SUDDILIVE || SHIKARIPURA
ಮಧು ಬಂಗಾರಪ್ಪ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ: ‘ಯಡಿಯೂರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ-BY Vijayendra attacks Madhu Bangarappa: 'You don't have the morals to talk about Yediyurappa'
ಶಿಕಾರಿಪುರ: ಶಿಕಾರಿಪುರ ತಾಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಾಲೂಕು ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವ ವಹಿಸಿ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಿಕಾರಿಪುರ ತಾಲೂಕಿನ ರೈತರು ಹಾಗೂ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಮಧು ಬಂಗಾರಪ್ಪ ಅವರಿಗೆ ಎಚ್ಚರಿಕೆ ನೀಡಿದ ವಿಜಯೇಂದ್ರ, “ನೀವು ಆಡಿರುವ ಭಾಷೆಯಲ್ಲಿ ನನಗೂ ಉತ್ತರ ಕೊಡಲು ಬರುತ್ತದೆ. ಆದರೆ ನನ್ನ ತಂದೆ-ತಾಯಿ ನನಗೆ ಆ ಸಂಸ್ಕೃತಿಯನ್ನು ಕಲಿಸಿಕೊಟ್ಟಿಲ್ಲ” ಎಂದು ಹೇಳಿದರು.
“ನನ್ನ ತಂದೆ ಯಡಿಯೂರಪ್ಪನವರು ಹಾಗೂ ತಾಯಿ ಮನೆಗೆ ಬಂದವರಿಗೆ ಗೌರವ ನೀಡಬೇಕು, ಬಡವರು ಯಾವ ಜಾತಿ, ಪಂಗಡದವರು ಎಂದು ಕೇಳದೆ ಬಂದವರಿಗೆ ಅನ್ನ ನೀಡಬೇಕು ಎಂಬ ಸಂಸ್ಕೃತಿಯನ್ನು ಕಲಿಸಿಕೊಟ್ಟಿದ್ದಾರೆ. ಶಿಕಾರಿಪುರ ತಾಲೂಕಿನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು” ಎಂದರು.
ಶಿಕಾರಿಪುರದ ಮಣ್ಣಿನಲ್ಲೇ ಹೋರಾಟದ ಕಿಚ್ಚಿದೆ
ಶಿಕಾರಿಪುರ ತಾಲೂಕಿನ ಪ್ರತಿಯೊಂದು ಮಣ್ಣಿನ ಕಣದಲ್ಲೂ ಹೋರಾಟದ ಕಿಚ್ಚಿದೆ ಎಂದು ಹೇಳಿದ ವಿಜಯೇಂದ್ರ, ಇಡೀ ರಾಜ್ಯಕ್ಕೆ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ನೀಡಿದ ಕೀರ್ತಿ ಶಿಕಾರಿಪುರ ತಾಲೂಕಿನ ಜನತೆ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದರು.
“ಇಂತಹ ಕಾರ್ಯಕರ್ತರು ಹಾಗೂ ಮತದಾರರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು, ಮುಂದಿನ ಬಾರಿ ತಾಲೂಕಿಗೆ ಬರುವಾಗ ಗೌರವಯುತವಾಗಿ ಬಂದು, ಗೌರವಯುತವಾಗಿ ಹೋಗಬೇಕು. ಶಿಕಾರಿಪುರದ ಹೋರಾಟದ ಕಿಚ್ಚನ್ನು ಯಾರೂ ಮರೆಯಬಾರದು” ಎಂದು ಹೇಳಿದರು.
ಯಡಿಯೂರಪ್ಪನವರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಮಧು ಬಂಗಾರಪ್ಪ ಅವರಿಗೆ ಇಲ್ಲ ಎಂದು ಹೇಳಿದ ವಿಜಯೇಂದ್ರ, “ಯಡಿಯೂರಪ್ಪನವರ ತಂಟೆಗೆ ಬರದೆ ಇದ್ದರೆ ನಿಮಗೆ ಒಳ್ಳೆಯದು” ಎಂದು ಎಚ್ಚರಿಕೆ ನೀಡಿದರು.
