SUDDILIVE || SAGARA
ಸಾಗರದಲ್ಲಿ ಪೊಲೀಸ್ ಕಚೇರಿಯ ಕೆಲವೇ ಮೀಟರ್ ಅಂತರದಲ್ಲಿ ಬೃಹತ್ ಗಾಂಜಾ ಗಿಡ ಪತ್ತೆ! Huge cannabis plant found in Sagar, just a few meters away from the police station!
ಶಿವಮೊಗ್ಗ: ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಯ ಸಮೀಪದಲ್ಲೇ ಬೃಹತ್ ಗಾತ್ರದ ಗಾಂಜಾ ಗಿಡವೊಂದು ಬೆಳೆದು ನಿಂತಿರುವುದು ಪತ್ತೆಯಾಗಿದ್ದು, ಸಾಗರ ನಗರದಲ್ಲಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸಾಗರದ ಬಿ.ಹೆಚ್. ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿಯಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿರುವ ಕನ್ಸರ್ವೆನ್ಸಿ ರಸ್ತೆಯಲ್ಲಿ ಗಾಂಜಾ ಗಿಡ ಬೆಳೆದು ನಿಂತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಜನನಿಬಿಡ ಪ್ರದೇಶದ ಸಮೀಪವೇ ಮಾದಕ ವಸ್ತುವಿನ ಗಿಡ ಬೆಳೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕನ್ಸರ್ವೆನ್ಸಿ ರಸ್ತೆಗಳು ಹಾಗೂ ನಗರದ ಹಲವು ನಿರ್ಜನ ಒಳರಸ್ತೆಗಳಲ್ಲಿ ಈ ರೀತಿಯ ಗಿಡಗಳನ್ನು ಉದ್ದೇಶಪೂರ್ವಕವಾಗಿ ಬೆಳೆಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಕಚೇರಿಯ ಮೂಗಿನ ಕೆಳಗೇ ಇಂತಹ ಘಟನೆ ನಡೆದಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.
ಸಾಗರ ನಗರದ ಒಳರಸ್ತೆಗಳು ಮಾದಕ ವ್ಯಸನಿಗಳ ಅಡ್ಡೆಯಾಗುತ್ತಿವೆಯೇ? ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ನಗರದಾದ್ಯಂತ ಇರುವ ಕನ್ಸರ್ವೆನ್ಸಿ ರಸ್ತೆಗಳು, ಖಾಲಿ ಜಾಗಗಳು ಹಾಗೂ ನಿರ್ಜನ ಪ್ರದೇಶಗಳನ್ನು ಪೊಲೀಸರು ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಅಕ್ರಮ ಬೆಳೆ ಹಾಗೂ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪತ್ತೆಯಾಗಿರುವ ಗಾಂಜಾ ಗಿಡದ ಕುರಿತು ಪೊಲೀಸರು ಪರಿಶೀಲನೆ ನಡೆಸಿ, ಅದು ಹೇಗೆ ಅಲ್ಲಿ ಬೆಳೆದಿದೆ ಹಾಗೂ ಇದರ ಹಿಂದೆ ಯಾರಾದರೂ ಇರುವರೆ ಎಂಬುದನ್ನು ಪತ್ತೆಹಚ್ಚಬೇಕಾಗಿದೆ.
ಪೊಲೀಸ್ ಮತ್ತು ಅಬಕಾರಿ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಸಾಗರ ನಗರದಾದ್ಯಂತ ಸಮಗ್ರ ಶೋಧ ನಡೆಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.
Huge cannabis plant found in Sagar, just a few meters away from the police station!
