SUDDILIVE || SHIVAMOGGA
ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ಆರೋಪ: ಮಲ್ಲಿಗೆನಹಳ್ಳಿಯ ದೇವರಾಜ ಅರಸು ವಸತಿ ನಿಲಯಕ್ಕೆ ತಹಶೀಲ್ದಾರ್ ಭೇಟಿ-Allegations of poor food in hostels: Tahsildar visits Devaraj Arasu hostel in Malligenahalli
ಶಿವಮೊಗ್ಗ: ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಮಲ್ಲಿಗೆನಹಳ್ಳಿಯ ದೇವರಾಜ ಅರಸು ವಸತಿ ನಿಲಯಕ್ಕೆ ತಹಶೀಲ್ದಾರ್ ರಾಜೀವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಅಡುಗೆ ವ್ಯವಸ್ಥೆ ಹಾಗೂ ಸ್ವಚ್ಛತೆ ಸೇರಿದಂತೆ ವಿವಿಧ ಅಂಶಗಳ ಕುರಿತು ಅಧಿಕಾರಿಗಳು ತಪಾಸಣೆ ನಡೆಸಿದರು. ಕಳಪೆ ಆಹಾರ ಪೂರೈಕೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಭೇಟಿ ಮಹತ್ವ ಪಡೆದುಕೊಂಡಿದೆ.
ಮಲ್ಲಿಗೆನಹಳ್ಳಿಯ ದೇವರಾಜ ಅರಸು ವಸತಿ ನಿಲಯಕ್ಕೆ ತಹಶೀಲ್ದಾರ್ ರಾಜೀವ್ ಹಾಗೂ ವಿಎ ಬಸಪ್ಪ ರೆಡ್ಡಿ ಅವರು ಭೇಟಿ ನೀಡಿ ಸ್ಥಳದಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಭೇಟಿ ನೀಡಿದ ವೇಳೆ ನಾಯಿಯೊಂದು ಹಾಸ್ಟೆಲ್ ನ ಅಡುಗೆ ಮನೆಯೊಳಗೆ ಇದ್ದಿದ್ದು ಕಂಡುಬಂದಿದೆ. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಕುರಿತು ಮಾಹಿತಿ ಪಡೆದುಕೊಂಡು, ಆಹಾರ ತಯಾರಿಕೆ ಮತ್ತು ವಿತರಣೆ ವ್ಯವಸ್ಥೆಯನ್ನೂ ಪರಿಶೀಲಿಸಲಾಯಿತು.
ವಸತಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಸುರಕ್ಷಿತ ಆಹಾರ ಒದಗಿಸುವುದು ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ಪರಿಶೀಲನೆಯ ವೇಳೆ ಕಂಡುಬಂದ ಅಂಶಗಳು ಹಾಗೂ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಕುರಿತ ಆರೋಪಗಳ ಕುರಿತು ವರದಿಯನ್ನು ಸಿದ್ಧಪಡಿಸಿ ಮುಂದಿನ ಕ್ರಮಕ್ಕಾಗಿ ಎಸಿ ಡಾ. ಮೈತ್ರಿ ಅವರಿಗೆ ಸಲ್ಲಿಸಲಾಗಿದೆ.
ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ಆಹಾರ ಮತ್ತು ಇತರ ಸೌಲಭ್ಯಗಳಿಗೆ ಅನುದಾನ ಒದಗಿಸಲಾಗುತ್ತಿದ್ದರೂ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳ ಪರಿಶೀಲನೆಯ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದು ಇದೀಗ ಗಮನ ಸೆಳೆದಿದೆ.