ರೈತರಿಗೆ 7–8 ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಆಗ್ರಹ
ಶಿಕಾರಿಪುರ ತಾಲೂಕಿನ ರೈತರ ಪ್ರಮುಖ ಸಮಸ್ಯೆಗಳ ಕುರಿತು ಮಾತನಾಡಿದ ವಿಜಯೇಂದ್ರ, ಏತ ನೀರಾವರಿ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಾಗಿದ್ದರೂ, ಪ್ರಸ್ತುತ ವಿದ್ಯುತ್ ಕೊರತೆಯಿಂದ ಕೆರೆಗಳಿಗೆ ನೀರು ತುಂಬಿಸಲು ಹಾಗೂ ಬೋರ್‌ವೆಲ್‌ಗಳ ಮೂಲಕ ಬೆಳೆಗಳಿಗೆ ನೀರುಣಿಸಲು ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
“ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ನೀರುಣಿಸಲು ಬೋರ್‌ವೆಲ್‌ಗಳನ್ನು ಚಾಲನೆ ಮಾಡಬೇಕಾಗಿದೆ. ಆದರೆ ಮೂರು ಫೇಸ್ ವಿದ್ಯುತ್‌ನ್ನು 7–8 ಗಂಟೆಗಳ ಕಾಲ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ರೈತರ ಸಮಸ್ಯೆಗಳನ್ನು ಪ್ರಶ್ನಿಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದಲೇ ಈ ಹೋರಾಟ ನಡೆಸುತ್ತಿದ್ದೇವೆ” ಎಂದರು.
ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದಿರುವುದಾಗಿ ವಿಜಯೇಂದ್ರ ತಿಳಿಸಿದರು. ರೈತರಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಸ್ತೂರಿ ರಂಗನ್, ಗಾಡ್ಗೀಳ್ ವರದಿ ಕುರಿತು ಸರ್ಕಾರವನ್ನು ಪ್ರಶ್ನಿಸಿದ ವಿಜಯೇಂದ್ರ
ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಗಳ ವಿಚಾರದಲ್ಲಿಯೂ ವಿಜಯೇಂದ್ರ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
“ಒಬ್ಬ ಸಚಿವರು ಹೋರಾಟಕ್ಕೆ ಮುಂದಾಗುವ ಮೊದಲು ಕನಿಷ್ಠ ಅಧ್ಯಯನ ಮಾಡಬೇಕು. ಕಸ್ತೂರಿ ರಂಗನ್ ವರದಿ ಅಥವಾ ಗಾಡ್ಗೀಳ್ ವರದಿ ಯಾವುದೇ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಆದೇಶದ ಮೇರೆಗೆ ಬಂದ ವರದಿಗಳಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆಯಲಾಗಿದೆ” ಎಂದು ಅವರು ಹೇಳಿದರು.
ಈ ವರದಿಗಳ ಪರಿಣಾಮವಾಗಿ ಕಾಡಂಚಿನ ರೈತರು ಆತಂಕಕ್ಕೆ ಒಳಗಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
“ಕಸ್ತೂರಿ ರಂಗನ್ ಮತ್ತು ಗಾಡ್ಗೀಳ್ ವರದಿಗಳ ಕುರಿತು ವಿಶೇಷ ಅಧಿವೇಶನದಲ್ಲಿ ಮಾತನಾಡುವಾಗ ಸಮಗ್ರ ಅಧ್ಯಯನ ಮಾಡಿಕೊಂಡು ಮಾತನಾಡಬೇಕು. ಕಾಡಂಚಿನ ರೈತರ ಹಿತಾಸಕ್ತಿ ಹಾಗೂ ಅವರ ರಕ್ಷಣೆಯ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು” ಎಂದು ಹೇಳಿದರು.
ಹಿಂದಿನ ಚುನಾವಣೆಯ ಪ್ರಣಾಳಿಕೆ ಕುರಿತು ಪ್ರಶ್ನೆ
ಮುಖ್ಯಮಂತ್ರಿ ಮಲೆನಾಡಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಿಂದಿನ ಚುನಾವಣಾ ಭರವಸೆಗಳ ಕುರಿತು ಪ್ರಶ್ನಿಸುವಂತೆ ಮಧು ಬಂಗಾರಪ್ಪ ಅವರಿಗೆ ವಿಜಯೇಂದ್ರ ಸವಾಲು ಹಾಕಿದರು.
“ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿ ಪ್ರಣಾಳಿಕೆ ಸಿದ್ಧಪಡಿಸಿದ್ದರು. ಆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದನ್ನು ಈಡೇರಿಸಲಾಗಿದೆ ಎಂಬುದನ್ನು ಮುಖ್ಯಮಂತ್ರಿಗಳ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶ್ನಿಸಬೇಕು” ಎಂದರು.
ಬರ, ರೈತರ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಟೀಕೆ
ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ ಎಂದು ವಿಜಯೇಂದ್ರ ಆರೋಪಿಸಿದರು. ಬರಪೀಡಿತ ತಾಲೂಕುಗಳ ಘೋಷಣೆ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಬಿಜೆಪಿ ನಡೆಸಿದ ಹೋರಾಟಗಳನ್ನು ಅವರು ಪ್ರಸ್ತಾಪಿಸಿದರು.
