SUDDILIVE || SHIVAMOGGA
ಕುವೆಂಪು ವಿವಿ ಫಲಿತಾಂಶ ಸಮಸ್ಯೆ: NSUIಯಿಂದ ಕುಲಸಚಿವರಿಗೆ ಮನವಿ, ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ-Kuvempu University result issue: NSUI appeals to the Registrar, warns of agitation if the issue is not resolved
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶ ಪ್ರಕಟಣೆ, ಮರುಮೌಲ್ಯಮಾಪನ, ಅಂಕಪಟ್ಟಿ ಹಾಗೂ UCMS ಪೋರ್ಟಲ್‌ಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ಪ್ರತಿಭಟಿಸಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿದೆ.
ಕುವೆಂಪು ವಿಶ್ವವಿದ್ಯಾಲಯದ ಶಂಕರಘಟ್ಟ ಆವರಣದಲ್ಲಿನ ಪರೀಕ್ಷೆ ಮತ್ತು ಫಲಿತಾಂಶ ವ್ಯವಸ್ಥೆಯಲ್ಲಿ ಹಲವು ಲೋಪಗಳು ಕಂಡುಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ ಎಂದು NSUI ಆರೋಪಿಸಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ‘Absent’ ಎಂದು ತೋರಿಸುವುದು, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ, ಅಂಕಗಳಲ್ಲಿ ವ್ಯತ್ಯಾಸ, ಡಿಜಿಟಲ್ ಮೌಲ್ಯಮಾಪನದಲ್ಲಿನ ದೋಷಗಳು, UCMS ಪೋರ್ಟಲ್‌ನ ತಾಂತ್ರಿಕ ಸಮಸ್ಯೆಗಳು ಹಾಗೂ ಮರುಮೌಲ್ಯಮಾಪನ ಮತ್ತು ಮರುಎಣಿಕೆ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ನಿರಂತರ ದೂರುಗಳು ಬರುತ್ತಿವೆ ಎಂದು ಸಂಘಟನೆ ತಿಳಿಸಿದೆ.
ಈ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಹಂತಕ್ಕೆ ಪ್ರವೇಶ ಪಡೆಯುವುದು, ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ವಿವಿಧ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ತೊಂದರೆ ಎದುರಿಸುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮತ್ತು ಫಲಿತಾಂಶ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ಸಮಯಪಾಲನೆ ಕಾಪಾಡಬೇಕು ಎಂದು NSUI ಒತ್ತಾಯಿಸಿದೆ.
NSUIಯ ಪ್ರಮುಖ ಬೇಡಿಕೆಗಳು
ಪರೀಕ್ಷಾ ಫಲಿತಾಂಶಗಳನ್ನು ನಿಗದಿತ ಸಮಯಕ್ಕೆ ಪ್ರಕಟಿಸಬೇಕು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ‘Absent’ ಎಂದು ತೋರಿಸುವ ದೋಷವನ್ನು ತಕ್ಷಣ ಸರಿಪಡಿಸಬೇಕು. ಫಲಿತಾಂಶದಲ್ಲಿನ ಅಂಕಗಳ ವ್ಯತ್ಯಾಸಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಅದೇ ರೀತಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ನಿವಾರಿಸಿ, UCMS ಪೋರ್ಟಲ್‌ನಲ್ಲಿ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮರುಮೌಲ್ಯಮಾಪನ ಹಾಗೂ ಮರುಎಣಿಕೆ ಫಲಿತಾಂಶಗಳನ್ನು ಯಾವುದೇ ವಿಳಂಬವಿಲ್ಲದೆ ಪ್ರಕಟಿಸಬೇಕು. ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಒದಗಿಸಬೇಕು. ಪರೀಕ್ಷಾ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು NSUI ಒತ್ತಾಯಿಸಿದೆ.
