ಕಾಂಗ್ರೆಸ್‌ನವರಿಗೆ ಗ್ರಹಚಾರ ಸರಿ ಇಲ್ಲ; ಜನರು ತಕ್ಕ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ- Congress's attitude is not right; people will teach them a lesson: B.Y. Vijayendra

 SUDDILIVE || SHIVAMOGGA

ಕಾಂಗ್ರೆಸ್‌ನವರಿಗೆ ಗ್ರಹಚಾರ ಸರಿ ಇಲ್ಲ; ಜನರು ತಕ್ಕ ಪಾಠ ಕಲಿಸಲಿದ್ದಾರೆ: ಬಿ.ವೈ. ವಿಜಯೇಂದ್ರ- Congress's attitude is not right; people will teach them a lesson: B.Y. Vijayendra  
Congress, attitude

ಶಿವಮೊಗ್ಗ: ಕಾಂಗ್ರೆಸ್‌ನವರು ಸಮಾಜಗಳ ನಡುವೆ ಹಾಗೂ ಧರ್ಮಗಳ ನಡುವೆ ಬೆಂಕಿ ಹಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಉಮರ್ ಖಾಲಿದ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಹಾಗೂ ‘ನಮ್ಮವನು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯೇಂದ್ರ, ಮೋದಿ ಅವರು 2014ರಿಂದ ಪ್ರಧಾನಮಂತ್ರಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದು, ಸುಮಾರು 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಜಾಗತಿಕ ಸವಾಲುಗಳ ನಡುವೆಯೂ ಭಾರತವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ದೊರೆಯಬೇಕು ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಅವರ ಸಂಕಲ್ಪ ಈಡೇರಬೇಕು ಎಂದು ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರು ಆಶೀರ್ವಾದದ ದೀಪ ಬೆಳಗಿಸಿ ಪ್ರಾರ್ಥಿಸಿದ್ದಾರೆ ಎಂದರು.

ರೈತರಿಗೆ ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲ: ಆರೋಪ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಭೀಕರ ಬರಗಾಲದ ಪರಿಸ್ಥಿತಿಯಲ್ಲಿಯೂ ರೈತರಿಗೆ ಕನಿಷ್ಠ ಎಂಟರಿಂದ ಹತ್ತು ಗಂಟೆಗಳ ತ್ರಿಫೇಸ್ ವಿದ್ಯುತ್ ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ನೀರಿನ ಕೊರತೆಯಿಂದ ಅರ್ಧಂಬರ್ಧ ಬೆಳೆದ ಬೆಳೆಗಳು ಕೂಡ ಒಣಗಿ ನಾಶವಾಗುತ್ತಿವೆ ಎಂದು ಹೇಳಿದರು.

ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರಾಜ್ಯದಾದ್ಯಂತ ರೈತರಲ್ಲಿ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೋರಾಟ ನಡೆಸುತ್ತಿದ್ದು, ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ‘ಬಳ್ಳಾರಿ ಚಲೋ’ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

ಕರಾವಳಿ ಭಾಗಕ್ಕೆ ವಿಶೇಷ ಅನುದಾನಕ್ಕೆ ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುತ್ತಿರುವುದನ್ನು ಉಲ್ಲೇಖಿಸಿದ ವಿಜಯೇಂದ್ರ, ಕರಾವಳಿ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಸುಮಾರು ₹18,000 ಕೋಟಿಯಿಂದ ₹20,000 ಕೋಟಿ ಅನುದಾನ ನೀಡಲಾಗಿತ್ತು ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ಕೇವಲ ಸಭೆ ನಡೆಸಿ ತೆರಳುವ ಕಾರ್ಯಕ್ರಮವಾಗಬಾರದು. ರಸ್ತೆ ಅಭಿವೃದ್ಧಿ ಸೇರಿದಂತೆ ಕರಾವಳಿ ಭಾಗದ ವಿವಿಧ ಬೇಡಿಕೆಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ರಸ್ತೆ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರಕ್ಕೆ ₹200 ಕೋಟಿ ಬಿಡುಗಡೆ ಮಾಡುವಂತೆ ವಿಶೇಷ ಅಧಿವೇಶನದಲ್ಲಿ ಆಗ್ರಹಿಸುವುದಾಗಿ ವಿಜಯೇಂದ್ರ ತಿಳಿಸಿದರು.

