SUDDILIVE || THIRTHAHALLI
ಕಸ್ತೂರಿರಂಗನ್ ವರದಿಯ ಸಂವಾದ ಕಾರ್ಯಕ್ರಮ ರಾಜಕೀಯ ಮೇಲಾಟದ ವೇದಿಕೆಯಾಯಿತೇ?Has the Kasturirangan Report become a platform for political debate?
ಶಿಷ್ಟಾಚಾರ, ವಂದೇ ಮಾತರಂ ಸುತ್ತ ಡ್ರಾಮಾ-ಹೈಡ್ರಾಮಾ; ಕಸ್ತೂರಿರಂಗನ್ ವರದಿ ಕುರಿತು ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ
ತೀರ್ಥಹಳ್ಳಿ: ತೀರ್ಥಹಳ್ಳಿಯ ಡಾ. ಯು.ಆರ್. ಅನಂತಮೂರ್ತಿ ಅವರ ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೂ, ಕಾರ್ಯಕ್ರಮದ ಸ್ವರೂಪ ರಾಜಕೀಯ ಪಕ್ಷಗಳ ಮೇಲಾಟದ ವೇದಿಕೆಯಾಗಿ ಮಾರ್ಪಟ್ಟಿತೇ ಎಂಬ ಚರ್ಚೆಗೆ ಕಾರಣವಾಗಿದೆ. ಕೆಲ ರಾಜಕೀಯ ಬೆಳವಣಿಗೆಗಳು, ಕಾರ್ಯಕ್ರಮದ ಶಿಷ್ಟಾಚಾರ ಹಾಗೂ ವಂದೇ ಮಾತರಂ ವಿಚಾರ ಚರ್ಚೆಯ ಕೇಂದ್ರಬಿಂದುವಾಗಿ, ಕಾರ್ಯಕ್ರಮ ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಯಂತೆಯೂ ಕಂಡುಬಂದಿತು.
ಕಸ್ತೂರಿರಂಗನ್ ವರದಿ ಕುರಿತು ನಡೆದ ಸಂವಾದ ಕಾರ್ಯಕ್ರಮ ಎರಡೂ ಪಕ್ಷಗಳಿಗೂ ರಾಜಕೀಯ ವೇದಿಕೆಯಾದಂತೆ ಕಂಡುಬಂದಿತು. ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರು, ಕಸ್ತೂರಿರಂಗನ್ ವರದಿಯಲ್ಲಿರುವ ಗ್ರಾಮಗಳನ್ನು ಅಧಿಕಾರಿಗಳ ಮೂಲಕ ಬಯಾಲಾಜಿಕಲ್ ಸರ್ವೆ ನಡೆಸಿಸಿ ಕೈಬಿಡಬೇಕು ಎಂಬ ಒತ್ತಾಯವನ್ನು ಮುಂದಿಟ್ಟರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಹಾಗೂ ಇತರ ನಾಯಕರು ಸಂಸದರನ್ನೇ ಗುರಿಯಾಗಿಸಿಕೊಂಡು ಮಾತನಾಡಿದರು. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರಿಗೆ ಇದು ರಾಜಕೀಯ ವಾಗ್ವಾದದ ಜೊತೆಗೆ ಒಂದು ರೀತಿಯಲ್ಲಿ ಮನರಂಜನೆಯ ಕಾರ್ಯಕ್ರಮವೂ ಆಗಿತ್ತು.
ಕಸ್ತೂರಿರಂಗನ್ ವರದಿ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗಲಿಲ್ಲ
ಇನ್ನೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಸ್ತೂರಿರಂಗನ್ ವರದಿಯನ್ನು ಪರೋಕ್ಷವಾಗಿ ಕಾನೂನಿನ ಅಡಿಯಲ್ಲೇ ನೋಡುವುದಾಗಿ ಹೇಳಿರುವುದು, ವರದಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಇನ್ನೂ ಡೋಲಾಯಮಾನವಾಗಿಯೇ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ರಾಜಕಾರಣಿಗಳು ಬಡಿದಾಡಿಕೊಂಡ ರೀತಿಯ ವಿರೋಧ ಸ್ಪಷ್ಟವಾಗಿ ವ್ಯಕ್ತವಾಗಲಿಲ್ಲ. ಅದೇ ರೀತಿ ಕೇರಳ ಸರ್ಕಾರ ಕೈಗೊಂಡಿರುವ ತೀರ್ಮಾನದಂತೆ ಕರ್ನಾಟಕವೂ ನಡೆದುಕೊಳ್ಳಲಿದೆ ಅಥವಾ ಅದಕ್ಕಿಂತಲೂ ಮಿಗಿಲಾದ ಕ್ರಮ ಕೈಗೊಳ್ಳಲಿದೆ ಎಂಬ ಸ್ಪಷ್ಟ ಭರವಸೆಯೂ ಸಿಗಲಿಲ್ಲ. ಹೀಗಾಗಿ ಕಸ್ತೂರಿರಂಗನ್ ವರದಿಯ ಕುರಿತ ಜಟಾಪಟಿ ಮುಂದುವರಿಯುವ ಸೂಚನೆ ಇದೇ ವೇದಿಕೆಯಿಂದ ಕಂಡುಬಂದಂತಾಗಿದೆ.