ಪರೀಕ್ಷಾ ವೇಳಾಪಟ್ಟಿ ಮತ್ತು ಇತರೆ ಪರೀಕ್ಷಾ ಮಾಹಿತಿಯನ್ನು ಮುಂಚಿತವಾಗಿ ಪ್ರಕಟಿಸಬೇಕು. ಫಲಿತಾಂಶ ಪ್ರಕಟಿಸುವ ಮುನ್ನ ಸಂಪೂರ್ಣ ಪರಿಶೀಲನೆ ನಡೆಸಿ, ಯಾವುದೇ ತಪ್ಪುಗಳಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪರೀಕ್ಷೆ ಮತ್ತು ಫಲಿತಾಂಶಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ದೂರುಗಳನ್ನು ಸ್ವೀಕರಿಸಿ, ನಿಗದಿತ ಅವಧಿಯೊಳಗೆ ಪರಿಹರಿಸಲು ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು ಎಂದು NSUI ತಿಳಿಸಿದೆ.
ಮರುಮೌಲ್ಯಮಾಪನ ಶುಲ್ಕ ಮರುಪಾವತಿಗೆ ಆಗ್ರಹ
ಮರುಮೌಲ್ಯಮಾಪನದ ಬಳಿಕ ವಿದ್ಯಾರ್ಥಿಗಳ ಅಂಕಗಳು ಹೆಚ್ಚಾದ ಸಂದರ್ಭಗಳಲ್ಲಿ ನಿಯಮಾನುಸಾರ ಮರುಮೌಲ್ಯಮಾಪನ ಶುಲ್ಕವನ್ನು ಅರ್ಹ ವಿದ್ಯಾರ್ಥಿಗಳಿಗೆ ಮರುಪಾವತಿಸಬೇಕು ಎಂದು NSUI ಆಗ್ರಹಿಸಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಿ, ಅರ್ಹರಿಗೆ ಶುಲ್ಕ ಮರುಪಾವತಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಪರೀಕ್ಷಾ ಫಲಿತಾಂಶದಲ್ಲಿನ ದೋಷಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶ್ವವಿದ್ಯಾಲಯ ಆಡಳಿತ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಪರಿಹರಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದೆ ವಿಶ್ವವಿದ್ಯಾಲಯ ಆಡಳಿತ ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸೇರಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ NSUI ಎಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಕುವೆಂಪು ವಿಶ್ವವಿದ್ಯಾಲಯ ಬಂದ್‌ಗೆ ಕರೆ ನೀಡುವಂತಹ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ.
ಕುವೆಂಪು ವಿಶ್ವವಿದ್ಯಾಲಯಕ್ಕೆ ದಿಕ್ಕಾರ ಕೂಗಬೇಡಿ
ಮನವಿ ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಡೆಪ್ಯೂಟಿ ರಿಜಿಸ್ಟಾರ್ ಗಿರೀಶ್ ಒಂದು ತಿಂಗಳು ಕಾಲಾವಾಕಾಶ ಕೋರಿದ್ದು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಬಗೆಹರಿಸಿದರು. ಆದರೆ ಮಾತು ಕೇಳದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಆಬ್ಸೆಂಟ್ ಅಂತ ಬಂದರೆ ವೆಬ್ ಸೈಟ್ ನಲ್ಲಿ 50% ಅಂತ ಬರುತ್ತದೆ. ಇದನ್ನ ಸಮಸ್ಯೆ ಬಗೆಹರಿಸಿ ನಿಮ್ಮಮಕ್ಕಳಾಗಿದ್ದರೆ ಹೀಗೆ ಮಾಡ್ತಾ ಇದ್ದೀರಾ ಎಂದು ದೂರಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು ಕುವೆಂಪು ವಿವಿಗೆ ದಿಕ್ಕಾರ ಕೂಗಬೇಡಿ ಅಧಿಕಾರಿಗಳಿಗೆ ದಿಕ್ಕಾರ ಎನ್ನಿ ಸರಿಪಡಿಸುವುದಾಗಿ ಮನವಿ ಮಾಡಿಕೊಂಡರು.
ಶಿವಮೊಗ್ಗ ಜಿಲ್ಲಾ NSUI ಅಧ್ಯಕ್ಷ ವಿಜಯಕುಮಾರ್ ಎಸ್.ಎನ್. ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿಶ್ವವಿದ್ಯಾಲಯ ಆಡಳಿತವನ್ನು ಒತ್ತಾಯಿಸಲಾಗಿದೆ.

