SUDDILIVE || SAGARA
‘ಕಸ್ತೂರಿ ರಂಗನ್ ವರದಿ ಹಿಂಪಡೆಯುವವರೆಗೂ ಹೋರಾಟ’-ಬೇಳೂರು‘Struggle to continue until the Kasturirangan report is withdrawn’-Beluru
ಸಾಗರ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಆವಿನಹಳ್ಳಿಯಿಂದ ಸಾಗರದವರೆಗೆ ನಡೆದ ಬೃಹತ್ ಪಾದಯಾತ್ರೆಗೆ ಭರ್ಜರಿ ಸ್ಪಂದನೆ ದೊರೆತಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಪಾದಯಾತ್ರೆ ಸಾಗರದ ಗಾಂಧಿ ಮೈದಾನ ತಲುಪಿದ ಬಳಿಕ ಬೃಹತ್ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ವಿವಿಧ ಪಕ್ಷಗಳ ಮುಖಂಡರು, ಸಹಕಾರಿಗಳು, ರೈತರು, ಕೃಷಿ ಕಾರ್ಮಿಕರು, ಬಗರ್‌ಹುಕುಂ ಸಾಗುವಳಿದಾರರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಪಶ್ಚಿಮಘಟ್ಟ ಪ್ರದೇಶದಲ್ಲಿ ಭೌತಿಕ ಸರ್ವೇ ನಡೆಸಬೇಕು ಹಾಗೂ ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.
‘ಕಸ್ತೂರಿ ರಂಗನ್ ವರದಿ ಹಿಂಪಡೆಯುವವರೆಗೂ ಹೋರಾಟ’
ಸಭೆಗೂ ಮುನ್ನ ಮಾತನಾಡಿದ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಹೊಸನಗರದಲ್ಲಿ ಸಂಸದರು ಕಸ್ತೂರಿ ರಂಗನ್ ವರದಿ ಮಾರಕವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂತು ಚರ್ಚೆ ನಡೆಸಬೇಕೆಂದು ಹೇಳಿದ್ದರು. ಆದರೆ ಬಳಿಕ ಇದು ಕಾಂಗ್ರೆಸ್‌ನ ಕೂಸು ಎಂದು ಹೇಳುತ್ತಿರುವುದು ಬೇಸರ ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಹಲವು ಬಾರಿ ಕರಡು ಅಧಿಸೂಚನೆಗಳು ಹೊರಬಂದಿವೆ. ಈ ವಿಚಾರದಲ್ಲಿ ವಾಸ್ತವಾಂಶ ತಿಳಿದುಕೊಂಡು ಮಾತನಾಡಬೇಕು. ಆರಂಭದಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಹೋರಾಟ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಹಕಾರಿ ಕ್ಷೇತ್ರದ ಮುಖಂಡರ ಸಲಹೆಯಂತೆ ಪಕ್ಷಾತೀತವಾಗಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಮೂಲಕ ಹೋರಾಟ ರೂಪಿಸಲಾಗಿದೆ ಎಂದು ಬೇಳೂರು ವಿವರಿಸಿದರು.
“ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ,” ಎಂದು ಅವರು ಘೋಷಿಸಿದರು.
ಬಿಜೆಪಿ ಪಾದಯಾತ್ರೆ ವಿಚಾರದಲ್ಲೂ ಬೇಳೂರು ವಾಗ್ದಾಳಿ
ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಬೇಳೂರು, ಇದು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಎಂದು ಟೀಕಿಸಿದರು. ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕವೂ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದು ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮುಂದುವರಿಯಲಿದ್ದು, ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ರಾಜಕೀಯ ಬೆರೆಸದೆ ರೈತರ ಪರ ಹೋರಾಟ’
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಪಾದಯಾತ್ರೆ ಸಂಪೂರ್ಣವಾಗಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ನೇತೃತ್ವದಲ್ಲಿ, ಪಕ್ಷಾತೀತವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
“ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದಕ್ಕಿಂತ, ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ, ಮಾರ್ಪಾಡು ಮಾಡಬೇಕು. 2014ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಭೌತಿಕ ಸರ್ವೇಯನ್ನು ಮೂಲಾಧಾರವಾಗಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಪಶ್ಚಿಮಘಟ್ಟ ಪ್ರದೇಶದ ಬಗರ್‌ಹುಕುಂ ರೈತರು, ಕೃಷಿ ಕಾರ್ಮಿಕರು, ಖಾತೆದಾರರು ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಜನರ ಬದುಕಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, “ನಿಮ್ಮ ಹೋರಾಟ ಮುಂದುವರಿಯಲಿ, ನಾವು ನಿಮ್ಮ ಜೊತೆಗಿದ್ದೇವೆ” ಎಂಬ ಭರವಸೆ ಮುಖ್ಯಮಂತ್ರಿಗಳಿಂದ ದೊರೆತ ನಂತರವೇ ಹೋರಾಟ ಆರಂಭಿಸಲಾಗಿದೆ ಎಂದು ಮಂಜುನಾಥ ಗೌಡ ಹೇಳಿದರು.