ಇದರ ಹೊರತಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತಿನಲ್ಲಿ ತೇಗದ ಸಿರಿ ಯೋಜನೆ, ಅಕ್ರಮ-ಸಕ್ರಮ ಯೋಜನೆಗಳು ಹಾಗೂ ಕಸ್ತೂರಿರಂಗನ್ ವರದಿಯ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎಂಬುದರ ಕುರಿತು ಸ್ಪಷ್ಟವಾದ ನಿಲುವು ಕೇಳಿಬರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಶಿಷ್ಟಾಚಾರ ಕಾಪಾಡುವಲ್ಲಿ ಜಿಲ್ಲಾಡಳಿತ ವಿಫಲ?
ಇನ್ನೂ ಕಸ್ತೂರಿರಂಗನ್ ವರದಿ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಕಾಪಾಡಿಕೊಳ್ಳುವ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿತ್ತು ಎಂಬ ಟೀಕೆ ಕೇಳಿಬಂದಿದೆ.
ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಶಿಷ್ಟಾಚಾರವನ್ನು ನಿರೀಕ್ಷಿಸುವುದೇ ದೊಡ್ಡ ಭ್ರಮೆ ಎಂಬುದನ್ನು ಈ ಕಾರ್ಯಕ್ರಮ ಕೈಗನ್ನಡಿಯಂತೆ ತೋರಿಸಿದೆ ಎಂಬ ಮಾತುಗಳು ಕೇಳಿಬಂದವು. ಕಸ್ತೂರಿರಂಗನ್ ವರದಿ ಕುರಿತು ನಡೆಯಬೇಕಿದ್ದ ಸಂವಾದ ಕಾರ್ಯಕ್ರಮವು ಆಡಳಿತಾರೂಢ ಪಕ್ಷದ ಕಾರ್ಯಕ್ರಮ VS ಪ್ರತಿಪಕ್ಷಗಳ ಕಾರ್ಯಕ್ರಮ ಎಂಬ ರೀತಿಯಲ್ಲಿ ವಿಭಜನೆಯಾದಂತೆ ಕಂಡುಬಂದಿತು.
ಆಡಳಿತಾರೂಢ ಪಕ್ಷದ ಶಾಸಕರು, ಸಚಿವರು ಹಾಗೂ ಮಾಜಿ ಸಚಿವರು ಸಂಸದರನ್ನು ಗುರಿಯಾಗಿಸಿಕೊಂಡು ಮಾತನಾಡಿದಂತೆ ಕಂಡುಬಂದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಕೂಡ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಹೀಗಾಗಿ ಕಸ್ತೂರಿರಂಗನ್ ವರದಿಯ ಮೂಲ ಉದ್ದೇಶವಾದ ರೈತರ ಹಾಗೂ ಪಶ್ಚಿಮಘಟ್ಟ ಪ್ರದೇಶದ ಜನರ ಸಮಸ್ಯೆಗಳ ಚರ್ಚೆಗಿಂತ ರಾಜಕೀಯ ವಾಗ್ವಾದವೇ ಹೆಚ್ಚು ಪ್ರಾಧಾನ್ಯ ಪಡೆದಂತೆ ಕಂಡುಬಂದಿತು.
