SUDDILIVE || SHIVAMOGGA
ವಿಹೆಚ್‌ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಬೇರೆ ಸಂಘಟನೆಗಳಲ್ಲ: ರಾಜೇಶ್ ಗೌಡ-VHP, Bajrang Dal, and Hindu Jagarana Vedike are not separate organizations: Rajesh Gowda
ಶಿವಮೊಗ್ಗ: ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಒಂದು ವಾಹನವನ್ನು ಗುರುತಿಸಲಾಗಿದ್ದು, ಮತ್ತೊಂದು ವಾಹನದ ಗುರುತಿಸುವಿಕೆ ಇನ್ನೂ ಆಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್–ಬಜರಂಗದಳದ ಅಧ್ಯಕ್ಷ ರಾಜೇಶ್ ಗೌಡ ತಿಳಿಸಿದ್ದಾರೆ.
ಘಟನೆ ಕುರಿತು ಮಾತನಾಡಿದ ಅವರು, ಪ್ರಕರಣದಲ್ಲಿ ಗಾಯಗೊಂಡಿರುವ ಮೂವರು ಕೂಡ ಭಜರಂಗದಳದ ಜವಾಬ್ದಾರಿಯುತ ಕಾರ್ಯಕರ್ತರು ಎಂದು ಸ್ಪಷ್ಟಪಡಿಸಿದರು.
“ಅಭಿಷೇಕ್ ಅವರು ಪ್ರಖಂಡದ ಸಂಯೋಜಕರಾಗಿದ್ದಾರೆ. ಚಂದ್ರಶೇಖರ್ ಅವರು ಅರ್ಥಾಳ ಗ್ರಾಮದ ಸಂಯೋಜಕರಾಗಿದ್ದಾರೆ. ಕಿರಣ್ ಅವರು ಬಟ್ಟೆಮಲ್ಲಪ್ಪ ಭಾಗದ ಸಂಯೋಜಕರಾಗಿದ್ದಾರೆ. ಗಾಯಗೊಂಡಿರುವ ಮೂವರೂ ಭಜರಂಗದಳದ ಕಾರ್ಯಕರ್ತರು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು” ಎಂದು ರಾಜೇಶ್ ಗೌಡ ಹೇಳಿದರು.
ಮೂರು ಸಂಘಟನೆಗಳು ಒಂದೇ ಮಾತೃ ಸಂಘಟನೆಯ ವ್ಯಾಪ್ತಿಯಲ್ಲಿ
ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೂ ಭಾಗಿಯಾಗಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜೇಶ್ ಗೌಡ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯನ್ನು ಪರಸ್ಪರ ಬೇರೆ ಸಂಘಟನೆಗಳಂತೆ ನೋಡಬಾರದು ಎಂದರು.
“ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಬೇರೆ ಸಂಘಟನೆಗಳಲ್ಲ. ಅವು ಒಂದೇ ಮಾತೃ ಸಂಘಟನೆಯ ವ್ಯಾಪ್ತಿಯಲ್ಲಿ ತಮ್ಮದೇ ಆದ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿವೆ. ನಾವು ಬೇರೆ, ಅವರು ಬೇರೆ ಎಂಬುದಿಲ್ಲ. ಎಲ್ಲರೂ ಒಟ್ಟಾಗಿ ಇರುತ್ತೇವೆ, ಒಟ್ಟಾಗಿ ಚರ್ಚಿಸುತ್ತೇವೆ ಮತ್ತು ಅಗತ್ಯ ಸಂದರ್ಭದಲ್ಲಿ ಒಟ್ಟಾಗಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಪ್ರತಿಯೊಂದು ಸಂಘಟನೆಗೂ ಅದರದೇ ಆದ ಕಾರ್ಯವ್ಯಾಪ್ತಿ ಮತ್ತು ಶಿಸ್ತುಬದ್ಧ ವ್ಯವಸ್ಥೆ ಇದೆ. ಅದಕ್ಕೆ ಅನುಗುಣವಾಗಿ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಆದರೆ ಸಮಾಜದ ವಿಚಾರ ಬಂದಾಗ ಪರಸ್ಪರ ಸಹಕಾರದಿಂದ ಕೆಲಸ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
‘ಭಜರಂಗದಳ ದುರ್ಬಲವಾಗಿಲ್ಲ’
ಭಜರಂಗದಳ ದುರ್ಬಲವಾಗುತ್ತಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದ ರಾಜೇಶ್ ಗೌಡ, ಸಂಘಟನೆ ನಿರಂತರವಾಗಿ ಹಿಂದೂ ಸಮಾಜದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
“ಭಜರಂಗದಳ ವೀಕ್ ಆಗುತ್ತಿದೆ ಎಂದು ಯಾಕೆ ಅಂದುಕೊಂಡಿದ್ದೀರೋ ಗೊತ್ತಿಲ್ಲ. ಭಜರಂಗದಳ ನಿರಂತರವಾಗಿ ಹಿಂದೂ ಸಮಾಜದ ಕೆಲಸ ಮಾಡುತ್ತಿದೆ. ನಮಗೆ ನಮ್ಮದೇ ಆದ ವ್ಯವಸ್ಥೆ ಇದೆ. ನಮ್ಮ ಹಿರಿಯರು, ಮಾರ್ಗದರ್ಶಕರು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡುವುದು ಭಜರಂಗದಳದ ಕೆಲಸವಲ್ಲ” ಎಂದು ಸ್ಪಷ್ಟಪಡಿಸಿದರು.
