ಜಲಜೀವನ್ ಮಿಷನ್‌ಗೆ ಮರುಚಾಲನೆ: ಸಚಿವ ಈಶ್ವರ ಖಂಡ್ರೆ ತ್ವರಿತ ಸ್ಪಂದನೆಗೆ ಸಮಟಗಾರು–ಕಡಸೂರು ನಾಗರಿಕರ ಅಭಿನಂದನೆ-Jaljeevan Mission relaunched: Minister Eshwar Khandre congratulates Samatagaru-Kadasur citizens for quick response

 SUDDILIVE || SHIVAMOGGA

ಜಲಜೀವನ್ ಮಿಷನ್‌ಗೆ ಮರುಚಾಲನೆ: ಸಚಿವ ಈಶ್ವರ ಖಂಡ್ರೆ ತ್ವರಿತ ಸ್ಪಂದನೆಗೆ ಸಮಟಗಾರು–ಕಡಸೂರು ನಾಗರಿಕರ ಅಭಿನಂದನೆ-Jaljeevan Mission relaunched: Minister Eshwar Khandre congratulates Samatagaru-Kadasur citizens for quick response
Jal, jeevan

ಹೊಸನಗರ, ಸೆ.13: ದೂರು ಸಲ್ಲಿಸಿದ 24 ಗಂಟೆಯೊಳಗೆ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರ ತ್ವರಿತ ಸ್ಪಂದನೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊನ್ನೇಬೈಲು ಗ್ರಾಮದ ಸಮಟಗಾರು ಹಾಗೂ ಕಡಸೂರು ಹಳ್ಳಿಯ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸುಮಾರು ನಾಲ್ಕು ವರ್ಷಗಳ ಹಿಂದೆ ಸಮಟಗಾರು–ಕಡಸೂರು ಭಾಗದಲ್ಲಿ ಪೈಪ್‌ಲೈನ್ ಅಳವಡಿಸಿ, ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡಿದ್ದರೂ ಸ್ಥಳೀಯರಿಗೆ ಯೋಜನೆಯ ಪ್ರಯೋಜನ ದೊರೆಯದೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿತ್ತು ಎಂದು ನಾಗರಿಕರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಹೋರಾಟಗಾರ ವೆಂಕಟೇಶ್ ಅವರು ಸಚಿವ ಈಶ್ವರ ಖಂಡ್ರೆ ಅವರ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಶೀಘ್ರ ಪರಿಹಾರ ಒದಗಿಸುವಂತೆ ಶಿವಮೊಗ್ಗ ಜಲಜೀವನ್ ಮಿಷನ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ 24 ಗಂಟೆಯೊಳಗೆ ಸ್ಪಷ್ಟ ಸೂಚನೆ ನೀಡಿದ್ದರು.

ಸಚಿವರ ಸೂಚನೆಯ ಬೆನ್ನಲ್ಲೇ ಸೆ.12ರಂದು ಹೊಸನಗರ ತಾಲೂಕು ಪಂಚಾಯತ್ ಅಧಿಕಾರಿಗಳು, ಹುಂಚ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೊಳವೆಬಾವಿ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಲು ಭೂವಿಜ್ಞಾನಿಗಳ ತಂಡ ಸಮಟಗಾರು–ಕಡಸೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡವು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡಿತು. ಶುದ್ಧ ಕುಡಿಯುವ ನೀರನ್ನು ಗ್ರಾಮಸ್ಥರ ಮನೆಗಳಿಗೆ ಒದಗಿಸುವ ನಿಟ್ಟಿನಲ್ಲಿ ಕೊಳವೆಬಾವಿಗೆ ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆಯನ್ನೂ ಕೈಗೊಳ್ಳಲಾಗಿದೆ.

ಸಚಿವರ ತ್ವರಿತ ಸ್ಪಂದನೆಯಿಂದಾಗಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರದ ನಿರೀಕ್ಷೆ ಮೂಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳೊಂದಿಗೆ ನಾಗರಿಕರು ಸೌಹಾರ್ದಯುತವಾಗಿ ಚರ್ಚೆ ನಡೆಸಿ, ಗ್ರಾಮದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ವಿವರಿಸಿದರು. ಆದಷ್ಟು ಶೀಘ್ರವಾಗಿ ಕಾಮಗಾರಿ ಮುಂದುವರಿಸಿ, ಜಲಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆಗಳಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸ್ಥಳೀಯ ನಿವಾಸಿಗಳಾದ ಸುರೇಶ್ ಭಟ್ಟರು, ಪಿ. ರಾಜೇಂದ್ರ, ಸದಾನಂದ, ಅವಿನಾಶ್, ಸದಾಶಿವ, ಗಿರೀಶ್ ಕೊಠಾರಿ, ನರಸಿಂಹ ಕೊಟಾರಿ ಹಾಗೂ ಗಣಪತಿ ಭಟ್ಟರು ಸಚಿವ ಈಶ್ವರ ಖಂಡ್ರೆ ಅವರ ಕಾರ್ಯವೈಖರಿ ಮತ್ತು ತ್ವರಿತ ಸ್ಪಂದನೆಯನ್ನು ಶ್ಲಾಘಿಸಿದ್ದಾರೆ.

ಹಲವು ವರ್ಷಗಳಿಂದ ಬಳಕೆಗೆ ಬಾರದಂತಾಗಿದ್ದ ಜಲಜೀವನ್ ಮಿಷನ್ ಯೋಜನೆಗೆ ಇದೀಗ ಅಧಿಕಾರಿಗಳ ಸ್ಥಳ ಪರಿಶೀಲನೆಯ ಮೂಲಕ ಮರುಚಾಲನೆ ದೊರೆತಿರುವುದು ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿಸಿದೆ. ಶೀಘ್ರದಲ್ಲೇ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬುದು ಸ್ಥಳೀಯರ ಪ್ರಮುಖ ಆಶಯವಾಗಿದೆ.

Jaljeevan Mission relaunched: Minister Eshwar Khandre congratulates Samatagaru-Kadasur citizens for quick response

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close