SUDDILIVE || BHADRAVATHI
ಲೈನ್ ರಿಪೇರಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಲೈನ್‌ಮ್ಯಾನ್ ದಾರುಣ ಸಾವು- MESCOM lineman dies after being electrocuted during line repair
ಭದ್ರಾವತಿ: ರೈತರ ಜಮೀನಿನ ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಮೆಸ್ಕಾಂ ಲೈನ್‌ಮ್ಯಾನ್ ಒಬ್ಬರು ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಿಗೇನಹಳ್ಳಿ ಗಡಿ ಬಳಿ ನಡೆದಿದೆ.
ಮೃತರನ್ನು ಮೆಸ್ಕಾಂ ಆನವೇರಿ ಘಟಕದ ಲೈನ್‌ಮ್ಯಾನ್ ಎಸ್.ಜೆ. ಸಂಜಯ್ ದತ್ (33) ಎಂದು ಗುರುತಿಸಲಾಗಿದೆ.
ಮಲ್ಲಿಗೇನಹಳ್ಳಿ ಗಡಿ ಬಳಿ ರೈತರ ಜಮೀನಿನಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಸಂಜಯ್ ದತ್ ಅವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನಿಯಮಾನುಸಾರ ಕಂಬ ಹತ್ತಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದರೆ, ದಿಢೀರನೆ ವಿದ್ಯುತ್ ಪ್ರವಹಿಸಿದ ಪರಿಣಾಮ ಅವರು ತೀವ್ರವಾಗಿ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ.
ತಕ್ಷಣ ಸ್ಥಳೀಯರು ಅವರನ್ನು ಹೊಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಸಂಜಯ್ ದತ್ ಅವರು ಹೊನ್ನಾಳಿ ತಾಲೂಕಿನ ಚಿಕ್ಕ ಬಾಸೂರು ತಾಂಡಾ ಮೂಲದವರು. ಪತ್ನಿ, ಮೂರು ವರ್ಷದ ಮಗಳು ಹಾಗೂ ಕೇವಲ ಒಂದು ತಿಂಗಳ ಹಸುಗೂಸನ್ನು ಅಗಲಿದ್ದಾರೆ. ಕುಟುಂಬದ ಆಧಾರವಾಗಿದ್ದ ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆ ಬಳಿಕ ಸಹೋದ್ಯೋಗಿಗಳು ಹಾಗೂ ನೌಕರರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಅಗತ್ಯ ಸುರಕ್ಷತಾ ಸಾಮಗ್ರಿಗಳ ಕೊರತೆ ಹಾಗೂ ನೌಕರರ ಮೇಲಿನ ಅಧಿಕ ಕೆಲಸದ ಒತ್ತಡವೇ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿದ್ಯುತ್ ಲೈನ್ ದುರಸ್ತಿ ಸಂದರ್ಭದಲ್ಲಿ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ ವಿದ್ಯುತ್ ಪ್ರವಹಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ವಿದ್ಯುತ್ ಹೇಗೆ ಹರಿಯಿತು ಎಂಬುದರ ಕುರಿತು ತನಿಖೆಯಿಂದ ಸ್ಪಷ್ಟತೆ ಸಿಗಬೇಕಿದೆ ಎಂದು ನೌಕರರು ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