ವಿಶೇಷ ಅಧಿವೇಶನ ಕರೆದಿರುವುದಕ್ಕೆ ಸಿಎಂಗೆ ಧನ್ಯವಾದ
ಕಸ್ತೂರಿ ರಂಗನ್ ವರದಿ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ವಿಶೇಷ ಅಧಿವೇಶನ ಕರೆದು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಮುಂದಾಗಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದರು.
“ಪಶ್ಚಿಮಘಟ್ಟದ ಜನರ ಪರವಾಗಿ ಸರ್ಕಾರ ನಿಂತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಮುಂದೆಯೂ ಹೋರಾಟ ಮುಂದುವರಿಯಲಿದೆ,” ಎಂದರು.
ಸೆ.5ರಂದು ತೀರ್ಥಹಳ್ಳಿಯಲ್ಲಿ ಮತ್ತೊಂದು ಬೃಹತ್ ಪಾದಯಾತ್ರೆ
ಸೆಪ್ಟೆಂಬರ್ 5ರಂದು ತೀರ್ಥಹಳ್ಳಿಯ ಉಂಟೂರುಕಟ್ಟೆ ಕೈಮರದಿಂದ ಮತ್ತೊಂದು ಬೃಹತ್ ಪಾದಯಾತ್ರೆ ನಡೆಯಲಿದೆ ಎಂದು ಮಂಜುನಾಥ ಗೌಡ ತಿಳಿಸಿದರು.
ಈ ಪಾದಯಾತ್ರೆಯಲ್ಲಿ ಪಶ್ಚಿಮಘಟ್ಟ ಪ್ರದೇಶದ ರೈತರು, ಕೃಷಿ ಕಾರ್ಮಿಕರು, ಬಗರ್‌ಹುಕುಂ ಸಾಗುವಳಿದಾರರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಬಳಿಕ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
‘ಸಾವಿರಾರು ಆಕ್ಷೇಪಣೆ ಸಲ್ಲಿಕೆ’
ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ‘Save Farmers’ ಹೆಸರಿನ ವೆಬ್‌ಸೈಟ್ ಮತ್ತು ಆ್ಯಪ್‌ನ್ನು ಬಿಡುಗಡೆ ಮಾಡಲಾಗಿದೆ. ಇದರ ಮೂಲಕ ಈಗಾಗಲೇ ಸಾವಿರಾರು ರೈತರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ನಿನ್ನೆವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದ್ದು, ವೈಯಕ್ತಿಕ ಆಕ್ಷೇಪಣೆಗಳ ಜೊತೆಗೆ ಸಹಕಾರಿ ಸಂಸ್ಥೆಗಳ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸುವ ಉದ್ದೇಶವಿದೆ ಎಂದರು.
ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಸುಮಾರು 1.20 ಲಕ್ಷ ರೈತರಿದ್ದು, ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಸುಮಾರು 7 ಲಕ್ಷ ಸಹಕಾರಿಗಳಿದ್ದಾರೆ. ಸುಮಾರು 900ರಿಂದ 1,000 ಸಹಕಾರಿ ಸಂಸ್ಥೆಗಳ ಮೂಲಕ ಪಶ್ಚಿಮಘಟ್ಟದ ರೈತರು, ಕೃಷಿ ಕಾರ್ಮಿಕರು ಹಾಗೂ ನಿವಾಸಿಗಳ ಪರವಾಗಿ ಆಕ್ಷೇಪಣೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
‘ಪಶ್ಚಿಮಘಟ್ಟದ ಜನರ ಉಳಿವು-ಅಳಿವಿನ ಪ್ರಶ್ನೆ’
ಹೊಸನಗರ, ಸಾಗರ, ತೀರ್ಥಹಳ್ಳಿ ಭಾಗದ ಜನರು ಶರಾವತಿ, ಲಿಂಗನಮಕ್ಕಿ, ಮಡೇನೂರು, ಚಕ್ರ, ಸಾವೇಹಕ್ಲು, ಮಾಣಿ ಸೇರಿದಂತೆ ಹಲವು ಮುಳುಗಡೆ ಯೋಜನೆಗಳಿಂದ ಈಗಾಗಲೇ ಭೂಮಿ ಕಳೆದುಕೊಂಡಿದ್ದಾರೆ. ಮತ್ತೊಮ್ಮೆ ಕಸ್ತೂರಿ ರಂಗನ್ ವರದಿ ಮೂಲಕ ಜನರಿಗೆ ಗಂಭೀರ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಹೋರಾಟ ನಡೆಸಲಾಗುತ್ತಿದೆ ಎಂದು ಮಂಜುನಾಥ ಗೌಡ ಹೇಳಿದರು.