ವಿಶೇಷ ಅಧಿವೇಶನಕ್ಕೆ ಬಿಜೆಪಿ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ ಎಂದು ವಿಜಯೇಂದ್ರ ಹೇಳಿದರು. ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಆರೋಪ
ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಬಡವರು, ರೈತರು, ಮಹಿಳೆಯರು ಮತ್ತು ಯುವಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.
ವಸತಿ, ಗಂಗಾ ಕಲ್ಯಾಣ, ವಿಕಲಚೇತನರ ಪಿಂಚಣಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಅವರು ಸರ್ಕಾರವನ್ನು ಟೀಕಿಸಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸಂಪನ್ಮೂಲಗಳ ಮೇಲೆ ಒತ್ತಡ ಉಂಟಾಗಿದೆ ಎಂದು ಆರೋಪಿಸಿದ ಅವರು, ಅಬಕಾರಿ ಆದಾಯ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು. ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳು ಮತ್ತು ಬಡವರು ಪ್ರಯಾಣಿಸಲು ಸಮರ್ಪಕ ಬಸ್‌ಗಳಿಲ್ಲದಿರುವುದನ್ನೂ ಅವರು ಪ್ರಸ್ತಾಪಿಸಿದರು.
ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ
ಶಿಕಾರಿಪುರ ತಾಲೂಕಿನ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಯಾವುದೇ ಅನ್ಯಾಯವಿಲ್ಲದೆ ಸಮರ್ಪಕವಾಗಿ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
“ರೈತರು ಸರ್ಕಾರದ ಭಿಕ್ಷೆಯನ್ನು ಕೇಳುತ್ತಿಲ್ಲ. ರೈತರ ಬದುಕಿಗೆ ಆಧಾರವಾಗಿರುವ ಏತ ನೀರಾವರಿ ಯೋಜನೆಗಳಿಗೆ ಸಮರ್ಪಕ ನೀರು ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಮೂರು ಫೇಸ್ ವಿದ್ಯುತ್ 7–8 ಗಂಟೆಗಳ ಕಾಲ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು” ಎಂದರು.
ಮುಂದಿನ ಒಂದೂವರೆ ವರ್ಷ ರೈತರ ಪರ ಹೋರಾಟ: ವಿಜಯೇಂದ್ರ
2028ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ ವಿಜಯೇಂದ್ರ, ಮುಂದಿನ ಒಂದೂವರೆ ವರ್ಷ ಬಿಜೆಪಿ ರೈತರು, ಬಡವರು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಹೋರಾಟ ನಡೆಸಲಿದೆ ಎಂದರು.
“ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ಹಾಗೂ ಶಾಸಕನಾಗಿ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಮತ್ತು ಬಡವರ ಸಮಸ್ಯೆಗಳನ್ನು ಆಲಿಸುತ್ತೇನೆ. ಹೋರಾಟ, ಧರಣಿ, ಸತ್ಯಾಗ್ರಹ, ಪಾದಯಾತ್ರೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಯಾವ ರೀತಿಯ ಹೋರಾಟಕ್ಕೆ ಕರೆ ನೀಡುತ್ತಾರೋ ಅದರಲ್ಲಿ ನಾನು ಮತ್ತು ರಾಘಣ್ಣ ಅವರೊಂದಿಗೆ ಇರುತ್ತೇವೆ” ಎಂದು ಹೇಳಿದರು.
ತಮ್ಮ ಇತ್ತೀಚಿನ ಲಿಂಗಸುಗೂರು–ರಾಯಚೂರು–ಬಳ್ಳಾರಿ ಪಾದಯಾತ್ರೆಯನ್ನು ಪ್ರಸ್ತಾಪಿಸಿದ ಅವರು, ಸುಮಾರು 180 ಕಿ.ಮೀ. ದೂರದ ಪಾದಯಾತ್ರೆಯಲ್ಲಿ ರೈತರು, ಕುರಿಗಾಹಿಗಳು, ಹಾಲುಮತ ಸಮುದಾಯದವರು, ಬಡವರು, ಮಹಿಳೆಯರು ಮತ್ತು ಅಲೆಮಾರಿ ಸಮುದಾಯಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಅರಿತುಕೊಂಡಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪದೊಂದಿಗೆ ರಾಜ್ಯಾದ್ಯಂತ ಹೋರಾಟ ಮುಂದುವರಿಸುವುದಾಗಿ ವಿಜಯೇಂದ್ರ ಹೇಳಿದರು.
