 homes, 1,500-bike rally
ಶಿವಮೊಗ್ಗ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 30 ಸಾವಿರ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಲಾಗುವುದು ಎಂದು ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 13, 14 ಮತ್ತು 15ರಂದು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿ ಹಾಗೂ ರಾಷ್ಟ್ರಾಭಿಮಾನವನ್ನು ವ್ಯಕ್ತಪಡಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ನಗರದ 305 ಬೂತ್‌ಗಳ ವ್ಯಾಪ್ತಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್ 10ರಿಂದ 15ರವರೆಗೆ ಮನೆ ಮನೆಗೆ ತಿರಂಗಾ ಧ್ವಜ ವಿತರಿಸುವ ಕಾರ್ಯಕ್ರಮ ನಡೆಯಲಿದೆ. ಸುಮಾರು 30 ಸಾವಿರ ಮನೆಗಳಿಗೆ ಧ್ವಜ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಆಗಸ್ಟ್ 11ರಂದು ಯುವಮೋರ್ಚಾ ವತಿಯಿಂದ ಬೃಹತ್ ಬೈಕ್ ರ‍್ಯಾಲಿ ನಡೆಯಲಿದ್ದು, 1,500ಕ್ಕೂ ಅಧಿಕ ಬೈಕ್‌ಗಳು ಭಾಗವಹಿಸಲಿವೆ. ಸಂಜೆ 4 ಗಂಟೆಗೆ ಹಳೆ ಜೈಲು ಆವರಣದ ಅಮ್ಮಮ್ಮ ಪ್ರಭು ಪಾರ್ಕ್‌ನಿಂದ ರ‍್ಯಾಲಿ ಆರಂಭವಾಗಿ ಪ್ರಹ್ಲಾದ್ ಶೆಟ್ಟಿ ವೃತ್ತದವರೆಗೆ ಸಾಗಲಿದೆ.
ಆಗಸ್ಟ್ 12ರಂದು ಮಹಾಮೋರ್ಚಾ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧಿ, ಬಸವೇಶ್ವರ, ವಿಶ್ವೇಶ್ವರಯ್ಯ, ಶಿವಪ್ಪ ನಾಯಕ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಗಾಂಧಿ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಮೋಹನ್ ರೆಡ್ಡಿ ತಿಳಿಸಿದರು.
ಆಗಸ್ಟ್ 13ರಂದು ಒಬಿಸಿ ಮೋರ್ಚಾ ವತಿಯಿಂದ ಮಾಜಿ ಯೋಧರು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಗುವುದು. ಸಂಜೆ 5 ಗಂಟೆಗೆ ಶಿವಪ್ಪ ನಾಯಕ ವೃತ್ತದಲ್ಲಿ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 14ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಕನ್ನಡ ಸಂಘಗಳು, ಗಣಪತಿ ಸಂಘಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ಸ್ವಾತಂತ್ರ್ಯ ಹೋರಾಟಗಾರರ ಕುರಿತ ಸುಮಾರು ಎಂಟು ಟ್ಯಾಬ್ಲೋಗಳು ಮತ್ತು ವಿಶೇಷ ಧ್ವಜ ವಾಹನ ಇರಲಿದೆ. 2,000ಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಎಸ್‌ಐಆರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾತನಾಡಿದ ಅವರು, ಶಿವಮೊಗ್ಗ ನಗರದ 305 ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಿಎಲ್‌ಒ-2 ಆಗಿ ಕಾರ್ಯನಿರ್ವಹಿಸಿದ್ದು, ಹೊಸ ಮತದಾರರ ಸೇರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿನ ದೋಷಗಳ ತಿದ್ದುಪಡಿಗೆ ಸಹಕಾರ ನೀಡಿದ್ದಾರೆ. ಈ ಕಾರ್ಯದಲ್ಲಿ ಶಿವಮೊಗ್ಗ ನಗರ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದಿದೆ ಎಂದು ಮೋಹನ್ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸುಡಾ ಅಧ್ಯಕ್ಷ ಇಂಜಿನಿಯರ್ ಜ್ಞಾನೇಶ್ವರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ತೌಡೆ, ದೀನ್ ದಯಾಳ್, ಮಾಜಿ ಪಾಲಿಕೆ ಸದಸ್ಯ ವಿಶ್ವನಾಥ್, ವಿವಿಧ ನಗರ ಪ್ರಾಧಿಕಾರಿಗಳ ಪದಾಧಿಕಾರಿಗಳು, ಮಾಧ್ಯಮ ಸಂಚಾಲಕರಾದ ಮುರಳಿ, ಪ್ರದೀಪ್ ಬಲ್ಲಾಳ್ ಸೇರಿದಂತೆ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಉಪಸ್ಥಿತರಿದ್ದರು.
'Tiranga' Campaign in Shivamogga: National flags for 30,000 homes, 1,500-bike rally
