SUDDILIVE || SHIVAMOGGA
ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಪರೀಕ್ಷೆ: ಬಸ್ ನಿಲ್ದಾಣದಲ್ಲೇ ವಿಶ್ರಾಂತಿ ಪಡೆದು ಪರೀಕ್ಷೆ ಬರೆದ ಅಭ್ಯರ್ಥಿಗಳು- KSRP Constable Exam: Candidates took a break at the bus stop and wrote the exam
ಶಿವಮೊಗ್ಗ: ಕೆಎಸ್‌ಆರ್‌ಪಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆ ಬರೆಯಲು ವಿವಿಧ ಜಿಲ್ಲೆ ಹಾಗೂ ಭಾಗಗಳಿಂದ ಅಭ್ಯರ್ಥಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ಪರೀಕ್ಷೆಗೂ ಮುನ್ನ ಕೆಲವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ವಿಶ್ರಾಂತಿ ಪಡೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸೆಪ್ಟೆಂಬರ್ 20ರಂದು ನಡೆದ ಪರೀಕ್ಷೆ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಶಿವಮೊಗ್ಗಕ್ಕೆ ಆಗಮಿಸಿದ ಅಭ್ಯರ್ಥಿಗಳು ವಸತಿ ಸೇರಿದಂತೆ ವಿವಿಧ ಸಮಸ್ಯೆಗಳ ನಡುವೆಯೂ ಪರೀಕ್ಷೆಗೆ ಹಾಜರಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಅಭ್ಯರ್ಥಿಗಳ ದೃಶ್ಯಗಳು ಗಮನ ಸೆಳೆದಿದ್ದು, ಸರ್ಕಾರಿ ಉದ್ಯೋಗದ ಕನಸಿಗಾಗಿ ಅಭ್ಯರ್ಥಿಗಳು ಅನುಭವಿಸಿದ ಪ್ರಯಾಸದ ಚಿತ್ರಣವಾಗಿದೆ.
ಶಿವಮೊಗ್ಗ ನಗರ ಮತ್ತು ಭದ್ರಾವತಿ ನಗರದ ಒಟ್ಟು 34 ಶಾಲಾ-ಕಾಲೇಜುಗಳಲ್ಲಿ RPC NKK ವೃಂದದ ಕೆಎಸ್‌ಆರ್‌ಪಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆ ಆಯೋಜಿಸಲಾಗಿತ್ತು. ಇದರ ಜೊತೆಗೆ RPC KK ವೃಂದದ ಲಿಖಿತ ಪರೀಕ್ಷೆಯನ್ನು ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಗೆ RPC NKK ವೃಂದಕ್ಕೆ ನಿಗದಿಯಾಗಿದ್ದ ಒಟ್ಟು 11,712 ಅಭ್ಯರ್ಥಿಗಳ ಪೈಕಿ 9,380 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. RPC KK ವೃಂದದಲ್ಲಿ ನಿಗದಿಯಾಗಿದ್ದ 4,118 ಅಭ್ಯರ್ಥಿಗಳ ಪೈಕಿ 3,478 ಮಂದಿ ಪರೀಕ್ಷೆ ಬರೆದಿದ್ದಾರೆ. ಎರಡೂ ವೃಂದಗಳಲ್ಲಿ ಒಟ್ಟು 12,858 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಪರೀಕ್ಷೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುವಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು.
ಪರೀಕ್ಷಾ ಕೇಂದ್ರಗಳ ಸುರಕ್ಷತೆ, ಸುತ್ತಮುತ್ತಲಿನ ಭದ್ರತೆ ಹಾಗೂ ಅಭ್ಯರ್ಥಿಗಳ ಫ್ರಿಸ್ಕಿಂಗ್‌ಗಾಗಿ 9 ಡಿವೈಎಸ್‌ಪಿ, 34 ಪಿಐ, 34 ಪಿಎಸ್‌ಐ, 4 ಎಎಸ್‌ಐ ಹಾಗೂ 135 ಹೆಡ್ ಕಾನ್‌ಸ್ಟೇಬಲ್/ಪೊಲೀಸ್ ಕಾನ್‌ಸ್ಟೇಬಲ್‌ಗಳು ಸೇರಿ ಒಟ್ಟು 216 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
![]() |
| ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ನಗರದ KSRTC ಬಸ್ ನಿಲ್ದಾಣದಲ್ಲಿ ಮಲಗಿರುವ ದೃಶ್ಯ |
ಪರೀಕ್ಷಾ ಕೇಂದ್ರಗಳಲ್ಲಿ ಗಡಿಯಾರ, ಜಾಮರ್, ಗಾಳಿ-ಬೆಳಕು, ಕುಡಿಯುವ ನೀರು, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಪರೀಕ್ಷೆಯ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಎಲ್ಲ ಪರೀಕ್ಷಾ ಕೊಠಡಿಗಳಲ್ಲೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಲಿಖಿತ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪರೀಕ್ಷೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಧನ್ಯವಾದ ಸಲ್ಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆ ಶುಭಾಶಯಗಳನ್ನು ತಿಳಿಸಿದೆ.
ಇದರ ನಡುವೆ, ಪರೀಕ್ಷೆಗಾಗಿ ದೂರದ ಊರುಗಳಿಂದ ಆಗಮಿಸಿ ಬಸ್ ನಿಲ್ದಾಣದಲ್ಲೇ ಮಲಗಿ ವಿಶ್ರಾಂತಿ ಪಡೆದು ಪರೀಕ್ಷೆ ಬರೆದ ಅಭ್ಯರ್ಥಿಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉದ್ಯೋಗದ ಕನಸಿಗಾಗಿ ಅಭ್ಯರ್ಥಿಗಳು ಪಟ್ಟಿರುವ ಶ್ರಮ ಮತ್ತು ಸಂಕಷ್ಟಕ್ಕೆ ಸಾಕ್ಷಿಯಾಗಿವೆ.