“Supreme Court is not Supreme, Parliament is Supreme” ಹೇಳಿಕೆ
ಮಾಜಿ ಸಚಿವರೊಬ್ಬರು “Supreme Court is not Supreme, Parliament is Supreme” ಎಂಬ ಡೈಲಾಗ್ ಅನ್ನು ಸಂಸದರ ವಿರುದ್ಧ ಬಳಸಿದರು. ಒಂದು ಲೆಕ್ಕದಲ್ಲಿ ಇದು ರಾಜಕೀಯ ವಾಗ್ವಾದದ ಭಾಗವಾಗಿ ಒಪ್ಪಿಕೊಳ್ಳಬಹುದಾದರೂ, ಇದೇ ಹೇಳಿಕೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಗಾಡ್ಗಿಲ್ ವರದಿ 2011ರಲ್ಲಿ ಸಂಸತ್ ಮುಂದೆ ಬಂದಾಗ ಆಗಿನ ಯುಪಿಎ ಸರ್ಕಾರ ಸಂಸತ್‌ನಲ್ಲಿ ಏನು ಮಾಡುತ್ತಿತ್ತು? ಎಂಬ ಪ್ರಶ್ನೆಯನ್ನು ಈ ಹೇಳಿಕೆ ಮೂಲಕ ಉದ್ಭವಿಸುವಂತೆ ಮಾಡಲಾಗಿದೆ. ಪಕ್ಷಾತೀತವಾಗಿ ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಕೈಬಿಡುವಂತೆ ಮಾಡೋಣ ಎಂಬ ಒಗ್ಗಟ್ಟಿನ ಕೂಗು ಎಲ್ಲೂ ಕೇಳಿ ಬರಲಿಲ್ಲ
ವಂದೇ ಮಾತರಂ ವಿಚಾರವೂ ರಾಜಕೀಯ ಜಟಾಪಟಿಗೆ ಕಾರಣ
ಇನ್ನು ಕಾರ್ಯಕ್ರಮದಲ್ಲಿ ವಂದೇ ಮಾತರಂ ವಿಚಾರವೂ ರಾಜಕೀಯ ಜಟಾಪಟಿಗೆ ಕಾರಣವಾಯಿತು. ವಂದೇ ಮಾತರಂ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ನಡೆದ ಬೆಳವಣಿಗೆಗಳು ಡ್ರಾಮಾ-ಹೈಡ್ರಾಮಾ ರೂಪ ಪಡೆದವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಯಾವಾಗಲೂ ಸಂವಿಧಾನ ಮತ್ತು ಕಾನೂನುಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ, ವಂದೇ ಮಾತರಂ ವಿಚಾರದಲ್ಲಿ ಎರಡು ಸಾಲಿನ ಹಾಡನ್ನ ಹಾಡುವ ಬಗ್ಗೆ ಕ್ಷಮೆ ಕೇಳುವಂತಾಗಿದೆ ಎಂಬ ಟೀಕೆಯೂ ಕೇಳಿಬಂದಿದೆ.
ಹೀಗಾಗಿ ಕಸ್ತೂರಿರಂಗನ್ ವರದಿ ಕುರಿತು ರೈತರೊಂದಿಗೆ ನಡೆಯಬೇಕಿದ್ದ ಸಂವಾದ ಕಾರ್ಯಕ್ರಮವು ಅಂತಿಮವಾಗಿ ರಾಜಕೀಯ ಪಕ್ಷಗಳ ಮೇಲಾಟದ ವೇದಿಕೆಯಾಗಿ ಪರಿಣಮಿಸಿದಂತಾಗಿದೆ ಎಂಬ ಚರ್ಚೆ ಇದೀಗ ಆರಂಭವಾಗಿದೆ.
ಕೇಂದ್ರ-ರಾಜ್ಯ ನಿಲುವಿನ ಗೊಂದಲವೂ ಮುಂದುವರಿಕೆ
ಇದರ ನಡುವೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ, ರಾಜ್ಯ ಸರ್ಕಾರದ ನಿಲುವು ತಪ್ಪು ಎಂದು ಸ್ಪಷ್ಟವಾಗಿ ಹೇಳಿ, ರಾಜ್ಯ ಸರ್ಕಾರಕ್ಕೆ ಸೂಕ್ತ ಸಂದೇಶ ನೀಡದ ಸ್ಥಿತಿಯಲ್ಲೂ ಇಲ್ಲವಾದ ಕಾರಣ ಈ ಎಲ್ಲ ಡ್ರಾಮಾ-ಹೈಡ್ರಾಮಾಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಕಸ್ತೂರಿರಂಗನ್ ವರದಿ ಕುರಿತು ರೈತರು ಮತ್ತು ಪಶ್ಚಿಮಘಟ್ಟ ಪ್ರದೇಶದ ಜನರ ಆತಂಕಗಳಿಗೆ ಸ್ಪಷ್ಟ ಪರಿಹಾರ ಅಥವಾ ಸರ್ಕಾರದ ಖಚಿತ ನಿಲುವು ದೊರೆಯಬೇಕಿದ್ದ ವೇದಿಕೆಯಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ, ಶಿಷ್ಟಾಚಾರದ ಪ್ರಶ್ನೆ ಹಾಗೂ ವಂದೇ ಮಾತರಂ ವಿಚಾರವೇ ಹೆಚ್ಚಿನ ಗಮನ ಸೆಳೆದವು. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ತೇಗದ ಸಿರಿ, ಅಕ್ರಮ-ಸಕ್ರಮ ಹಾಗೂ ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಸರ್ಕಾರದ ಮುಂದಿನ ಸ್ಪಷ್ಟ ನಿಲುವಿನ ಬಗ್ಗೆ ನಿರೀಕ್ಷಿತ ಮಟ್ಟದ ಸ್ಪಷ್ಟತೆ ಸಿಗಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಕಸ್ತೂರಿರಂಗನ್ ವರದಿಯ ಕುರಿತ ರಾಜಕೀಯ ಜಟಾಪಟಿ ಮುಂದುವರಿಯುವ ಸಾಧ್ಯತೆಯ ಸೂಚನೆ ತೀರ್ಥಹಳ್ಳಿಯ ಈ ಸಂವಾದ ಕಾರ್ಯಕ್ರಮದಿಂದಲೇ ಗೋಚರಿಸಿದಂತಾಗಿದೆ.