‘ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರೂ ಸಂಪರ್ಕದಲ್ಲಿದ್ದಾರೆ’
ಘಟನೆ ನಡೆದ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೂ ಸ್ಥಳದಲ್ಲಿದ್ದರು ಎಂಬುದನ್ನು ಅವರು ಒಪ್ಪಿಕೊಂಡರು.
“ಹಿಂದೂ ಜಾಗರಣ ವೇದಿಕೆಯ ಹುಡುಗರು ಎಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಯಾರನ್ನೂ ಹೊರಗಿಟ್ಟು ಕೆಲಸ ಮಾಡುವುದಿಲ್ಲ. ಅವರ ಸಂಘಟನೆಗೆ ಅವರದೇ ಆದ ಶಿಸ್ತುಬದ್ಧ ಕ್ರಮಗಳಿವೆ. ನಮಗೂ ನಮ್ಮದೇ ಆದ ವ್ಯವಸ್ಥೆ ಇದೆ. ಆದರೆ ನಾವು ಬೇರೆ, ಅವರು ಬೇರೆ ಅಲ್ಲ” ಎಂದು ರಾಜೇಶ್ ಗೌಡ ಹೇಳಿದರು.
‘ಹಲ್ಲೆಗೊಳಗಾದವರು ಭಜರಂಗದಳದ ಕಾರ್ಯಕರ್ತರು’
ಘಟನೆಯ ದಿನ ರಾತ್ರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಒಟ್ಟಿಗೆ ಇದ್ದರೂ, ಹಲ್ಲೆಗೊಳಗಾಗಿ ಗಾಯಗೊಂಡಿರುವವರು ಭಜರಂಗದಳದ ಜವಾಬ್ದಾರಿಯುತ ಕಾರ್ಯಕರ್ತರು ಎಂದು ರಾಜೇಶ್ ಗೌಡ ಪುನರುಚ್ಚರಿಸಿದರು.
“ಆ ದಿನ ರಾತ್ರಿ ಎಲ್ಲರೂ ಇದ್ದರು. ಯಾರನ್ನೋ ಬಿಟ್ಟು ಇವರು, ಇವರನ್ನು ಬಿಟ್ಟು ಅವರು ಎಂಬುದಿಲ್ಲ. ಎಲ್ಲರೂ ಒಟ್ಟಿಗೆ ಇದ್ದರು. ಆದರೆ ಏಟು ಬಿದ್ದಿದ್ದು ಭಜರಂಗದಳದ ಕಾರ್ಯಕರ್ತರಿಗೆ” ಎಂದರು.
ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದು ವಾಹನವನ್ನು ಗುರುತಿಸಲಾಗಿದ್ದು, ಮತ್ತೊಂದು ವಾಹನದ ಗುರುತಿಸುವಿಕೆ ಹಾಗೂ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ರಾಜೇಶ್ ಗೌಡ ಮಾಹಿತಿ ನೀಡಿದರು.
ಮೂವರು ಅರೆಸ್ಟ್
ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣಕ್ಕೆ ಬಳಸಲಾಗಿದೆ ಎನ್ನಲಾದ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್–ಬಜರಂಗದಳದ ಅಧ್ಯಕ್ಷ ರಾಜೇಶ್ ಗೌಡ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ವಶಕ್ಕೆ ಪಡೆದಿರುವ ಎರಡು ವಾಹನಗಳ ಪೈಕಿ ಒಂದು ವಾಹನವನ್ನು ಈಗಾಗಲೇ ಗುರುತಿಸಲಾಗಿದೆ. ಮತ್ತೊಂದು ವಾಹನವನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
“ಈಗಾಗಲೇ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಮೂರು ಜನರನ್ನು ಬಂಧಿಸಿದ್ದಾರೆ. ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರೊಳಗೆ ಒಂದು ವಾಹನವನ್ನು ನಾವು ಐಡೆಂಟಿಫೈ ಮಾಡಿದ್ದೇವೆ. ಇನ್ನೊಂದು ವಾಹನ ಇನ್ನೂ ಐಡೆಂಟಿಫೈ ಆಗಿಲ್ಲ” ಎಂದು ರಾಜೇಶ್ ಗೌಡ ಹೇಳಿದರು.
