SUDDILIVE || HOSANAGARA
ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ: ಗ್ರಾಮಸ್ಥರ ಆಕ್ರೋಶ, ಸ್ಥಳದಲ್ಲಿ ಹೈಡ್ರಾಮಾ-Forest Department attempts to clear disabled youth's site: Villagers outraged, hydro drama at the site
ಹೊಸನಗರ: ವಸತಿಹೀನ ಅಂಗವಿಕಲ ಯುವಕನೊಬ್ಬ ಕಳೆದ 15 ವರ್ಷಗಳಿಂದ ವಾಸಿಸುತ್ತಿದ್ದ ಶೆಡ್ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಕೇವಿಯ ಹಾಲಂದೂರು ಗ್ರಾಮದಲ್ಲಿ ನಡೆದಿದೆ.
ಹಾಲಂದೂರು ಗ್ರಾಮದ ಲೋಕೇಶ್ ಅವರ ಪುತ್ರ ಸುನೀಲ್ ಕುಮಾರ್ ಅಂಗವಿಕಲನಾಗಿದ್ದು, ಸ್ವಂತ ಮನೆ ಇಲ್ಲದೆ ಕಳೆದ ಸುಮಾರು 15 ವರ್ಷಗಳಿಂದ ಸರ್ವೆ ನಂಬರ್ 49ರಲ್ಲಿನ ಸಣ್ಣ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇದೇ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುವ ನಿರೀಕ್ಷೆಯಲ್ಲಿದ್ದ ಯುವಕನಿಗೆ ಅರಣ್ಯ ಇಲಾಖೆ ಅಧಿಕಾರಿಗಳ ತೆರವು ಕಾರ್ಯಾಚರಣೆ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಶೆಡ್ ತೆರವುಗೊಳಿಸಿ ಆ ಜಾಗದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಅಂಗವಿಕಲ ಹಾಗೂ ವಸತಿಹೀನ ಯುವಕನಿಗೆ ಸೇರಿದ ಜಾಗವನ್ನು ತೆರವುಗೊಳಿಸುವುದು ಮಾನವೀಯತೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವುದನ್ನು ಗಮನಿಸಿದ ಹೊಸನಗರ ವಲಯ ಅರಣ್ಯಾಧಿಕಾರಿ (RFO) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸ್ಥಳದಲ್ಲೇ ಗ್ರಾಮಸ್ಥರು ಮತ್ತು ಸುನೀಲ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು. ಯುವಕನಿಗೆ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವಷ್ಟು ಜಾಗವನ್ನು ಬಿಟ್ಟು, ಉಳಿದ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಇದರಿಂದ ಕೆಲಕಾಲ ಪರಿಸ್ಥಿತಿ ಶಾಂತವಾಗಿತ್ತು.
ಆದರೆ, ಉಳಿದ ಜಾಗದಲ್ಲಿ ಗಿಡಗಳನ್ನು ನೆಟ್ಟ ಬಳಿಕ ಅಧಿಕಾರಿಗಳು ತಮ್ಮ ನಿಲುವು ಬದಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 'ಜಾಗ ಬಿಟ್ಟುಕೊಡಲು ನಮಗೆ ಕಾನೂನಿನಲ್ಲಿ ಅಧಿಕಾರವಿಲ್ಲ. ಮೇಲಾಧಿಕಾರಿಗಳನ್ನು ಭೇಟಿ ಮಾಡಿ' ಎಂದು ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತೆ ಆಕ್ರೋಶಗೊಂಡರು.
ಇದರಿಂದ ರೊಚ್ಚಿಗೆದ್ದ ಕೆಲವರು ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳನ್ನು ಕಿತ್ತೊಗೆಯಲು ಮುಂದಾದರು. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಮುನ್ನ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಸದ್ಯಕ್ಕೆ ಸುನೀಲ್ ಕುಮಾರ್ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವ ಜಾಗವನ್ನು ಬಿಡಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಆದರೆ, ಬಡ ಅಂಗವಿಕಲ ಯುವಕನ ವಸತಿ ಹಕ್ಕಿನ ವಿಚಾರದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ನಡುವಿನ ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.
ಜಿಲ್ಲಾ ಅರಣ್ಯಾಧಿಕಾರಿಗಳು (DFO) ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಹಲವು ವರ್ಷಗಳಿಂದ ಶೆಡ್‌ನಲ್ಲಿ ವಾಸಿಸುತ್ತಿರುವ ಅಂಗವಿಕಲ ಯುವಕನಿಗೆ ಮಾನವೀಯ ನೆಲೆಯಲ್ಲಿ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Forest Department attempts to clear disabled youth's site: Villagers outraged, hydro drama at the site