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜಕೀಯ ಬೇಡ

ಕಸ್ತೂರಿರಂಗನ್ ವರದಿ ಕುರಿತು ಮುಖ್ಯಮಂತ್ರಿ ಮಂಗಳೂರಿನ ಬಳಿಕ ತೀರ್ಥಹಳ್ಳಿಯಲ್ಲಿ ಸಂವಾದ ನಡೆಸಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ವಿಜಯೇಂದ್ರ, ಕಸ್ತೂರಿರಂಗನ್ ವರದಿ ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾದ ಸಮಿತಿಯ ವರದಿ ಎಂದು ಹೇಳಿದರು.

ಗಾಡ್ಗೀಳ್ ವರದಿ ಹಾಗೂ ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಕಾಡಂಚಿನ ರೈತರು ಆತಂಕಕ್ಕೆ ಒಳಗಾಗಿದ್ದು, ಅವರಲ್ಲಿ ಭಯ ಹುಟ್ಟಿಸುವ ಬದಲು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಕಸ್ತೂರಿರಂಗನ್ ವರದಿ ಕುರಿತು ರಾಜಕೀಯ ಮಾಡುವ ಬದಲು ವಿಧಾನಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಜನರನ್ನು ಹೆದರಿಸಿ ಅವರ ಗಮನವನ್ನು ಬೇರೆಡೆಗೆ ತಿರುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. ಈ ವಿಚಾರವನ್ನು ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸುವುದಾಗಿ ತಿಳಿಸಿದರು.

ಬರಗಾಲ ಘೋಷಣೆ ವಿಚಾರವೂ ಸದನದಲ್ಲಿ ಪ್ರಸ್ತಾಪ

ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದ್ದರೂ ಶಿವಮೊಗ್ಗ ಜಿಲ್ಲೆಯ ಯಾವುದೇ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆಯಾಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ವಿಚಾರವನ್ನು ಸದನದಲ್ಲಿ ಚರ್ಚಿಸುವುದಾಗಿ ಹೇಳಿದರು.

ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುದ್ದೇಬಿಹಾಳದ ಕಾಂಗ್ರೆಸ್ ಹಿರಿಯ ಶಾಸಕರು ತಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದನ್ನು ಗಮನಿಸಿದ್ದೇವೆ ಎಂದರು.

ಬರಗಾಲ ಪೀಡಿತ ತಾಲೂಕುಗಳ ಘೋಷಣೆಯಲ್ಲಿಯೂ ಸಚಿವರು ರಾಜಕೀಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಯಾದಗಿರಿ ಜಿಲ್ಲೆಯ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ವಿಧಾನಸೌಧದ ಎದುರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿರುವುದನ್ನೂ ಉಲ್ಲೇಖಿಸಿದ ಅವರು, ಬರಗಾಲದ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಎಲ್ಲ ವಿಚಾರಗಳನ್ನು ವಿಶೇಷ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಲಿದೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಕಸ್ತೂರಿರಂಗನ್ ಸಂವಾದಕ್ಕೆ ಆಹ್ವಾನ ಬಂದಿಲ್ಲ

ಕಸ್ತೂರಿರಂಗನ್ ವರದಿ ಕುರಿತು ಮುಖ್ಯಮಂತ್ರಿ ನಡೆಸಲಿರುವ ಸಂವಾದಕ್ಕೆ ತಮಗೆ ಆಹ್ವಾನ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ತಮ್ಮನ್ನು ಯಾವುದೇ ರೀತಿಯಲ್ಲಿ ಆಹ್ವಾನಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಹೋರಾಟದ ಪರಿಣಾಮವಾಗಿ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ ಎಂದು ಹೇಳಿದ ಅವರು, ಸೆಪ್ಟೆಂಬರ್ 21, 22 ಮತ್ತು 23ರಂದು ನಡೆಯಲಿರುವ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳು, ರೈತರ ಸಮಸ್ಯೆ, ಬರಗಾಲದ ಸಮಸ್ಯೆ ಸೇರಿದಂತೆ ಕಸ್ತೂರಿರಂಗನ್ ವರದಿ ಬಗ್ಗೆಯೂ ಸಮಗ್ರವಾಗಿ ಚರ್ಚಿಸುವುದಾಗಿ ತಿಳಿಸಿದರು.

Congress's attitude is not right; people will teach them a lesson: B.Y. Vijayendra 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close