ಕಸ್ತೂರಿರಂಗನ್ ವರದಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆ; ಇದು ಚಿಲ್ರೆ ರಾಜಕಾರಣ ಮಾಡುವವರಿಗೆ ಅರ್ಥವಾಗಬೇಕು ಎಂದ ಮಂಜುನಾಥಗೌಡ-Massive protest march in Thirthahalli against the Kasturirangan report

SUDDILIVE || THIRTHAHALLI

ಕಸ್ತೂರಿರಂಗನ್ ವರದಿ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆ; ಇದು ಚಿಲ್ರೆ ರಾಜಕಾರಣ ಮಾಡುವವರಿಗೆ ಅರ್ಥವಾಗಬೇಕು ಎಂದ ಮಂಜುನಾಥಗೌಡ-Massive protest march in Thirthahalli against the Kasturirangan report-Manjunatha Gowda says those engaging in petty politics need to understand this.   
Theerthahalli, kasturirangan


ತೀರ್ಥಹಳ್ಳಿ:
ಮಲೆನಾಡಿಗರಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ತೀರ್ಥಹಳ್ಳಿಯಲ್ಲಿ ಇಂದು ಪಕ್ಷಾತೀತವಾಗಿ ಬೃಹತ್ ಪಾದಯಾತ್ರೆ ನಡೆಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಹಾಗೂ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ರೈತರು, ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದರು.

ತೀರ್ಥಹಳ್ಳಿ ತಾಲೂಕಿನ ಉಂಟೂರುಕಟ್ಟೆ-ಕೈಮರದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಸುಮಾರು 8 ಕಿ.ಮೀ. ಪಾದಯಾತ್ರೆ ನಡೆಯಿತು. ವಿಶೇಷವಾಗಿ ಮಂಜುನಾಥಗೌಡ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಎತ್ತಿನ ಬಂಡಿಯಲ್ಲಿ ತೆರಳಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಸಾಗರ ಹಾಗೂ ಹೊಸನಗರದಲ್ಲಿ ನಡೆದ ಹೋರಾಟಗಳ ಬಳಿಕ ಇಂದು ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಕಸ್ತೂರಿರಂಗನ್ ವರದಿ ವಿರೋಧಿಸಿ ಹೋರಾಟ ನಡೆಸಲಾಯಿತು.

ಪಾದಯಾತ್ರೆಯ ವೇಳೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಸುವ ಅಗತ್ಯವಿದೆ ಎಂದು ಹೇಳಿದರು.

“ಇದೊಂದು ದೊಡ್ಡ ಸಮಾವೇಶವಾಗಬೇಕು. ಒಂದು ಲಕ್ಷ ಜನ ಸೇರಬೇಕು. ಒಂದು ಲಕ್ಷ ಎಂದರೆ 99,900 ಜನ ಅಲ್ಲ, ನಿಜವಾಗಿಯೂ ಒಂದು ಲಕ್ಷ ಜನ ಸೇರಬೇಕು. ಅದನ್ನು ಸೇರಿಸುವುದು ನಮಗೆ ಮಾತ್ರ ಸಾಧ್ಯ. ನಮ್ಮಲ್ಲಿ 7 ಲಕ್ಷ ಸದಸ್ಯರಿದ್ದಾರೆ. ಡಿಸಿಸಿ ಬ್ಯಾಂಕೊಂದರಲ್ಲೇ 1.20 ಲಕ್ಷ ರೈತ ಸದಸ್ಯರಿದ್ದಾರೆ” ಎಂದು ಹೇಳಿದರು.

ಸಹಕಾರಿ ಕ್ಷೇತ್ರದ ವಿವಿಧ ಸಂಸ್ಥೆಗಳ ಸದಸ್ಯರನ್ನು ಒಳಗೊಂಡು ಹೋರಾಟವನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದ ಅವರು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಕ್ರೆಡಿಟ್ ಮತ್ತು ಮಾರ್ಕೆಟಿಂಗ್ ಸಹಕಾರಿ ಸಂಸ್ಥೆಗಳು, ಮಹಿಳಾ ಸಹಕಾರಿಗಳು ಹಾಗೂ ಸೌಹಾರ್ದ ಸಹಕಾರಿಗಳ ಸಹಭಾಗಿತ್ವವೂ ಈ ಹೋರಾಟದಲ್ಲಿದೆ ಎಂದರು.

“ಇದೊಂದು ಪಕ್ಷಾತೀತವಾದ ಸಭೆ. ಕೇಂದ್ರ ಮತ್ತು ಜನರ ಪರವಾಗಿ ಹೋರಾಟ ಮಾಡುವ ಸಭೆ ಎಂಬುದನ್ನು ಚಿಲ್ಲರೆ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು” ಎಂದು ಮಂಜುನಾಥಗೌಡ ಹೇಳಿದರು.

ಪಾದಯಾತ್ರೆಯಲ್ಲಿ ಕಸ್ತೂರಿರಂಗನ್ ವರದಿ ವಿರುದ್ಧ ಘೋಷಣೆಗಳು ಮೊಳಗಿದವು. “ಕಸ್ತೂರಿರಂಗನ್ ವರದಿಗೆ ಧಿಕ್ಕಾರ”, “ರೈತರ ಬದುಕಿಗೆ ಜಯ”, “ಸಹಕಾರಿ ಶಕ್ತಿಗೆ ಜಯ”, “ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಗೆ ಜಯ” ಎಂಬ ಘೋಷಣೆಗಳನ್ನು ಕೂಗಲಾಯಿತು.

“ಭಾರತ್ ಮಾತಾ ಕಿ ಜೈ” ಘೋಷಣೆಯೊಂದಿಗೆ ಪಾದಯಾತ್ರೆಗೆ ಮತ್ತಷ್ಟು ಉತ್ಸಾಹ ತುಂಬಲಾಯಿತು.

ಮಲೆನಾಡಿನ ರೈತರ ಕೃಷಿ, ಜೀವನೋಪಾಯ ಹಾಗೂ ಜನವಸತಿ ಪ್ರದೇಶಗಳ ಮೇಲೆ ಕಸ್ತೂರಿರಂಗನ್ ವರದಿಯ ಶಿಫಾರಸುಗಳಿಂದ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಹೋರಾಟಗಾರರು, ವರದಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ತೀರ್ಥಹಳ್ಳಿಯಲ್ಲಿ ನಡೆದ ಇಂದಿನ ಪಾದಯಾತ್ರೆ ಮೂಲಕ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ನೀಡುವ ಪ್ರಯತ್ನ ನಡೆದಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ನಡೆಸುವ ಸುಳಿವನ್ನೂ ನಾಯಕರು ನೀಡಿದ್ದಾರೆ.

Massive protest march in Thirthahalli against the Kasturirangan report-Manjunatha Gowda says those engaging in petty politics need to understand this.   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close