“ಇದು ರಾಜಕೀಯದ ಪ್ರಶ್ನೆಯಲ್ಲ. ಈ ಭಾಗದ ಜನರ ಉಳಿವು-ಅಳಿವಿನ ಪ್ರಶ್ನೆ. ಸಾರ್ವಜನಿಕ ಬದುಕಿನ ಪ್ರಶ್ನೆಯಾಗಿ ನಾವು ಹೋರಾಟ ಮಾಡುತ್ತಿದ್ದೇವೆ,” ಎಂದು ಅವರು ಹೇಳಿದರು.
‘ಈಗಿನ ರೂಪದಲ್ಲಿ ವರದಿ ಒಪ್ಪಲು ಸಾಧ್ಯವಿಲ್ಲ’
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಎಲ್ಲಾ ಪಕ್ಷಗಳ ಮುಖಂಡರು ಹಾಗೂ ಸಹಕಾರಿಗಳು ಒಗ್ಗೂಡಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ ಎಂದರು.
“ಈಗಿನ ಸ್ಥಿತಿಯಲ್ಲಿ ವರದಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಕರ್ನಾಟಕಕ್ಕೆ ಇದು ಮಾರಕವಾಗಲಿದೆ. ರೈತರ ಕೃಷಿ ಚಟುವಟಿಕೆಗಳು, ಶಾಲೆ-ಕಾಲೇಜುಗಳು, ಹಳ್ಳಿಗಳು ಸೇರಿದಂತೆ ಜನಜೀವನಕ್ಕೆ ತೊಂದರೆಯಾಗುವ ರೀತಿಯಲ್ಲಿ ವರದಿ ಜಾರಿಯಾಗಬಾರದು,” ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕಳೆದ 16 ವರ್ಷಗಳಿಂದ ವಿವಿಧ ಹಂತಗಳಲ್ಲಿ ಹೋರಾಟಗಳು ನಡೆಯುತ್ತಿವೆ. ಈ ಅವಧಿಯಲ್ಲಿ ಏಳು ಬಾರಿ ಕರಡು ಅಧಿಸೂಚನೆಗಳು ಹೊರಬಂದಿವೆ ಎಂದು ಅವರು ತಿಳಿಸಿದರು.
‘ಕೇರಳ ಮಾದರಿ ಅನುಸರಿಸಲಿ’
ಕೇರಳ ಮಾದರಿಯಲ್ಲಿ ಪಶ್ಚಿಮಘಟ್ಟ ಪ್ರದೇಶವನ್ನು ಗುರುತಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹರತಾಳು ಹಾಲಪ್ಪ ಒತ್ತಾಯಿಸಿದರು.
ಕೇರಳದಲ್ಲಿ ಅರಣ್ಯ, ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಜನವಸತಿ ಪ್ರದೇಶಗಳನ್ನು ಪರಿಗಣಿಸುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಜನಜೀವನದ ನಡುವೆ ಸಮತೋಲನ ಸಾಧಿಸಲಾಗಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅಧ್ಯಯನ ಮಾಡಿ ಅಳವಡಿಸಬೇಕು ಎಂದರು.
ಕರ್ನಾಟಕದ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಪ್ರದೇಶವನ್ನು ಕಡಿಮೆಗೊಳಿಸಿ, ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಕೈಬಿಟ್ಟು, ಕೋರ್ ಅರಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಮಲೆನಾಡಿನ ರೈತರ ಬದುಕನ್ನು ಕಸಿದುಕೊಂಡು ಕಸ್ತೂರಿ ರಂಗನ್ ವರದಿಯನ್ನು ಬೆಳೆಸಬಾರದು. ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರು ಸಹಜ ಬದುಕು ನಡೆಸಲು ಅವಕಾಶ ಮಾಡಿಕೊಡಬೇಕು,” ಎಂದು ಹರತಾಳು ಹಾಲಪ್ಪ ಹೇಳಿದರು.
ಪಾದಯಾತ್ರೆ ಮತ್ತು ಬಹಿರಂಗ ಸಭೆಯಲ್ಲಿ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಸೇರಿದಂತೆ ವಿವಿಧ ಮುಖಂಡರು, ಸಹಕಾರಿ ಕ್ಷೇತ್ರದ ಪ್ರಮುಖರು, ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
