ಅರಸಾಳು ಸುತ್ತಮುತ್ತ ಕಾಡಾನೆಗಳ ದಾಂಧಲೆ: ಬೆಳೆ ನಾಶ, ರೈತರು ಕಂಗಾಲು-Wild elephants rampage around Arasalu: Crops destroyed, farmers in distress

 SUDDILIVE || SHIVAMOGGA

ಅರಸಾಳು ಸುತ್ತಮುತ್ತ ಕಾಡಾನೆಗಳ ದಾಂಧಲೆ: ಬೆಳೆ ನಾಶ, ರೈತರು ಕಂಗಾಲು-Wild elephants rampage around Arasalu: Crops destroyed, farmers in distress    
Wild elephant



ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಅರಸಾಳು ಗ್ರಾ.ಪಂ. ವ್ಯಾಪ್ತಿಯ ತಮ್ಮಡಿಕೊಪ್ಪ ಹಾಗೂ ಬಟಾಣಿಜಡ್ಡು ಪ್ರದೇಶಗಳಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಮೂರ್ತಿ ಆಚಾರ್ ಮತ್ತು ಮಂಜಪ್ಪ ಎಂಬ ರೈತರ ತೋಟಗಳಿಗೆ ನುಗ್ಗಿದ ಆನೆಗಳು ಅಡಿಕೆ ಹಾಗೂ ಬಾಳೆ ಬೆಳೆಗಳನ್ನು ಧ್ವಂಸಗೊಳಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಕಾಡಾನೆಗಳ ಹಾವಳಿ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿರಿಗೆರೆ ವಲಯ ಅರಣ್ಯಾಧಿಕಾರಿ ಸವಿನಯ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆಲುವಳ್ಳಿ, ಗಾಳಿಬೈಲು ಹಾಗೂ ಕೆಂಚನಾಲ ಭಾಗದ ಜನರು ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಅರಣ್ಯ ಅಂಚಿನಲ್ಲಿರುವ ಜಮೀನುಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಕಾಡಾನೆಗಳು ಕಂಡುಬಂದಲ್ಲಿ ಅವುಗಳನ್ನು ಹಿಂಬಾಲಿಸುವುದು ಅಥವಾ ಹತ್ತಿರ ಹೋಗುವ ಸಾಹಸ ಮಾಡದೆ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಪದೇಪದೇ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ಅರಣ್ಯ ಅಂಚಿನ ಗ್ರಾಮಗಳ ಜನರ ಸುರಕ್ಷತೆಗೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Wild elephants rampage around Arasalu: Crops destroyed, farmers in distress    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close